ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣ ಗುಬ್ಬಚ್ಚಿ ಗೂಡುಗಳು, ಗೂಡು ತುಂಬಾ ಮೊಟ್ಟೆಗಳು, ಚೀಂವ್, ಚೀಂವ್ ಅನ್ನುವ ಮರಿಗಳು. ಕಾಲೇಜಿನ ಪ್ರತಿದಿನದ ದಿನಚರಿಯಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಗುಬ್ಬಿಗಳ ಪೋಷಣೆಯೂ ಒಂದು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಗುಬ್ಬಿಗಳು ಹತ್ತಾರು ಗೂಡುಗಳನ್ನು ಕಟ್ಟುಕೊಂಡಿದೆ. ಸಂತೋಷದಿಂದ ಅತ್ತಿಂದತ್ತ, ಇತ್ತಿಂದತ್ತ ತಿರುಗಾಡುತ್ತಿವೆ. ಕಾಲೇಜಿನ ಪ್ರಾಂಶುಪಾಲರ ಕೊಠಡಿ ಸೇರಿದಂತೆ ತರಗತಿ ಕೊಠಡಿಗಳ ಕಿಟಕಿಗಳಲ್ಲಿ ಹುಲ್ಲನ್ನು ತಂದು, ನಾಲ್ಕೈದು ಗೂಡುಗಳನ್ನು ಕಟ್ಟಿದೆ. ಚಿಕ್ಕಚಿಕ್ಕ ಮರಿಗಳು ಇದೆ. ಅಲ್ಲದೇ ಕಾಲೇಜಿನ ಆವರಣ, ಉದ್ಯಾನದ ಮರ-ಗಿಡಗಳ ಪೊದೆಗಳಲ್ಲಿ ಗುಬ್ಬಚ್ಚಿಗಳು ಗೂಡುಗಳು ಕಟ್ಟಿಕೊಂಡಿದೆ. ಅಳವಿನಂಚಿದಲ್ಲಿರುವ ಪಕ್ಷಿ-ಪ್ರಾಣಿಗಳ ಸಂಕುಲ ಹಾರಾಡುತ್ತಾ-ಚೀರಾಡುತ್ತಾ ಸ್ವಂತ ಮನೆಯಂತೆ ಮೆರೆಯುತ್ತಿದೆ.
ಬೇಸಿಗೆಕಾಲದಲ್ಲಿ ಆಹಾರ-ಧಾನ್ಯಗಳ ಕೊರತೆ ಇರುವುದರಿಂದ, ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪ್ರತಿನಿತ್ಯದ ಬೆಳಗ್ಗೆ-ಸಂಜೆ ದಿನಚರಿಯಂತೆ ಗೂಡುಗಳಿಗೆ ಅಕ್ಕಿ, ರಾಗಿ ಹಾಕುತ್ತಿದ್ದಾರೆ. ಕಾಲೇಜಿನ ಆವರಣದಲ್ಲಿನ ಗಿಡ-ಮರಗಳಿಗೆ ಪ್ಲಾಸ್ಟಿಕ್ ಬಾಟಲಿಗಳನ್ನು ಕಟ್ಟಿದ್ದಾರೆ. ಅಕ್ಕಿ, ರಾಗಿ, ಸಜ್ಜೆ ಸೇರಿದಂತೆ ದವಸ-ಧಾನ್ಯಗಳನ್ನು ಹಾಗೂ ನೀರನ್ನು ಬಾಟಲಿಗಳಲ್ಲಿ ತುಂಬಿಸುತ್ತಿದ್ದಾರೆ. ಅಲ್ಲದೇ ಕಾಲೇಜಿನ ಮುಂದೆ ಇರುವ ಉದ್ಯಾನವನದ ಗಿಡ-ಮರಗಳ ಕೆಳಗೆ ಸಣ್ಣ-ಸಣ್ಣ ಬಾಟಲಿಗಳಿಟ್ಟು, ಸದಾ ನೀರು ಇರುವಂತೆ ಮಾಡಿದ್ದಾರೆ.
‘ಗುಬ್ಬಚ್ಚಿ, ಮೊಲ, ಕಾಗೆ, ಹದ್ದು, ಹಾವುಗಳು ದವಸ-ಧಾನ್ಯಗಳನ್ನು ತಿಂದು, ನೀರು ಕುಡಿಯುತ್ತಿವೆ. ಅಲ್ಲದೇ, ಕೊಕ್ಕಿನ ಮೂಲಕ ತಮ್ಮ ಮರಿಗಳಿಗೂ ದವಸ-ಧಾನ್ಯಗಳನ್ನು ಉಣಬಡಿಸುತ್ತಿವೆ. ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಧ್ಯಾಹ್ನದ ಬಿಸಿಯೂಟದ ಸಂದರ್ಭದಲ್ಲಿ ಹೊರಗೆ ಹಾಕಿದ ಅನ್ನ, ತರಕಾರಿ, ದವಸ-ಧಾನ್ಯಗಳನ್ನು ತಿನ್ನುತ್ತಿವೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗೂಡುಗಳನ್ನು, ದವಸ-ಧಾನ್ಯಗಳನ್ನು, ನೀರು ಹಾಕಿ ಸುರಕ್ಷಿತವಾಗಿ ಹಾರೈಕೆ ಮಾಡುತ್ತಿದ್ದೇವೆ’ ಎಂದು ಕಾಲೇಜಿನ ವಿದ್ಯಾರ್ಥಿನಿಯರಾದ ಅಶ್ವಿನಿ, ಜಾಸ್ಮಿನ್, ಲಾವಣ್ಯ, ಗಾಯಿತ್ರಿ ತಿಳಿಸಿದ್ದಾರೆ.
ಪರಿಸರ ಉಳಿಸಿ
‘ಮನುಷ್ಯರು ತಮ್ಮ ಸ್ವಾರ್ಥ ಹಾಗೂ ಹಣದಾಹಕ್ಕೆ ಗಿಡ-ಮರಗಳು ಕಡಿದು ಹಾಕುತ್ತಿದ್ದಾರೆ. ಕಲ್ಲುಸಾಗಾಣಿಕೆಯಿಂದ ಬೆಟ್ಟಗಳು ಬೋಳಾಗುವ ಹಂತದಲ್ಲಿ ಇದೆ. ಪರಿಸರ ಹಾಗೂ ಗಿಡ-ಮರಗಳ ನಾಶದಿಂದ ಪ್ರಕೃತಿಯ ಸೊಬಗು ಕಳೆದುಕೊಳ್ಳುತ್ತಿದೆ. ಮಳೆಯೂ ಬರುತ್ತಿಲ್ಲ. ಜನ-ಜಾನುವಾರುಗಳಿಗೆ ನೀರಿನ ಹಾಹಾಕಾರ ಸೃಷ್ಟಿಯಾಗಿದೆ. ಪಕ್ಷಿ-ಪ್ರಾಣಿಗಳ ಸಂತತಿ ಕ್ಷೀಣಿಸುತ್ತಿರುವುದು ಆತಂಕಕಾರಿ ಆಗಿದೆ. ಎರೆಹುಳುನಂತಹ ಅನೇಕ ಪ್ರಾಣಿಗಳು ಕೃಷಿಗೆ ಬಳಸುತ್ತಾರೆ. ಪಕ್ಷಿ-ಪ್ರಾಣಿಗಳನ್ನು ರಕ್ಷಿಸಿ’ ಎನ್ನುತ್ತಾರೆ ವಿದ್ಯಾರ್ಥಿ ಅಂಜನ್ ಕುಮಾರ್.
ಸಂತಸ ತಂದಿದೆ
‘ತರಗತಿಗಳಲ್ಲಿ ಪ್ರಾಧ್ಯಾಪಕರು
ಪಾಠ ಮಾಡುವಾಗ ಗುಬ್ಬಚ್ಚಿಗಳ ಚೀಂವ್, ಚೀಂವ್ ಶಬ್ದ ಕೇಳಿ ಆನಂದಿಸುತ್ತೇವೆ. ಪ್ರತಿನಿತ್ಯ ನಾವು ಪಕ್ಷಿ-ಪ್ರಾಣಿಗಳಿಗೆ ಆಹಾರ, ನೀರು ನೀಡುತ್ತೇವೆ. ಬೇಸಿಗೆಗೆ ದಾಹ ಹೆಚ್ಚಾಗುತ್ತಿರುವುದರಿಂದ,
ಬಾಟಲಿಗಳಲ್ಲಿ ನೀರು ತುಂಬಿಸುತ್ತೇವೆ. ಪಕ್ಷಿ-ಪ್ರಾಣಿಗಳು ದವಸ-ಧಾನ್ಯಗಳನ್ನು ತಿಂದು, ನೀರು ಕುಡಿದು ಹೋಗುತ್ತಿರುವುದು ಸಂತೋಷ ತಂದಿದೆ’ ಎಂದು ಕಾಲೇಜಿನ ವಿದ್ಯಾರ್ಥಿನಿ ಗೀತಾಂಜಲಿ ಹೇಳಿದರು.
ಪಕ್ಷಿಗಳ ದಾಹ ನೀಗಿದೆ
‘ಕಾಲೇಜಿನಲ್ಲಿ 15ಕ್ಕೂ ಹೆಚ್ಚು ಗುಬ್ಬಚ್ಚಿಗಳ ಗೂಡುಗಳು ಇವೆ. ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹಮದ್, ಗ್ರಂಥಪಾಲಕ ಡಾ.ಸಿ.ಎಸ್.ವೆಂಕಟರಾಮರೆಡ್ಡಿ ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗೂಡುಗಳನ್ನು ಸಂರಕ್ಷಣೆ ಮಾಡುತ್ತಿದ್ದಾರೆ. ಕಾಲೇಜಿನ ಸುತ್ತಮುತ್ತಲೂ ದವಸ-ಧಾನ್ಯ ತಿನ್ನಲು, ನೀರು ಕುಡಿಯಲು ಮೊಲ, ಕಾಗೆ, ಹದ್ದು, ಹಾವು ಸೇರಿದಂತೆ ಪಕ್ಷಿ-ಪ್ರಾಣಿಗಳು ಬರುತ್ತವೆ. ಗುಬ್ಬಚ್ಚಿ ಗೂಡುಗಳ ಕಲರವ ಹೆಚ್ಚಾಗಿದೆ’ ಎಂದು ಕಾಲೇಜಿನ ಪ್ರಾಂಶುಪಾಲ ಪ್ರೊ.ವೈ.ನಾರಾಯಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.