ADVERTISEMENT

ಚಿಕ್ಕಬಳ್ಳಾಪುರ | ರೇಷ್ಮೆ ಗೂಡು ಧಾರಣೆ ಏರಿಕೆ; ಬೆಳೆಗಾರರ ಮುಖದಲ್ಲಿ ಮಂದಹಾಸ

ಎಂ.ರಾಮಕೃಷ್ಣಪ್ಪ
Published 11 ಸೆಪ್ಟೆಂಬರ್ 2024, 4:11 IST
Last Updated 11 ಸೆಪ್ಟೆಂಬರ್ 2024, 4:11 IST
ಚಿಂತಾಮಣಿ ಮಾರುಕಟ್ಟೆಗೆ ತಂದಿರುವ ರೇಷ್ಮೆಗೂಡು
ಚಿಂತಾಮಣಿ ಮಾರುಕಟ್ಟೆಗೆ ತಂದಿರುವ ರೇಷ್ಮೆಗೂಡು   

ಚಿಂತಾಮಣಿ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರೇಷ್ಮೆ ಮತ್ತು ಹೈನುಗಾರಿಕೆ ರೈತರ ಜೀವನಾಡಿಯಾಗಿವೆ. ಬಹುತೇಕ ರೈತರು ರೇಷ್ಮೆ ಮತ್ತು ಹೈನುಗಾರಿಕೆಯಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ರೇಷ್ಮೆ ಗೂಡಿನ ಬೆಲೆ ಕುಸಿತದಿಂತ ಸಂಕಷ್ಟಕ್ಕೆ ಈಡಾಗಿ ರೇಷ್ಮೆ ಕೃಷಿಯಿಂದಲೇ ಹಿಂದೆ ಸರಿಯುತ್ತಿದ್ದ ರೈತರ ಪಾಲಿಗೆ ಗೂಡಿನ ಧಾರಣೆ ಏರಿಕೆಯಾಗುತ್ತಿರುವುದು ವರದಾನವಾಗಿದೆ. ಮಂಗಳವಾರ ನಗರದ ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಕೆ.ಜಿಗೆ ₹587ಕ್ಕೆ ಮಾರಾಟವಾಗಿದೆ.

ಚಿಂತಾಮಣಿ ತಾಲ್ಲೂಕಿನಲ್ಲಿ ಸುಮಾರು 6 ಸಾವಿರ ರೇಷ್ಮೆ ಬೆಳೆಗಾರರಿದ್ದಾರೆ. 6,400 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ತೋಟವಿದೆ. ಬೆಳೆಗಾರರು, ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಸಾವಿರಾರು ಜನರು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರೇಷ್ಮೆ ಕೃಷಿಯಿಂದ ಸುಧಾರಿತ ಜೀವನವನ್ನು ರೂಪಿಸಿಕೊಂಡಿದ್ದಾರೆ.

ADVERTISEMENT

ಚಿಂತಾಮಣಿಯ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಂಗಳವಾರ ಒಂದು ಕೆ.ಜಿ ರೇಷ್ಮೆಗೂಡು ಗರಿಷ್ಠ ₹587ಕ್ಕೆ ಹರಾಜು ಆಗಿದೆ. ಮಾರುಕಟ್ಟೆಗೆ ಕೇವಲ 26 ಲಾಟ್‌ಗಳಿಂದ 1,296 ಕೆ.ಜಿ ಗೂಡು ಆವಕವಾಗಿತ್ತು. ಕೋಲಾರ ತಾಲ್ಲೂಕಿನ ಐತರಾಸನಹಳ್ಳಿಯ ಜಿ.ನರಸಿಂಹಪ್ಪ ಬೆಳೆದು ತಂದಿದ್ದ ರೇಷ್ಮೆಗೂಡು ₹587ಕ್ಕೆ ಹರಾಜಾಗಿದೆ. ಕೆ.ಜಿಗೆ ಕನಿಷ್ಠ ₹305, ಗರಿಷ್ಠ ₹587, ಸರಾಸರಿ ₹505ಕ್ಕೆ ಮಾರಾಟವಾಗಿದೆ ಎಂದು ಸ್ಥಳೀಯ ರೇಷ್ಮೆ ಗೂಡಿನ ಮಾರುಕಟ್ಟೆ ಅಧಿಕಾರಿಗಳು ಮಾಹಿತಿ ನೀಡಿದರು.

ಇತ್ತೀಚಿನ ವರ್ಷಗಳಲ್ಲಿ ರೇಷ್ಮೆಗೂಡಿನ ಬೆಲೆ ಸದಾ ಇಳಿಮುಖವಾಗುತ್ತಿದ್ದರಿಂದ ಬೇಸತ್ತ ರೈತರು ಇತರ ತರಕಾರಿ ಬೆಳೆಗಳ ಕಡೆಗೆ ಮಾರುಹೋಗಿದ್ದಾರೆ. ರೇಷ್ಮೆ(ಹಿಪ್ಪುನೇರಳೆ) ಸೊಪ್ಪು ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಸೊಪ್ಪು ಬೆಳೆಯುವ ಪ್ರದೇಶ ಕಡಿಮೆಯಾಗಿದ್ದರಿಂದ ಸಹಜವಾಗಿ ರೇಷ್ಮೆ ಹುಳುಗಳ ಸಾಕಾಣಿಕೆದಾರರ ಸಂಖ್ಯೆ ಮತ್ತು ಪ್ರಮಾಣವೂ ಕಡಿಮೆಯಾಗಿದೆ. ರೇಷ್ಮೆಗೂಡಿನ ಆವಕ ಕಡಿಮೆಯಾಗಿದ್ದು ಬೆಲೆ ಏರುಮುಖವಾಗುತ್ತಿದೆ ಎನ್ನಲಾಗುತ್ತಿದೆ.

ರೇಷ್ಮೆ ಮಾರುಕಟ್ಟೆಗೆ ಮಾರಾಟಕ್ಕೆ ಗೂಡು ತರುವವರ ಸಂಖ್ಯೆ ಕಡಿಮೆಯಾಗಿದ್ದು ಮಾರುಕಟ್ಟೆಯ ಆದಾಯವೂ ಕುಸಿಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ರೇಷ್ಮೆ ಮಾರುಕಟ್ಟೆ ಮುಚ್ಚಬೇಕಾಗುತ್ತದೆ. ರೀಲರುಗಳು ಖಾಸಗಿಯಾಗಿ ಗೂಡನ್ನು ಖರೀದಿಸುತ್ತಿರುವ ಪರಿಣಾಮ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಬರುವ ಗೂಡಿನ ಪ್ರಮಾಣ ಕಡಿಮೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಸಿಗುವ ದರಕ್ಕಿಂತಲೂ ಹೆಚ್ಚಿನ ದರ ನೀಡುವ ಆಮಿಷ ಒಡ್ಡಿ ರೈತರಿಂದ ಗೂಡು ಖರೀದಿ ಮಾಡಲಾಗುತ್ತಿದೆ. ಈ ಕಾರಣದಿಂದಲೂ ಮಾರುಕಟ್ಟೆಗೆ ಗೂಡಿನ ಆವಕದ ಪ್ರಮಾಣ ತೀರಾ ಕಡಿಮೆಯಾಗುತ್ತಿದೆ.

ಶ್ರೀಮಂತ ರೀಲರುಗಳು ರೇಷ್ಮೆ ಹುಳು ಸಾಕಾಣಿಕೆ ಮಾಡುತ್ತಿರುವ ರೈತರ ಬಳಿಗೆ ತೆರಳುತ್ತಾರೆ. 4ನೇ ಜ್ವರ ಚೆನ್ನಾಗಿ ಯಶಸ್ವಿಯಾಗಿದ್ದರೆ ಸ್ವಲ್ಪ ಮುಂಗಡ ಹಣವನ್ನು ನೀಡಿ, ಗೂಡು ಬೆಳೆದ ನಂತರ ನಮಗೆ ಮಾರಾಟ ಮಾಡಬೇಕು ಎಂದು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳುತ್ತಾರೆ. ರೈತರು ಚಂದ್ರಿಕೆಗಳಿಂದ ಗೂಡು ಬಿಡಿಸುತ್ತಿದ್ದಂತೆ ತಕ್ಕಡಿ ಸಮೇತವಾಗಿ ತೆರಳಿ ತೂಕ ಹಾಕಿಕೊಂಡು ಹಣ ನೀಡಿ ಬರುತ್ತಿದ್ದಾರೆ. ಮನೆಯಲ್ಲೇ ಮಾರಾಟ ಮಾಡಿ ಹಣವನ್ನು ಪಡೆಯುವುದರಿಂದ ರೈತರಿಗೂ ಸಾಗಾಟದ ತೊಂದರೆ ಇಲ್ಲ ಎಂದು ಕೆಲ ರೈತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ನಗರದ ರೇಷ್ಮೆ ಗೂಡು ಮಾರುಕಟ್ಟೆಗೆ ಶ್ರೀನಿವಾಸಪುರ, ಕೋಲಾರ, ಚಿಂತಾಮಣಿ, ಬಾಗೇಪಲ್ಲಿ ತಾಲ್ಲೂಕುಗಳ ರೈತರು ಗೂಡು ತರುತ್ತಾರೆ. ಚಿಂತಾಮಣಿ ನಗರ, ಕೈವಾರ, ಚಿನ್ನಸಂದ್ರ, ಆಲಂಬಗಿರಿ, ಕ್ಯಾಲನೂರಿನ ರೀಲರ್‌ಗಳು ಖರೀದಿಗೆ ಬರುತ್ತಾರೆ.

ಮಳೆಯ ಕೊರತೆ, ವರ್ಷ ವರ್ಷವೂ ಬರಗಾಲದ ಘೋಷೆಣೆ, ಅಂತರ್ಜಲ ಕುಸಿತ, ವಿದ್ಯುತ್ ಕೊರತೆ ಹೀಗೆ ಅನೇಕ ಸಂಕಷ್ಟಗಳ ನಡುವೆ ಹಿಪ್ಪನೇರಳೆ ಬೆಳೆದು ರೇಷ್ಮೆ ಗೂಡನ್ನು ಉತ್ಪಾದಿಸಿ ಮಾರುಕಟ್ಟೆಗೆ ತಂದರೆ ಬೆಲೆ ಕುಸಿತದಿಂದ ನಿರ್ವಹಣೆಯ ವೆಚ್ಚವೂ ಸಿಗುತ್ತಿರಲಿಲ್ಲ. ರೈತರು ತಮ್ಮ ತೋಟಗಳಲ್ಲಿ ಹಿಪ್ಪುನೇರಳೆ ಕಿತ್ತು ಹಾಕಿ ತರಕಾರಿ, ಟೊಮೆಟೊ ಮತ್ತಿತರ ಬೆಳೆಗಳ ಕಡೆ ಮುಖ ಮಾಡಿದ್ದರು.

ಸಿಗುವ ಅಲ್ಪ-ಸ್ವಲ್ಪ ನೀರಿನಿಂದಲೇ ಹಿಪ್ಪನೇರಳೆ ತೋಟ ಮಾಡಿಕೊಂಡು ಗೂಡು ಬೆಳೆಯುತ್ತಿರುವ ರೈತರಿಗೆ ಬೆಲೆ ಏರಿಕೆ ಕಾಣುತ್ತಿರುವುದು ಸಂತಸ ತಂದಿದೆ. ರೇಷ್ಮೆ ಗೂಡಿನ ಬೆಲೆ ಇದೇ ರೀತಿ ಮುದುವರೆದರೆ ರೈತರು ಮತ್ತೆ ರೇಷ್ಮೆ ಕೃಷಿ ಕಡೆ ಮರಳುವ ಮನಸ್ಸು ಮಾಡಬಹುದು ಎಂದು ರೇಷ್ಮೆ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ರೇಷ್ಮೆ ಗೂಡಿನ ಗರಿಷ್ಠ ಬೆಲೆ ಕೆ.ಜಿಗೆ ₹587 ಪ್ರತಿನಿತ್ಯ ಗೂಡಿನ ಆವಕ ಪ್ರಮಾಣ 1.5 ರಿಂದ 2 ಟನ್ ಪ್ರತಿನಿತ್ಯ ಬರುವ ಗೂಡಿನ ಲಾಟ್‌ಗಳು 25-40

ರೇಷೆಗೂಡಿನ ಬೆಲೆ ಕುಸಿತದಿಂದ ರೈತರು ಹಿಪ್ಪುನೇರಳೆ ತೋಟ ಕಿತ್ತುಹಾಕಿ ತರಕಾರಿ ಬೆಳೆಕಡೆ ಮುಖ ಮಾಡುತ್ತಿದ್ದರು. ಬೆಲೆ ಏರಿಕೆಯಿಂದ ಸಂತಸವಾಗಿದೆ. ಇದೇ ಬೆಲೆ ಮುಂದುವರೆಯಬೇಕು
ಜಿ.ನರಸಿಂಹಪ್ಪ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.