ADVERTISEMENT

ಚಿಕ್ಕಬಳ್ಳಾಪುರ: ಒಂದೂವರೆ ತಿಂಗಳಾದರೂ ‘ಸ್ಕಂದಗಿರಿ’ ಚಾರಣ ಬಂದ್

ಚಾರಣಪ್ರಿಯರಿಗೆ ನಿರಾಸೆ; ಶೀಘ್ರದಲ್ಲಿಯೇ ಕಾರ್ಯಾರಂಭ ಎಂದ ಅರಣ್ಯ ಇಲಾಖೆ

ಡಿ.ಎಂ.ಕುರ್ಕೆ ಪ್ರಶಾಂತ
Published 15 ಸೆಪ್ಟೆಂಬರ್ 2024, 12:38 IST
Last Updated 15 ಸೆಪ್ಟೆಂಬರ್ 2024, 12:38 IST
ಸ್ಕಂದಗಿರಿ ಬೆಟ್ಟ
ಸ್ಕಂದಗಿರಿ ಬೆಟ್ಟ   

ಚಿಕ್ಕಬಳ್ಳಾಪುರ: ರಾಜ್ಯದಲ್ಲಿಯೇ ಪ್ರಸಿದ್ಧವಾದ ‌‌‌‌ತಾಲ್ಲೂಕಿನ ಸ್ಕಂದಗಿರಿ ಬೆಟ್ಟದ ಚಾರಣ ಹಾದಿ ಬಂದ್ ಆಗಿ ಒಂದೂವರೆ ತಿಂಗಳು ಕಳೆದಿದೆ. ಹೀಗೆ ದೀರ್ಘವಾಗಿ ಚಾರಣದ ಹಾದಿ ಬಂದ್ ಆಗಿರುವುದು ಚಾರಣಿಗರಿಗೆ ಮತ್ತು ಪ್ರವಾಸಿಗರಿಗೆ ಬೇಸರ ತರಿಸಿದೆ.

ರಾಜ್ಯದಲ್ಲಿಯೇ ಸ್ಕಂದಗಿರಿ ಪ್ರಮುಖ ಚಾರಣ ಸ್ಥಳಗಳಲ್ಲಿ ಒಂದು. ಜು.31ರ ನಂತರ ಇಲ್ಲಿಯವರೆಗೆ ಪ್ರವಾಸಿಗರ ಪ್ರವೇಶ ಸಾಧ್ಯವಾಗಿಲ್ಲ. ಈ ತಿಂಗಳ ಅಂತ್ಯದಲ್ಲಿ ಅಥವಾ ಶೀಘ್ರದಲ್ಲಿಯೇ ಪ್ರವೇಶಕ್ಕೆ ಅವಕಾಶವಾಗಲಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸುತ್ತವೆ. 

ಹೀಗೆ ಸ್ಕಂದಗಿರಿಯ ಚಾರಣದ ಹಾದಿ ಬಂದ್ ಆಗಿರುವುದು ಚಿಕ್ಕಬಳ್ಳಾಪುರದ ಪ್ರವಾಸೋದ್ಯಮದ ಕಲರವನ್ನು ಸ್ವಲ್ಪಮಟ್ಟಿಗೆ ತಗ್ಗಿಸಿದೆ. ವಿಶೇಷವಾಗಿ ಶನಿವಾರ ಮತ್ತು ಭಾನುವಾರದ  ವಾರಾಂತ್ಯದ ದಿನಗಳಲ್ಲಿ ಸ್ಕಂದಗಿರಿ ಹಾದಿಯಲ್ಲಿ ಬೈಕ್‌ ಮತ್ತು ಕಾರುಗಳ ಸಂಖ್ಯೆ ಹೆಚ್ಚುತ್ತಿತ್ತು. ಬೆಳ್ಳಂ ಬೆಳಿಗ್ಗೆಯೇ ಚಾರಣಿಗರು ಗಿರಿ ಪ್ರವೇಶಿಸುತ್ತಿದ್ದರು. ಈ ವಾರಾಂತ್ಯದ ಪ್ರವಾಸಕ್ಕೆ ಎರಡು ಮೂರು ವಾರಗಳ ಮುನ್ನವೇ ಟಿಕೆಟ್ ಕಾಯ್ದಿರಿಸಬೇಕಾಗಿತ್ತು. 

ADVERTISEMENT

ಹೀಗೆ ಹೆಚ್ಚಿನ ಬೇಡಿಕೆಯು ಸ್ಕಂದಗಿರಿ ಚಾರಣಕ್ಕೆ ಇತ್ತು. ಬೆಂಗಳೂರಿನ ಚಾರಣ ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ‍ಪ್ರವಾಸಿಗರನ್ನು ಕರೆ ತರುತ್ತಿದ್ದವು.  ಚಿಕ್ಕಬಳ್ಳಾಪುರದ ಪ್ರವಾಸೋದ್ಯಮದಲ್ಲಿ ಸ್ಕಂದಗಿರಿಯು ಮುಕುಟ ಮಣಿ ಎನಿಸಿತ್ತು. 

ಆದರೆ ಕಳೆದ ಒಂದೂವರೆ ತಿಂಗಳಿನಿಂದ ಸ್ಕಂದಗಿರಿಯ ಚಾರಣ ಬಂದ್ ಆಗಿದೆ. ಚಾರಣಿಗರು ಸ್ಕಂದಗಿರಿಗೆ ಪ್ರವೇಶ ಯಾವಾಗ ದೊರೆಯುತ್ತದೆ ಎನ್ನುವ ಕುತೂಹಲದಲ್ಲಿ ಇದ್ದಾರೆ. 

ಈ ಹಿಂದಿನಿಂದಲೂ  ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಸ್ಕಂದಗಿರಿಯ ನಿರ್ವಹಣೆಯ ಹೊಣೆ ಹೊತ್ತಿತ್ತು. ಟಿಕೆಟ್ ಬುಕ್ಕಿಂಗ್‌ನಲ್ಲಿ ಅಕ್ರಮ ನಡೆಯುತ್ತಿವೆ. ಕಾಯ್ದಿರಿಸದಿದ್ದರೂ ಅಕ್ರಮವಾಗಿ ಪ್ರವೇಶ ನೀಡಲಾಗುತ್ತಿದೆ. ವೆಬ್‌ಸೈಟ್ ನಿರ್ವಾಹಕರು ನಕಲಿ ಟಿಕೆಟ್ ನೀಡುತ್ತಿದ್ದಾರೆ. ಚಾರಣ ಸಂಸ್ಥೆಗಳು ಅವ್ಯವಹಾರದಲ್ಲಿ ಶಾಮೀಲಾಗಿವೆ– ಎನ್ನುವ ಗುರುತರ ಆರೋಪಗಳ ಹಿನ್ನೆಲೆಯಲ್ಲಿ ಅರಣ್ಯ ಸಚಿವರು ತನಿಖೆಗೆ ಆದೇಶಿಸಿದ್ದರು. 

ಈ ಬಗ್ಗೆ ತನಿಖೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗೆ ಅರಣ್ಯ ಸಚಿವರು ಸೂಚಿಸಿದ್ದರು. ಆರೋಪಗಳ ಹಿನ್ನೆಲೆಯಲ್ಲಿ ಸ್ಕಂದಗಿರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಿಬ್ಬಂದಿಯನ್ನು ಕೆಲಸದಿಂದ ಕೈ ಬಿಡಲಾಯಿತು. ತನಿಖೆ ನಡೆಸಿ ವರದಿ ನೀಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಐವರು ಅಧಿಕಾರಿಗಳ ಸಮಿತಿ ಸಹ ರಚಿಸಿದ್ದರು. ಆ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಹ ಕಲೆ ಹಾಕಿತ್ತು. 

ಈ ಎಲ್ಲ ಬೆಳವಣಿಗೆಗಳ ನಡುವೆ ಸ್ಕಂದಗಿರಿ ಸೇರಿದಂತೆ ರಾಜ್ಯದ ಪ್ರಸಿದ್ಧ ಚಾರಣ ಸ್ಥಳಗಳ ಟಿಕೆಟ್ ಬುಕ್ಕಿಂಗ್‌ ವಿಚಾರದಲ್ಲಿ ಅಕ್ರಮದ ವಾಸನೆಗಳು ಅಡರಿದ ಕಾರಣ‌ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯು ಈ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸಿತು.

ಮಂಡಳಿ ಚಾರಣ ತಾಣಗಳ ಟಿಕೆಟ್ ಬುಕ್ಕಿಂಗ್ ಅನ್ನು ಜು.31ಕ್ಕೆ ಸ್ಥಗಿತಗೊಳಿಸಿದೆ. ಆಗಸ್ಟ್‌ನಿಂದ ಅರಣ್ಯ ಇಲಾಖೆಯ ಐಸಿಟಿ ಕಚೇರಿಯ ಮೂಲಕ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ನಿರ್ಮಿಸಿ ತಾವೇ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ನಿರ್ವಹಣೆ ಮಾಡಲು ಕ್ರಮವಹಿಸುವಂತೆ ಮಂಡಳಿ ತಿಳಿಸಿತ್ತು. ಈ ಸಂಬಂಧ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಜಿಲ್ಲೆಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿದ್ದರು.

ಸದರಿ ಚಾರಣ ಪಥಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕೃತಿ ಮಾರ್ಗದರ್ಶಕರು ಹಾಗೂ ಚಾರಣ ಉಸ್ತುವಾರಿಗಳಿಗೆ ಆ.1ರಿಂದ ಪ್ರತಿ ತಿಂಗಳು ಮಾರ್ಗದರ್ಶಕರ ಶುಲ್ಕ ಮತ್ತು ಚಾರಣ ಉಸ್ತುವಾರಿ ಶುಲ್ಕವನ್ನು ತಾವೇ ಪಾವತಿಸುವಂತೆ ಕ್ರಮವಹಿಸಬೇಕು. ತರಬೇತಿಗಳು ಅವಶ್ಯವಿದ್ದಲ್ಲಿ ಮಂಡಳಿಯಿಂದ ನಡೆಸಿಕೊಡಲಾಗುವುದು ಎಂದು ಪತ್ರದಲ್ಲಿ ತಿಳಿಸಿದ್ದರು.

ಆನ್‌ಲೈನ್‌ ಟಿಕೆಟ್ ಬುಕ್ಕಿಂಗ್‌ಗೆ ವೆಬ್‌ಸೈಟ್ ಅಭಿವೃದ್ಧಿ ಕೆಲಸ ಬೆಂಗಳೂರಿನ ಅರಣ್ಯ ಭವನದಲ್ಲಿ ನಡೆಯುತ್ತಿದೆ. ಶುಲ್ಕ ನಿಗದಿ ಹೊಣೆಯನ್ನೂ ಇಲಾಖೆಗೆ ವಹಿಸಲಾಗಿದೆ. ವೆಬ್‌ಸೈಟ್ ಸಿದ್ಧವಾದ ನಂತರವೇ ಸ್ಕಂದಗಿರಿ ಸೇರಿದಂತೆ ಉಳಿದ ಚಾರಣ ಪಥಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ವೆಬ್‌ಸೈಟ್ ರೂಪಿಸಿದ ನಂತರ ಪರೀಕ್ಷಾರ್ಥ ಕೆಲಸ ಆಗಬೇಕು ಎಂದು ಅರಣ್ಯ ಇಲಾಖೆ ತಿಳಿಸಿತ್ತು. 

ಸ್ಕಂದಗಿರಿ

ಶೀಘ್ರ ಪ್ರವೇಶಕ್ಕೆ ಅವಕಾಶ

ವಾರದಿಂದ ಹತ್ತು ದಿನಗಳ ಒಳಗೆ ಪ್ರವೇಶಕ್ಕೆ ಅವಕಾಶ ದೊರೆಯಲಿದೆ. ಇ–ನಗದು ವಿಚಾರವಾಗಿ ಬ್ಯಾಂಕ್‌ ಜೊತೆ ಮಾತುಕತೆ ನಡೆಯುತ್ತಿದೆ. ಪ್ರಕ್ರಿಯೆಗಳು ಮುಗಿದ ತಕ್ಷಣವೇ ಚಾರಣಕ್ಕೆ ಅವಕಾಶ ದೊರೆಯಲಿದೆ ಎಂದು ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ರಮೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. *** ‘ಆದಷ್ಟು ಬೇಗ ಅವಕಾಶವಾಗಲಿ’ ಸ್ಕಂದಗಿರಿ ಟ್ರಕ್ಕಿಂಗ್ ಅನುಭವ ಅತ್ಯುತ್ತಮವಾದುದು. ನಾವು ಆಗಾಗ್ಗೆ ಇಲ್ಲಿಗೆ ಭೇಟಿ ನೀಡುತ್ತೇವೆ. ಕೆಲವು ದಿನಗಳಿಂದ ವೆಬ್‌ಸೈಟ್‌ನಲ್ಲಿ ಟಿಕೆಟ್ ಕಾಯ್ದಿರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಪ್ರವೇಶ ಬಂದ್ ಆಗಿರುವುದು ತಿಳಿಯಿತು. ಅರಣ್ಯ ಇಲಾಖೆ ಮುತುವರ್ಜಿಸಿವಹಿಸಿ ಬೇಗ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುತ್ತಾರೆ ಬೆಂಗಳೂರಿನ ಎಂಜಿನಿಯರ್ ವಿಶ್ವನಾಥ್.

ಯಾವೆಲ್ಲ ಬದಲಾವಣೆಗಳು...

ಸ್ಕಂದಗಿರಿ ಚಾರಣಕ್ಕೆ ಪರಿಸರ ಪ್ರವಾಸೋದ್ಯಮ ಮಂಡಳಿಯು ನಿತ್ಯ 300 ಟಿಕೆಟ್‌ಗಳನ್ನು ಮಾತ್ರ ಮಾರಾಟ ಮಾಡುತ್ತಿತ್ತು. ಒಂದು ಟಿಕೆಟ್‌ ಬೆಲೆ ₹ 607. ಬೆಳಿಗ್ಗೆ 4 ಗಂಟೆಗೆ ಮತ್ತು ಬೆಳಿಗ್ಗೆ 8 ಗಂಟೆಗೆ ಹೀಗೆ ಎರಡು ಪಾಳಿಯಲ್ಲಿ ಸ್ಕಂದಗಿರಿಗೆ ಚಾರಣಿಗರು ಚಾರಣ ನಡೆಸಲು ಅವಕಾಶ ನೀಡಲಾಗಿತ್ತು.  ಶುಲ್ಕವು ಹೆಚ್ಚಾಗಿದೆ ಎನ್ನುವ ಆಕ್ಷೇಪಣೆಗಳು ಸಹ ಕೇಳಿ ಬಂದಿದ್ದವು. ವಾರಾಂತ್ಯದ ದಿನಗಳಲ್ಲಿ ಟಿಕೆಟ್‌ಗೆ ಬೇಡಿಕೆ ಹೆಚ್ಚಿರುತ್ತದೆ. ಈ ಬೇಡಿಕೆ ಹೆಚ್ಚಳವು ‘ಅಕ್ರಮ’ಕ್ಕೂ ದಾರಿ ಆಗಿತ್ತು. ಈ ಎಲ್ಲ ದೃಷ್ಟಿಯಿಂದ ಅರಣ್ಯ ಇಲಾಖೆಯು ಟಿಕೆಟ್ ದರವನ್ನು ಕಡಿತಗೊಳಿಸುತ್ತದೆಯೇ? ಟಿಕೆಟ್ ಮಾರಾಟ ಹೆಚ್ಚಿಸುತ್ತದೆಯೇ? ಅರಣ್ಯ ಇಲಾಖೆಗೆ ಜವಾವ್ದಾರಿವಹಿಸಿಕೊಂಡ ನಂತರ ಯಾವ ಬದಲಾವಣೆಗಳು ಆಗುತ್ತದೆ ಎನ್ನುವ ಕುತೂಹಲ ಚಾರಣಿಗರು ಮತ್ತು ಪ್ರವಾಸ ಪ್ರಿಯರಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.