ಚಿಕ್ಕಬಳ್ಳಾಪುರ: ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಗೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಸಮಿತಿ (ಎಸ್‌ಪಿಸಿಎ) ರಚಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ ಜಿಲ್ಲೆಯಲ್ಲಿ ಇಂದಿಗೂ ತಾಲ್ಲೂಕು ಮಟ್ಟದ ಎಸ್‌ಪಿಸಿಎ ಸಮಿತಿಗಳು ರಚನೆಯೇ ಆಗಿಲ್ಲ.
ಜಿಲ್ಲಾ ಮಟ್ಟದ ಎಸ್‌ಪಿಸಿಎ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ಪಂಚಾಯ್ತಿ ಸಿಇಒ ಉಪಾಧ್ಯಕ್ಷರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಆರ್‌ಟಿಒ, ಡಿಸಿಎಫ್, ನಗರಸಭೆ ಪೌರಾಯುಕ್ತ ಮತ್ತು ಸರ್ಕಾರೇತರ ಸಂಸ್ಥೆಗಳ ಇಬ್ಬರು ಸದಸ್ಯರು ಇರುತ್ತಾರೆ. ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.
ಇದೇ ರೀತಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಎಸ್‌ಪಿಸಿಎ ಸಮಿತಿಗಳು ರಚನೆಯಾಗಬೇಕು. ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುವಂತೆ ತಾಲ್ಲೂಕು ಮಟ್ಟದಲ್ಲಿಯೂ ಈ ಸಮಿತಿಗಳು ಪ್ರಾಣಿಗಳ ರಕ್ಷಣೆಗೆ ಕಾರ್ಯಪ್ರವೃತ್ತವಾಗಬೇಕು. ಆದರೆ ಜಿಲ್ಲೆಯಲ್ಲಿ ಹೊಸದಾಗಿ ರಚನೆಯಾಗಿರುವ ಎರಡೂ ತಾಲ್ಲೂಕುಗಳು ಸೇರಿದಂತೆ ಎಂಟೂ ತಾಲ್ಲೂಕುಗಳಲ್ಲಿ ಸಮಿತಿ ರಚನೆಯೇ ಆಗಿಲ್ಲ. ತಾಲ್ಲೂಕು ಮಟ್ಟದಲ್ಲಿ ಸಮಿತಿಗಳು ರಚನೆಯಾಗಬೇಕು ಎನ್ನುವುದೇ
ಮರೆತಿದೆ.
ಎಸ್‌ಪಿಸಿಎ ನಿಯಮಾವಳಿಗಳ ಪ್ರಕಾರ ಪ್ರಾಣಿಗಳ ರಕ್ಷಣೆಗೆ ಸಹಾಯವಾಣಿ, ವಾಹನ ವ್ಯವಸ್ಥೆ ಇರಬೇಕು. ಇಂತಹ ಕಡೆ ಅವಘಡದಿಂದ ಪ್ರಾಣಿಗಳು ಗಾಯಗೊಂಡಿವೆ ಎಂದು ಮಾಹಿತಿ ನೀಡಲು ಸಹಾಯವಾಣಿ, ಅವುಗಳನ್ನು ತರಲು ವಾಹನ ಮತ್ತು ಆರೈಕೆಗೆ ಸ್ಥಳವಿರಬೇಕು. ಆದರೆ ಜಿಲ್ಲೆಯಲ್ಲಿ ಆರೈಕೆ ಸ್ಥಳವಿಲ್ಲ. ರಕ್ಷಿಸಿದ ರಾಸುಗಳನ್ನು ಗುಡಿಬಂಡೆ ತಾಲ್ಲೂಕಿನಲ್ಲಿರುವ ‘ನಮ್ಮನಾಡು’ ಖಾಸಗಿ ಗೋಶಾಲೆಗೆ ಕಳುಹಿಸಲಾಗುತ್ತಿದೆ.
ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 2001ರಲ್ಲಿ ಜಾರಿಯಾಗಿದೆ. ಪ್ರಾಣಿಗಳ ರಕ್ಷಣೆಗಾಗಿ ರೂಪಿಸಿರುವ ಕಾಯ್ದೆ, ಆ ಬಗ್ಗೆ ಕೈಗೊಂಡಿರುವ ಕ್ರಮಗಳ ಕುರಿತು ತಾಲ್ಲೂಕು ಕೇಂದ್ರಗಳಲ್ಲಿ ಮಾಹಿತಿಯೂ ಇಲ್ಲ. ತಾಲ್ಲೂಕು ಹಂತದಲ್ಲಿ ಕಾಯ್ದೆಯ ಅನುಷ್ಠಾನ ಮತ್ತು ಜಾಗೃತಿಗಾಗಿ ಯಾವುದೇ ಸಮಿತಿಯೂ ನೇಮಕವಾಗಿಲ್ಲ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಒಂದೇ ಒಂದು ಕಾರ್ಯಕ್ರಮ ತಾಲ್ಲೂಕು ಹಂತಗಳಲ್ಲಿ ನಡೆದಿಲ್ಲ.
ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆಗೆ ರಕ್ಷಣೆಯಾಗಬೇಕಾಗಿದ್ದ ‘ಎಸ್‌ಪಿಸಿಎ’ ತಾಲ್ಲೂಕುಗಳಲ್ಲಿ ಬಲಗೊಂಡಿಲ್ಲ. ರಾಸುಗಳನ್ನು ಆಂಧ್ರಪ್ರದೇಶದ ಸಂತೆಗಳಿಂದ ಖರೀದಿಸಿ ರಾಷ್ಟ್ರೀಯ ಹೆದ್ದಾರಿ–44ರ ಮೂಲಕ ಜಿಲ್ಲೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಕರ್ನಾಟಕ ಪ್ರವೇಶಿಸುತ್ತಲೇ ಬಾಗೇಪಲ್ಲಿ ಟೋಲ್ ಬಳಿ ಪ್ರಾಣಿ ದಯಾಸಂಘದವರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಪೊಲೀಸರು ರಾಸುಗಳನ್ನು ರಕ್ಷಿಸುತ್ತಾರೆ.
ದನಗಳನ್ನು, ಸೀಮೆಹಸುಗಳನ್ನು, ಕುರಿ, ಮೇಕೆಗಳನ್ನು ಲಾರಿ, ಕ್ಯಾಂಟರ್‌ಗಳಲ್ಲಿ ನಿಲ್ಲಲು, ಮಲಗಲು, ಕೂರಲು ಜಾಗ ಇಲ್ಲದಂತೆ ತುಂಬಿಸುತ್ತಾರೆ. ತಮಿಳುನಾಡು, ಕೇರಳ ಕಡೆಗೆ ಅಕ್ರಮವಾಗಿ ಸಾಗಿಸುತ್ತಾರೆ. ಅರಣ್ಯಗಳು, ಬೆಟ್ಟಗುಡ್ಡಗಳಲ್ಲಿನ ಜಿಂಕೆ, ಕೃಷ್ಣಮೃಗ, ನವಿಲು, ಕಾಡುಹಂದಿ, ಕೌಜುಗಳು ಹೆಚ್ಚಿವೆ. ರಾಷ್ಟ್ರೀಯ ಹೆದ್ದಾರಿ ರಸ್ತೆ 44 ಸೇರಿದಂತೆ ಗ್ರಾಮೀಣ ರಸ್ತೆಗಳನ್ನು ದಾಟುವಾಗ ವಾಹನಗಳು ಡಿಕ್ಕಿಯಾಗಿ ಕೆಲ ಪ್ರಾಣಿಗಳು ಮೃತಪಟ್ಟಿವೆ.
ಬಾಗೇಪಲ್ಲಿ ತಾಲ್ಲೂಕು ವ್ಯಾಪ್ತಿಯಲ್ಲಿ ಬೇಟೆಗಾರರು ಮೊಲ, ಜಿಂಕೆ, ಕೃಷ್ಣಮೃಗ, ಕೌಜುಗಳನ್ನು ಬೇಟೆ ಆಡುತ್ತಿದ್ದಾರೆ. ಕೌಜುಪಕ್ಷಿಯನ್ನು ಕೆಲ ಡಾಬಾಗಳಲ್ಲಿ ಮಾರಾಟ ಮಾಡುವ ದಂಧೆ ಸಹ ಇದೆ. ಅನ್ಯ ಪ್ರದೇಶಗಳಿಂದ ಇಲ್ಲಿನ ಡಾಬಾಗಳಿಗೆ ಕೌಜುಪಕ್ಷಿಗಳನ್ನು ತಿನ್ನಲು ಜನರು ಬರುತ್ತಿದ್ದಾರೆ. ತಾಲ್ಲೂಕಿನ ವಾರದ ಸಂತೆ ಡಾಬಾ, ಅಂಗಡಿಗಳ ಬಳಿ ಅಕ್ರಮವಾಗಿ ಕೆಲವರು ವನ್ಯಜೀವಿಗಳನ್ನು ಮಾರಾಟ ಮಾಡುತ್ತಿದ್ದರೂ, ಎಸ್‌ಪಿಸಿಎ ಸಮಿತಿ, ಅರಣ್ಯ ಇಲಾಖೆಯವರು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಜಿಲ್ಲೆಯ ಪ್ರಮುಖ ಪಟ್ಟಣಗಳ ಮುಖ್ಯರಸ್ತೆಗಳಲ್ಲಿಯೇ ಬೀಡಾಡಿ ದನ, ಎಮ್ಮೆಗಳು ಎಲ್ಲೆಂದರಲ್ಲಿ ಸಂಚರಿಸುತ್ತಿವೆ. ಅವಘಡಕ್ಕೆ ತುತ್ತಾಗುವ ಪ್ರಾಣಿಗಳ ರಕ್ಷಣೆಗೆ ಯಾರೂ ಇಲ್ಲದಂತಾಗಿದೆ. ‘ಅಪಘಾತದಿಂದ ಗಾಯಗೊಂಡ ಅಥವಾ ಆರೈಕೆ ಅಗತ್ಯವಿರುವ ಪ್ರಾಣಿಗಳ ಚಿಕಿತ್ಸೆಗೆ ಜಿಲ್ಲಾ ಕೇಂದ್ರಗಳಲ್ಲಿಯೇ ಸೂಕ್ತ ಸೌಲಭ್ಯವಿಲ್ಲ. ಚಿಕಿತ್ಸೆಗೆ ಒಂದು ಕಡೆ ವ್ಯವಸ್ಥೆ ಮಾಡಿದರೆ ಅನುಕೂಲ’ ಎಂದು ಪ್ರಜ್ಞಾವಂತರು ಆಗ್ರಹಿಸುತ್ತಿದ್ದಾರೆ.
ಎಸ್‌ಪಿಸಿಎ ಸಭೆ
ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಎಸ್‌ಪಿಸಿಎ ಸಭೆಯು ನಡೆಯಿತು. ಇಲ್ಲಿ ಬೀದಿ ನಾಯಿಗಳ ಹಾವಳಿ ಮತ್ತು ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಬಗ್ಗೆ ಚರ್ಚಿಸಲಾಯಿತು ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ರಂಗಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ತಾಲ್ಲೂಕು ಮಟ್ಟದಲ್ಲಿ ಎಸ್‌ಪಿಸಿಎ ಸಮಿತಿಗಳು ರಚನೆಯಾಗಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
‘ಕೆಲವೇ’ ವಿಷಯ ಚರ್ಚೆ
ಎಸ್‌ಪಿಸಿಎ ಸಭೆಗಳಲ್ಲಿ ಈ ಹಿಂದಿನ ವರ್ಷಗಳಲ್ಲಿ ಗೋಶಾಲೆ ನಿರ್ಮಾಣದ ವಿಚಾರಗಳು ಮಾತ್ರ ಪ್ರಮುಖವಾಗಿ ಚರ್ಚೆ ಆಗುತ್ತಿದ್ದವು. ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗೋಶಾಲೆ ನಿರ್ಮಾಣವಾಗಿದೆ. ಈಗ ಈ ಸಭೆಗಳಲ್ಲಿ ಬೀದಿನಾಯಿಗಳು ಅವುಗಳ ಹಾವಳಿ ಮತ್ತು ಸಂತಾನಶಕ್ತಿ ಹರಣ ಚಿಕಿತ್ಸೆಯ ಬಗ್ಗೆ ಮಾತ್ರ ಪ್ರಮುಖವಾಗಿ ಚರ್ಚಿಸಲಾಗುತ್ತದೆ. ಉಳಿದಂತೆ ಬಿಡಾಡಿ ದನಗಳು ಗಾಯಗೊಂಡ ವನ್ಯಜೀವಿಗಳ ರಕ್ಷಣೆ ಸ್ಥಳದ ಕೊರತೆ ಸೇರಿದಂತೆ ಎಸ್‌ಪಿಸಿಎಗೆ ಸಂಬಂಧಿಸಿದ ವಿಚಾರಗಳು ಚರ್ಚೆ ಆಗುವುದಿಲ್ಲ ಎನ್ನುವ ಮಾತುಗಳು ಸಹ ಇವೆ.
1962 ಸಹಾಯವಾಣಿ
ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಮತ್ತು ರಕ್ಷಣೆಗೆ ಸಹಾಯವಾಣಿ 1962 ಇದೆ. ಇದು ರಾಜ್ಯ ಮಟ್ಟದ ಸಹಾಯವಾಣಿಯಾಗಿದೆ. ಪ್ರಾಣಿಗಳು ಅವಘಡಕ್ಕೆ ತುತ್ತಾದರೆ ಈ ಸಹಾಯವಾಣಿಗೆ ಕರೆ ಮಾಡಬಹುದು. ಈ ರಾಜ್ಯ ಸಹಾಯವಾಣಿಯಿಂದ ಜಿಲ್ಲೆಗೆ ಮಾಹಿತಿ ರವಾನಿಸಲಾಗುತ್ತದೆ ಎಂದು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ತಿಳಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.