ADVERTISEMENT

ಚಿಕ್ಕಬಳ್ಳಾಪುರ: ಚೇಳೂರಿನಲ್ಲೊಂದು ಅಂದದ ಶಾಲೆ

ಶಾಲೆಗೆ ಬೇಕು ಹೆಚ್ಚಿನ ಕೊಠಡಿ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 8:27 IST
Last Updated 7 ನವೆಂಬರ್ 2024, 8:27 IST
ಶಾಲಾ ಆವರಣದ ವರಾಂಡದಲ್ಲೇ ಪ್ರತಿನಿತ್ಯ ಮಕ್ಕಳಿಗೆ ಪಾಠ ಪ್ರವಚನಗಳು ನಡೆಯುತ್ತಿವೆ
ಶಾಲಾ ಆವರಣದ ವರಾಂಡದಲ್ಲೇ ಪ್ರತಿನಿತ್ಯ ಮಕ್ಕಳಿಗೆ ಪಾಠ ಪ್ರವಚನಗಳು ನಡೆಯುತ್ತಿವೆ   

ಚೇಳೂರು: ಸರ್ಕಾರಿ ಶಾಲೆ ಎಂದರೆ ಓದುವ ಮಕ್ಕಳಿಗೆ ಸೌಲಭ್ಯಗಳಿಲ್ಲ, ಪಾಠ ಮಾಡಲು ಶಿಕ್ಷಕರಿಲ್ಲ, ಶೈಕ್ಷಣಿಕ ಪ್ರಗತಿ ಸಾಧ್ಯವಿಲ್ಲ ಎನ್ನುವುದು ಸಾಮಾನ್ಯ ಗ್ರಹಿಕೆ. ಇಂತಹ ನಂಬಿಕೆಯಿಂದಾಗಿಯೇ ಎಷ್ಟೋ ಪೋಷಕರು ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದಿಸಬೇಕು ಅಂದುಕೊಳ್ಳುತ್ತಾರೆ.

ಆದರೆ ಸಕಲ ಸೌಲಭ್ಯಗಳು, ಅವುಗಳ ಸಮರ್ಪಕ ಬಳಕೆ ಮತ್ತು ಗುಣಮಟ್ಟದ ಶಿಕ್ಷಣದಿಂದಾಗಿ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆದು ನಿಂತಿದೆ ಚೇಳೂರು ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.

ಈ ಶಾಲೆಯ ಮುಖ್ಯ ಆಕರ್ಷಣೆಯೇ ಇಲ್ಲಿನ ಕಟ್ಟಡಕ್ಕೆ ಹಚ್ಚಿರುವ ಬಣ್ಣ. ರೈಲಿನ ಬೋಗಿಗಳಂತೆ ಶಾಲಾ ಕೊಠಡಿಗಳಿಗೆ ಬಣ್ಣ ಹಚ್ಚಲಾಗಿದ್ದು, ಇದು ವಿದ್ಯಾರ್ಥಿಗಳನ್ನು ಆಕರ್ಷಿಸಿದೆ. ಶಾಲೆಯ ಈ ವಿನೂತನ ಪ್ರಯತ್ನದ ಜತೆಗೆ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸೌಕರ್ಯಗಳ ಸಮಪರ್ಕ ಬಳಕೆಗೂ ಒತ್ತು ನೀಡಿರುವ ಪರಿಣಾಮ ಶಾಲೆ ಅಭಿವೃದ್ಧಿಯತ್ತ ಸಾಗುತ್ತಿದೆ. ಶಾಲೆಯಲ್ಲಿ 2024-25ನೇ ಸಾಲಿನಲ್ಲಿ ಎಲ್‌ಕೆಜಿಯಿಂದ ಹಿಡಿದು ಏಳನೇ ತರಗತಿವರೆಗೆ ತರಗತಿಗಳು ನಡೆಯುತ್ತಿದ್ದು, ಒಟ್ಟು 144 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 

ADVERTISEMENT

ಶಾಲಾ ಕೊಠಡಿಗಳ ಕೊರತೆ: ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವ ಈ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅಗತ್ಯಕ್ಕೆ ತಕ್ಕಂತೆ ಕೊಠಡಿಗಳಿಲ್ಲದ ಕಾರಣ ಶಿಕ್ಷಕರು–ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. 144 ವಿದ್ಯಾರ್ಥಿಗಳಿರುವ ಶಾಲೆಗೆ ಕೇವಲ 4 ಕೊಠಡಿಗಳು ಮಾತ್ರ ಲಭ್ಯವಿದ್ದು, ಎಲ್ಲಾ ತರಗತಿಗಳಿಗೂ ಕೊಠಡಿಗಳಿಲ್ಲದ ಕಾರಣ ಪ್ರತಿ ನಿತ್ಯ ಶಾಲಾ ವರಾಂಡದಲ್ಲೇ ಮೂರು ತರಗತಿಗಳು ನಡೆಯುವಂತಾಗಿದೆ.ಇದೀಗ ಚಳಿಗಾಳಿ ಆರಂಭವಾಗಿರುವುದರಿಂದ ವರಾಂಡದಲ್ಲಿ ತರಗತಿ ನಡೆಸಲು ಶಿಕ್ಷಕರಿಗೂ, ಮಕ್ಕಳಿಗೂ ಕಷ್ಟವಾಗುತ್ತಿದೆ.

ಎಲ್‌ಕೆಜಿಯಿಂದ 6ನೇ ತರಗತಿಯವರೆಗೂ ಕನ್ನಡ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮಗಳಿವೆ, 7ನೇ ತರಗತಿ ಕನ್ನಡ ಮಾಧ್ಯಮ ಮಾತ್ರ ಇದೆ. 4 ಜನ ಖಾಯಂ ಶಿಕ್ಷಕರು, ಒಬ್ಬರು ನಿಯೋಜನೆ ಮೇಲೆ ಬಂದಿರುವ ಶಿಕ್ಷಕ ಹಾಗೂ ಒಬ್ಬರು ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳಲಾಗಿದೆ.

ಮೂಲ ಸೌಲಭ್ಯ ಕಲ್ಪಿಸಿ: ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ, ಅಭಿವೃದ್ಧಿಗೆ, ಬಡ ಮಕ್ಕಳ ಶಿಕ್ಷಣಕ್ಕೆ ಕೋಟ್ಯಂತರ ರೂಪಾಯಿ ಹಣ ಇಟ್ಟಿದೆ. ಆದರೆ ಸರ್ಕಾರಿ ಶಾಲೆಗಳಿಗೆ ಶಾಲಾ ಕೊಠಡಿಗಳು ಸೇರಿದಂತೆ, ಬೆಂಚು, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು. ಇಲ್ಲಿ ಉತ್ತಮ ಗುಣ ಮಟ್ಟ ಶಿಕ್ಷಣ ದೊರೆಯುತ್ತದೆ, ಆಕರ್ಷಣೀಯವಾಗಿ ಶಾಲಾ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಅಗತ್ಯ ಕೊಠಡಿಗಳ ಕೊರತೆಯಿಂದ ಮಕ್ಕಳಿಗೆ ಅನಾನುಕೂಲವಾಗುತ್ತಿದೆ. ಅಧಿಕಾರಿಗಳು ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೆಲ ಪೋಷಕರು ಮನವಿ ಮಾಡಿದರು.

ಶಾಲಾ ಆವರಣದ ವರಾಂಡದಲ್ಲೇ ಪ್ರತಿನಿತ್ಯ ಮಕ್ಕಳಿಗೆ ಪಾಠ ಪ್ರವಚನ ಗಳು
ನಮ್ಮ ಶಾಲೆಯಲ್ಲಿ ಉತ್ತಮ ಶಿಕ್ಷಕರು, ಗುಣಮಟ್ಟದ ಶಿಕ್ಷಣ ಮತ್ತು ಸೌಕರ್ಯಗಳ ಸಮಪರ್ಕ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆದರೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತರಗತಿಗಳು ನಡೆಯಬೇಕಾಗುವುದರಿಂದ ಶಾಲಾ ಕೊಠಡಿಗಳ‌ ಕೊರತೆ ಇದೆ. ಎಲ್ಲಾ ಮಕ್ಕಳನ್ನು ಒಂದೇ ತರಗತಿಯಲ್ಲಿ ಕೂರಿಸಿ ಪಾಠ ಮಾಡುವುದು ಕಷ್ಟ. ಪಠ್ಯ ಪುಸ್ತಕಗಳ ವಿಷಯವಾರು ಬೋಧಿಸುವ ಶಿಕ್ಷಕರು ಆಯಾ ತರಗತಿಗಳ ಸಮಯದಲ್ಲಿ ಮಕ್ಕಳನ್ನು ವರಾಂಡದಲ್ಲೇ ಕಪ್ಪುಹಲಗೆಯ ಮುಂದೆ ಕೂರಿಸಿಕೊಂಡು ಪಾಠ ಮಾಡುತ್ತಾರೆ. ಕೊಠಡಿಗಳ ಸಮಸ್ಯೆಯನ್ನು ಈಗಾಗಲೇ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ.
–ಎಲ್. ನಾಗರಾಜ, ಪ್ರಬಾರಿ ಮುಖ್ಯ ಶಿಕ್ಷಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.