ಚಿಂತಾಮಣಿ: ‘ಸುಸ್ಥಿರ ಕೃಷಿಗಾಗಿ ಮಣ್ಣಿನ ಆರೋಗ್ಯ ಕಾಪಾಡುವುದು ಪ್ರತಿಯೊಬ್ಬ ಕೃಷಿಕನ ಕರ್ತವ್ಯವಾಗಿದೆ’ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ತನ್ವೀರ್ ಅಹ್ಮದ್ ಸಲಹೆ ನೀಡಿದರು.
ತಾಲ್ಲೂಕಿನ ಚಲಮಕೋಟೆ ಗ್ರಾಮದಲ್ಲಿ ಕೃಷಿ ಇಲಾಖೆಯಿಂದ ಬುಧವಾರ ಹಮ್ಮಿಕೊಂಡಿದ್ದ ಬೆಳೆ ಕ್ಷೇತ್ರೋತ್ಸವ ಮತ್ತು ಮಣ್ಣು ಆರೋಗ್ಯ ಅಭಿಯಾನದಲ್ಲಿ ಅವರು ಮಾತನಾಡಿದರು.
ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ಕೃಷಿ ವಿಜ್ಞಾನಿಗಳು, ಕೃಷಿ ಅಧಿಕಾರಿಗಳ ಸಲಹೆ ಪಡೆದು ಮಣ್ಣಿನ ಪರೀಕ್ಷೆಗೆ ಅನುಗುಣವಾಗಿ ಬೆಳೆಗಳನ್ನು ಬೆಳೆಯಬೇಕು. ಇತಿಮಿತಿಯಾಗಿ ಗೊಬ್ಬರ ಹಾಗೂ ಕೀಟನಾಶಕ ಬಳಕೆ ಮಾಡಬೇಕು ಎಂದು ತಿಳಿಸಿದರು.
ಕೃಷಿಯಲ್ಲಿನ ಪೈಪೋಟಿ ಹಾಗೂ ಅಧಿಕ ಇಳುವರಿ ಪಡೆಯಬೇಕು ಎಂಬ ಆಸೆಯಿಂದ ಅನಾವಶ್ಯಕವಾಗಿ ಅಧಿಕ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ, ಪೀಡೆನಾಶಕ ಬಳಸಲಾಗುತ್ತಿದೆ. ಇದರಿಂದ ಮಣ್ಣಿನ ಭೌತಿಕ, ರಾಸಾಯನಿಕ ಮತ್ತು ಜೈವಿಕ ಗುಣಧರ್ಮಗಳು ಕ್ಷೀಣಿಸುತ್ತಿವೆ ಎಂದರು.
ಮಣ್ಣು ಪರೀಕ್ಷೆಯ ಫಲಿತಾಂಶಕ್ಕೆ ಅನುಗುಣವಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆ, ಹಸಿರುಎಲೆ ಗೊಬ್ಬರದ ಬಳಕೆ, ಎರೆಹುಳು ಗೊಬ್ಬರ ಬಳಸಿ ಮಣ್ಣಿನ ಆರೋಗ್ಯ ಕಾಪಾಡಬೇಕು. ರೈತರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ವಿಷಯುಕ್ತ ಮಣ್ಣಿನಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುವುದಿಲ್ಲ ಎಂದು ಎಚ್ಚರಿಸಿದರು.
ಪೂರ್ವಿಕರು ಪ್ರತಿವರ್ಷದ ಬೇಸಿಗೆ ಕಾಲದಲ್ಲಿ ಜಮೀನುಗಳಿಗೆ ಅನುಗುಣವಾಗಿ ಕೆರೆ, ಕುಂಟೆಯ ಮಣ್ಣು, ಮರಳನ್ನು ಸಾಗಿಸುತ್ತಿದ್ದರು. ಹೊಂಗೆ ಮತ್ತಿತರ ಮರಗಳ ಎಲೆಗಳ ಸುರುಗು, ಹೂಗಳನ್ನು ಸಂಗ್ರಹಿಸಿ ಜಮೀನುಗಳಿಗೆ ಹಾಕುತ್ತಿದ್ದರು. ಆ ಮೂಲಕ ಮಣ್ಣಿನ ಸಮತೋಲನ ಕಾಪಾಡಿಕೊಳ್ಳುತ್ತಿದ್ದರು. ಇಂದಿನ ರೈತರು ಇದನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ಕ್ರಾಂತಿಯ ನಂತರ ವ್ಯವಸಾಯದಲ್ಲಿ ರಸಗೊಬ್ಬರದ ಬಳಕೆ ಅತಿಯಾಯಿತು. ರೈತರು ಜಮೀನುಗಳಿಗೆ ಇತರೆ ಮಣ್ಣಿನ ಮಿಶ್ರಣ, ಸೊಪ್ಪುಗಳ ಸುರುಗು, ಹಸಿರೆಲೆ ಹಾಕುವುದು, ಸಾವಯವ ಗೊಬ್ಬರದ ಬಳಕೆಯನ್ನು ಸಂಪೂರ್ಣವಾಗಿ ಕೈಬಿಟ್ಟರು. ಇದರಿಂದಾಗಿ ಮಣ್ಣಿನ ಆರೋಗ್ಯ ಹದಗೆಟ್ಟಿದೆ. ಆಹಾರ ಪದಾರ್ಥಗಳು ತಿನ್ನಲು ಯೋಗ್ಯವಾಗಿಲ್ಲದಂತೆ ಆಗುತ್ತಿವೆ ಎಂದು ತಿಳಿಸಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕಿ ಅನುರೂಪಾ ಕಾರ್ಯಕ್ರಮ ಉದ್ಘಾಟಿಸಿದರು. ಸಹಾಯಕ ಕೃಷಿ ನಿರ್ದೇಶಕ ಡಾ.ಶ್ರೀನಿವಾಸ್, ಕೃಷಿ ಅಧಿಕಾರಿ ಪ್ರಸಾದ್, ಮುಖಂಡ ಲಕ್ಷ್ಮೀನಾರಾಯಣರೆಡ್ಡಿ, ನಾಗರಾಜ ಮತ್ತು ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.