ADVERTISEMENT

ಚಿಕ್ಕಬಳ್ಳಾಪುರ | ಸ್ಕಂದಗಿರಿ ಸುತ್ತಿಕೊಂಡ ಟಿಕೆಟ್‌ ಬುಕ್ಕಿಂಗ್ ಹಗರಣ

ಸಿಐಡಿಗೆ ತನಿಖೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ನಿರ್ದೇಶನ

ಡಿ.ಎಂ.ಕುರ್ಕೆ ಪ್ರಶಾಂತ
Published 24 ಜುಲೈ 2024, 4:24 IST
Last Updated 24 ಜುಲೈ 2024, 4:24 IST
<div class="paragraphs"><p>ಸ್ಕಂದಗಿರಿ ಬೆಟ್ಟ ಏರುತ್ತಿರುವ ಚಾರಣಿಗರು</p></div>

ಸ್ಕಂದಗಿರಿ ಬೆಟ್ಟ ಏರುತ್ತಿರುವ ಚಾರಣಿಗರು

   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿಯೇ ಪ್ರಸಿದ್ಧ ಚಾರಣ ತಾಣಗಳಲ್ಲಿ ಒಂದಾದ ತಾಲ್ಲೂಕಿನ ಸ್ಕಂದಗಿರಿಯ ಸುತ್ತ ಈಗ ಹಗರಣದ ಬಾಹುಗಳು ಚಾಚಿವೆ. ಸ್ಕಂದಗಿರಿಗೆ ಚಾರಣಿಗರು ಪ್ರವೇಶ ಪಡೆಯಲು ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ಆದರೆ ಟಿಕೆಟ್ ಕಾಯ್ದಿರಿಸದೆಯೇ ಚಾರಣಿಗರಿಗೆ ಪ್ರವೇಶ ನೀಡಲಾಗಿದೆ. ಹೀಗೆ ಅಕ್ರಮವಾಗಿ ಪ್ರವೇಶ ನೀಡಲು ಹಣ ಪಡೆಯಲಾಗಿದೆ.

ಪರಿಸರ ಪ್ರವಾಸೋದ್ಯಮ ಇಲಾಖೆಯು ಸ್ಕಂದಗಿರಿಯ ನಿರ್ವಹಣೆ ಹೊಣೆ ಹೊತ್ತಿದೆ. ಸ್ಕಂದಗಿರಿಗೆ ಟಿಕೆಟ್ ಬುಕ್ಕಿಂಗ್‌ ನಿರ್ವಹಣೆಯನ್ನು ಖಾಸಗಿ ಸಂಸ್ಥೆ ನಿರ್ವಹಿಸುತ್ತಿದೆ.  ಹಗರಣದ ಸಂಬಂಧ ವೆಬ್‌ಸೈಟ್‌ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಮೂಲಕ ಸ್ಕಂದಗಿರಿಯಲ್ಲಿ ನಕಲಿ ಟಿಕೆಟ್ ಹಗರಣ ಬಹಿರಂಗವಾಗಿದೆ. 

ADVERTISEMENT

ಸ್ಕಂದಗಿರಿಯಲ್ಲಿ ಟಿಕೆಟ್ ಕಾಯ್ದಿರಿಸುವ ವಿಚಾರದಲ್ಲಿ ಹಗರಣ ನಡೆಯುತ್ತಿದ್ದು ತನಿಖೆ ನಡೆಸುವಂತೆ ಬೆಂಗಳೂರು ಟ್ರಕ್ಕಿಂಗ್ ಕಮ್ಯುನಿಟಿ ಸದಸ್ಯ ಲಿಖಿತ್ ಎಸ್.ನಾರಾಯಣ್ ಅರಣ್ಯ, ಜೀವ ವಿಜ್ಞಾನ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರು ನೀಡಿದ್ದರು.

ಪರಿಸರ ಪ್ರವಾಸೋದ್ಯಮ ಇಲಾಖೆಯ ಅಕೌಂಟೆಂಟ್‌ ವಾಣಿಶ್ರೀ, ಸ್ಕಂದಗಿರಿಯ ವೆಬ್‌ಸೈಟ್ ನಿರ್ವಾಹಕ ಸುನಿಲ್, ಶಿವರಾಜ್, ಸ್ವಾಗತಕಾರ ಗುರುನಾಥ್ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದರು. ದೂರಿನ ನಂತರ ವೆಬ್‌ಸೈಟ್ ನಿರ್ವಹಣೆಯ ಸಿಬ್ಬಂದಿಯನ್ನು ಕೆಲಸದಿಂದ ಕೈಬಿಡಲಾಗಿದೆ.

ಈ ಬಗ್ಗೆ ಸಿಐಡಿಯಿಂದ ತನಿಖೆ ನಡೆಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅರಣ್ಯ ಸಚಿವರು ನಿರ್ದೇಶನ ನೀಡಿದ್ದಾರೆ.

ಸ್ಕಂದಗಿರಿ ಪ್ರವಾಸಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಕಾಯ್ದಿರಿಸಬೇಕು. ನಿತ್ಯ 300 ಟಿಕೆಟ್‌ಗಳನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಒಂದು ಟಿಕೆಟ್‌ ಬೆಲೆ ₹607. ಬೆಳಿಗ್ಗೆ 4 ಗಂಟೆಗೆ ಮತ್ತು ಬೆಳಿಗ್ಗೆ 8 ಗಂಟೆಗೆ ಹೀಗೆ ಎರಡು ಪಾಳಿಯಲ್ಲಿ ಸ್ಕಂದಗಿರಿಗೆ ಚಾರಣಿಗರು ಚಾರಣ ನಡೆಸಲು ಅವಕಾಶವಿದೆ. 

ಸಂಚಲನ ತಂದ ಆಡಿಯೊ:

ಪ್ರಕರಣದ ಸಂಬಂಧ ಮಹಿಳಾ ಸಿಬ್ಬಂದಿ ಮತ್ತು ವೆಬ್‌ಸೈಟ್ ನಿರ್ವಹಣಾ ಸಿಬ್ಬಂದಿ ನಡುವೆ ನಡೆದಿದೆ ಎನ್ನಲಾದ ಮಾತುಕತೆಯ ಆಡಿಯೊ ಈಗ ಚರ್ಚೆಗೆ ಗ್ರಾಸವಾಗಿದೆ. 

‘ಟಿಕೆಟ್ ಕ್ಲೋಸ್ ಆದ ಮೇಲೆ ಬಂದವರಿಗೆ ಟಿಕೆಟ್ ಮಾಡಿಕೊಡುತ್ತಿದ್ದೆವು. ದಿನಕ್ಕೆ ಎರಡು ಮೂರು ಮಾತ್ರ ಮಾಡುತ್ತಿದ್ದೆವು. ಹಣವನ್ನು ಗೂಗಲ್ ಪೇ ಮಾಡಿಸಿಕೊಳ್ಳುತ್ತಿದ್ದೆವು’ ಎಂದು ವೆಬ್‌ಸೈಟ್ ನಿರ್ವಹಣಾ ಸಿಬ್ಬಂದಿ ಆಡಿಯೊದಲ್ಲಿ ಹೇಳಿದ್ದಾರೆ.

ಈಗಾಗಲೇ ಚಾರಣಕ್ಕೆ ತೆರಳಿದವರ ಟಿಕೆಟ್‌ಗಳನ್ನು ಟಿಕೆಟ್ ಕಾಯ್ದಿರಿಸದೆಯೇ ಬಂದ ಬೇರೊಬ್ಬ ಚಾರಣಿಗರಿಗೆ ಕೊಡುತ್ತಿದ್ದೆವು. ನಕಲಿ ಟಿಕೆಟ್ ಕೊಟ್ಟು ಅವರನ್ನು  ಕಳುಹಿಸುತ್ತಿದ್ದೆವು. ನಾನು (ಸುನಿಲ್), ಗುರುನಾಥ್, ಶಿವು ಈ ಪ್ರಕರಣದಲ್ಲಿ ಭಾಗಿಯಾಗಿದ್ದೇವೆ ಎಂದು ಆಡಿಯೊದಲ್ಲಿ ಮಾತುಗಳಿವೆ. ಆಡಿಯೊದಲ್ಲಿ ಶ್ರೀಕಲಾ ಮತ್ತಿತರ ಹೆಸರುಗಳನ್ನು ಸಹ ಉಲ್ಲೇಖಿಸಲಾಗಿದೆ.

‘ನಾನು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಆದರೂ ನಮ್ಮ ಹೆಸರು ಬರುತ್ತಿದೆ. 300 ಜನರ ಮೇಲೆ ಕಳುಹಿಸಬೇಡಿ ಎಂದು ಹೇಳಿದ್ದೆವು. ಒಂದು ವೇಳೆ ಕಳುಹಿಸುವುದಿದ್ದರೆ ಸಾಹೇಬರ ಬಳಿ ಅನುಮತಿ ಪಡೆದು ಅವಕಾಶ ನೀಡುತ್ತಿದ್ದೆವು. ಯಾವುದನ್ನೂ ಅಕ್ರಮವಾಗಿ ಮಾಡಿಲ್ಲ. ನಾನು ಯಾರ ಬಳಿಯೂ ಒಂದು ರೂಪಾಯಿ ಪಡೆದಿಲ್ಲ’ ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ.

ಹೀಗೆ ಅಧಿಕಾರಿ ಮತ್ತು ಹೊರಗುತ್ತಿಗೆ ಸಿಬ್ಬಂದಿ ನಡುವೆ ನಡೆದಿರುವ ಮಾತುಕತೆಯ ಆಡಿಯೊ ಸ್ಕಂದಗಿರಿಯಲ್ಲಿನ ಅಕ್ರಮಗಳ ನಾನಾ ಮಜಲುಗಳನ್ನು ಹೊರಗೆಡವುತ್ತಿದೆ. ಟಿಕೆಟ್ ಬುಕ್ಕಿಂಗ್
ಅವ್ಯವಹಾರದಲ್ಲಿ ಚಾರಣಕ್ಕೆ ಸಂಬಂಧಿಸಿದ ಸಂಸ್ಥೆಗಳೂ ಭಾಗಿಯಾಗಿವೆ ಎನ್ನುವ ದೂರುಗಳಿವೆ.

‍ಪ್ರಕರಣಗಳಲ್ಲಿ ‘ದೊಡ್ಡ’ ಕೈಗಳು ಇವೆಯೇ? ಕೆಲವರನ್ನು ಮಾತ್ರ ಪ್ರಕರಣದಲ್ಲಿ ಸಿಲುಕಿಸಿ ‘ದೊಡ್ಡ’ವರು ಬಚಾವ್ ಆಗಲು ಯತ್ನಗಳನ್ನು ನಡೆಸಿದ್ದಾರೆಯೇ? ‘ಹೊಂದಾಣಿಕೆ’ಯಿಂದಲೇ ವ್ಯವಹಾರಗಳು ನಡೆಯುತ್ತಿದ್ದವೆ ಎನ್ನುವ ಅನುಮಾನಗಳು ಮೂಡಿವೆ. 

ಹಲವು ತಿಂಗಳಿನಿಂದ ಹಗರಣ

ಪ್ರಕರಣ ಸಂಬಂಧ  ಸುನಿಲ್ ಎಂಬುವವರು ಡಿಆರ್‌ಎಫ್‌ಒ ಅವರಿಗೆ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದಾರೆ. ಆರು ತಿಂಗಳಿನಿಂದ ಈ ಪ್ರಕರಣ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ಹಗರಣವು ಹಲವು ತಿಂಗಳಿನಿಂದ ನಡೆಯುತ್ತಿರುವ ಶಂಕೆ ಇದೆ ಎಂದು ಲಿಖಿತ್ ನಾರಾಯಣ್ ಸಚಿವರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ತನಿಖೆಯಿಂದ ಸತ್ಯ ಹೊರಬರಲಿ

ಸ್ಕಂದಗಿರಿಯ ಟಿಕೆಟ್ ಬುಕ್ಕಿಂಗ್ ದೊಡ್ಡ ಹಗರಣ. ಇದರಲ್ಲಿ ಭಾಗಿಯಾದ ಎಲ್ಲರಿಗೂ ಶಿಕ್ಷೆ ಆಗಬೇಕು. ಸ್ಕಂದಗಿರಿಯ ಚಾರಣವು ಪ್ರವಾಸಿ ಸ್ನೇಹಿಯಾಗಿ ರೂಪುಗೊಳ್ಳಬೇಕು ಎಂದು ಲಿಖಿತ್ ನಾರಾಯಣ್ ತಿಳಿಸಿದರು.

ವಾರಾಂತ್ಯದ ದಿನಗಳಲ್ಲಿ ಟಿಕೆಟ್ ಬುಕ್ಕಿಂಗ್ ಅವ್ಯವಹಾರ ಹೆಚ್ಚು ನಡೆಯುತ್ತದೆ. ವೆಬ್‌ಸೈಟ್ ನಿರ್ವಹಣೆಯ ಸಿಬ್ಬಂದಿಯೇ ಟಿಕೆಟ್‌ಗಳನ್ನು ಬುಕ್ಕಿಂಗ್ ಮಾಡಿ,  ಚಾರಣಿಗರಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.