ADVERTISEMENT

ಚಿಕ್ಕಬಳ್ಳಾಪುರ | ಸ್ಕಂದಗಿರಿ ಹಗರಣ; ಚಾರಣ ಸಂಸ್ಥೆಗಳು ಶಾಮೀಲು?

ವಾರಾಂತ್ಯದ ದಿನಗಳಲ್ಲಿ ಹೆಚ್ಚು ನಡೆಯುತ್ತದೆಯೇ ಟಿಕೆಟ್ ಬುಕ್ಕಿಂಗ್ ಅವ್ಯವಹಾರ

ಡಿ.ಎಂ.ಕುರ್ಕೆ ಪ್ರಶಾಂತ
Published 24 ಜುಲೈ 2024, 6:57 IST
Last Updated 24 ಜುಲೈ 2024, 6:57 IST
ಸ್ಕಂದಗಿರಿ ಬೆಟ್ಟ (ಸಂಗ್ರಹ ಚಿತ್ರ)
ಸ್ಕಂದಗಿರಿ ಬೆಟ್ಟ (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ಸ್ಕಂದಗಿರಿಯಲ್ಲಿ ನಡೆದಿರುವ ಟಿಕೆಟ್ ಬುಕ್ಕಿಂಗ್ ಅಕ್ರಮಗಳಲ್ಲಿ ‌ಪ್ರಸಿದ್ಧ ಚಾರಣ ಸಂಸ್ಥೆಗಳೂ ಶಾಮೀಲಾಗಿವೆ. ಚಾರಣ ಸಂಸ್ಥೆಗಳ ಪರವಾಗಿ ಸ್ಕಂದಗಿರಿ ಸಿಬ್ಬಂದಿ ಕೆಲಸ ಮಾಡಿದ್ದಾರೆ ಎನ್ನುವ ಶಂಕೆ ಚಾರಣ ಪ್ರಿಯರಲ್ಲಿ ಮೂಡಿದೆ. 

ವಿಶೇಷವಾಗಿ ವಾರಾಂತ್ಯದ ದಿನಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಚಾರಣಗಳನ್ನು ಆಯೋಜಿಸುವ ಸಂಸ್ಥೆಗಳು ಈ ಟಿಕೆಟ್ ಬುಕ್ಕಿಂಗ್ ಮತ್ತು ಬ್ಲಾಕಿಂಗ್ ಅವ್ಯವಹಾರದಲ್ಲಿ ಸಿಬ್ಬಂದಿ ಜೊತೆ ಕೈ ಜೋಡಿಸಿದ್ದಾರೆ.

ಈ ಸಂಸ್ಥೆಗಳಿಗೆ ಬುಕ್ಕಿಂಗ್ ಮತ್ತು ಟಿಕೆಟ್ ಬ್ಲಾಕಿಂಗ್‌ಗೆ ವೆಬ್‌ಸೈಟ್ ನಿರ್ವಹಣೆಯ ಹೊಣೆ ಹೊತ್ತವರು ಮತ್ತು ಸ್ಕಂದಗಿರಿಯಲ್ಲಿ ನಿರ್ವಹಣೆಯ ಹೊತ್ತವರೇ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಅಂಶಗಳು ಬೆಂಗಳೂರು ಟ್ರಕ್ಕಿಂಗ್ ಕಮ್ಯುನಿಟಿ ಸದಸ್ಯ ಲಿಖಿತ್ ಎಸ್.ನಾರಾಯಣ್, ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಬೆಂಗಳೂರಿನ ಕೆಲವು ಪ್ರಮುಖ ಚಾರಣ ಸಂಸ್ಥೆಗಳ ಹೆಸರುಗಳನ್ನು ಸಹ ದೂರಿನಲ್ಲಿ  ಉಲ್ಲೇಖಿಸಲಾಗಿದೆ.

ಅಲ್ಲದೆ ಮಹಿಳಾ ಸಿಬ್ಬಂದಿ ಮತ್ತು ವೆಬ್‌ಸೈಟ್ ನಿರ್ವಾಹಕರ ನಡುವೆ ನಡೆದಿರುವ ಆಡಿಯೊ ಸಂಭಾಷಣೆಯಲ್ಲಿ ಕೆಲವು ಚಾರಣ ಸಂಸ್ಥೆಗಳ ಹೆಸರುಗಳು ಮತ್ತು ಆ ಸಂಸ್ಥೆಗಳ ಪರವಾಗಿ ಯಾವ ರೀತಿಯಲ್ಲಿ ಸ್ಕಂದಗಿರಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ ಎನ್ನುವ ವಿಚಾರವೂ ಇದೆ. ಈ ಸಂಭಾಷಣೆಯಲ್ಲಿ ಯಾವ ಸಿಬ್ಬಂದಿ ಯಾವ ಸಂಸ್ಥೆ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವು ಹೆಸರುಗಳು ಪ್ರಸ್ತಾಪವಾಗಿವೆ.

ಚಾರಣ ಸಂಸ್ಥೆಗಳು ವಿಶೇಷವಾಗಿ ವಾರಾಂತ್ಯದ ದಿನಗಳಲ್ಲಿ ಪ್ರಸಿದ್ಧ ಸ್ಥಳಗಳಿಗೆ ಚಾರಣವನ್ನು ಕರೆದೊಯ್ಯುತ್ತವೆ. ಹೀಗೆ ಚಾರಣಕ್ಕೆ ಇಂತಿಷ್ಟು ಹಣ ಎಂದು ಚಾರಣ ಪ್ರಿಯರಿಂದ ಪಡೆಯಲಾಗುತ್ತದೆ. ಒಮ್ಮೆ ಸರಾಸರಿ 60ರಿಂದ 70 ಟಿಕೆಟ್‌ಗಳನ್ನು ಸಹ ಈ ಸಂಸ್ಥೆಗಳು ಕಾಯ್ದಿರಿಸುತ್ತವೆ. 

ಹೀಗೆ ಸಂಸ್ಥೆಗಳು ಕಾಯ್ದಿರಿಸುವ ಟಿಕೆಟ್ ಲೆಕ್ಕ ಒಂದಾದರೆ ಕರೆದುಕೊಂಡು ಬರುವ ಸಿಬ್ಬಂದಿಯದ್ದು ಮತ್ತೊಂದು ಲೆಕ್ಕ. ಹೆಚ್ಚುವರಿಯಾಗಿ ಕರೆ ತರುವ ಟಿಕೆಟ್ ಇಲ್ಲದ ಚಾರಣಿಗರನ್ನು ಒಳಬಿಡಲು ಹಣ ಪಡೆಯಲಾಗುತ್ತದೆ. ಕೆಲವು ಸಿಬ್ಬಂದಿ ಚಾರಣ ಸಂಸ್ಥೆಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪವಿದೆ.

ಜಿಲ್ಲೆಯ ಪ್ರವಾಸೋದ್ಯಮದಲ್ಲಿ ಕಪ್ಪು ಚುಕ್ಕಿ: ಬೆಂಗಳೂರಿಗೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರವು ಪ್ರವಾಸಿಗರನ್ನು ಸೆಳೆಯುತ್ತಿದೆ. ನಂದಿಗಿರಿಧಾಮ, ಸ್ಕಂದಗಿರಿ ಹೀಗೆ ಪ್ರಮುಖ ಪ್ರವಾಸಿ ತಾಣಗಳು ಮತ್ತು ಚಾರಣ ಸ್ಥಳಗಳಿಗೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು, ಚಾರಣಿಗರು ಭೇಟಿ ನೀಡುತ್ತಿದ್ದಾರೆ.

ಸ್ಕಂದಗಿರಿಯ ಹಗರಣ ಮತ್ತು ಈ ಹಗರಣಕ್ಕೆ ಸಂಬಂಧಿಸಿದಂತೆ ಸಚಿವರು ಸಿಐಡಿ ತನಿಖೆಗೆ ನಿರ್ದೇಶನ ನೀಡಿರುವುದು ಜಿಲ್ಲೆಯ ಪ್ರವಾಸೋದ್ಯಮದ ವಿಚಾರವಾಗಿ ಕಪ್ಪು ಚುಕ್ಕಿಯಾಗಿದೆ.

ಹೀಗೆ ಸ್ಕಂದಗಿರಿಯಲ್ಲಿ ಅಕ್ರಮಗಳು ಎಂದಿನಿಂದ ಆರಂಭವಾಗಿವೆ, ಯಾರ ಯಾರ ಖಾತೆಗಳಿಗೆ ಹಣ ಜಮೆ ಆಗಿದೆ. ಪ್ರವೇಶದ್ವಾರದಲ್ಲಿ ಟಿಕೆಟ್ ಪಡೆದು ಒಳಬಿಡುವ ವೇಳೆ ಸಿಸಿ ಟಿವಿ ಕಣ್ಗಾವಲು ಇಲ್ಲವೆ...ಹೀಗೆ ನಾನಾ ಚರ್ಚೆಗಳು ಮತ್ತು ಅನುಮಾನಗಳು ನಾಗರಿಕ ವಲಯದಲ್ಲಿ ಮೂಡಿದೆ.

ಮತ್ತಷ್ಟು ದೂರು?

ಲಿಖಿತ್ ನಾರಾಯಣ್ ದೂರು ನೀಡುತ್ತಲೆ ಮತ್ತಷ್ಟು ಮಂದಿ ಚಾರಣಿಗರು ಮತ್ತು ನಾಗರಿಕರು ಸ್ಕಂದಗಿರಿಯಲ್ಲಿ ನಡೆದಿರುವ ಟಿಕೆಟ್ ಬುಕ್ಕಿಂಗ್ ಹಗರಣದ ಬಗ್ಗೆ ಸಚಿವರಿಗೆ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.