ಬಾಗೇಪಲ್ಲಿ: ಪಟ್ಟಣದ ಕುಂಬಾರಪೇಟೆಯ ಬೀದಿಯಲ್ಲಿ ರಿಜ್ವಾನ್ ಪಾಷಾ, ಸಮೀನಾ ತಾಜ್ ದಂಪತಿ ತಯಾರಿಸುವ ಬಿಸಿ ಬಿಸಿ ಸಮೋಸಾಗಳು ಪ್ರತಿಯೊಬ್ಬರ ಬಾಯಲ್ಲೂ ನೀರೂರಿಸುತ್ತದೆ.
ಮೂಲತಃ ರಿಜ್ವಾನ್‍ಪಾಷ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರದವರು. ಒಂಬತ್ತು ವರ್ಷ ಕಾಲ ವಿಜಯಪುರದಲ್ಲಿ ಸಮೋಸಾ ತಯಾರಿಸಿ, ಮಾರಾಟ ಮಾಡಿ ಪ್ರಖ್ಯಾತಿ ಹೊಂದಿದ್ದರು. ಕಳೆದ ಎಂಟು ವರ್ಷಗಳ ಹಿಂದೆ ಪಟ್ಟಣದ ಕುಂಬಾರಪೇಟೆಗೆ ಕುಟುಂಬವು ಸ್ಥಳಾಂತರ ಗೊಂಡಿತು. ಕುಂಬಾರಪೇಟೆಯ ಮುಖ್ಯರಸ್ತೆಯಲ್ಲಿ ಸ್ವಾರ್ ದಿಲ್‍ದಾರ್ ಸಮೋಸಾ ಅಂಗಡಿ ಆರಂಭಿಸಿ, ವಿಜಯಪುರದಲ್ಲಿ ಜನರಿಗೆ ಉಣಬಡಿಸಿದ ರುಚಿಯನ್ನು ಇಲ್ಲಿ ಉಣಬಡಿಸುತ್ತಿದ್ದಾರೆ.
ರಿಜ್ವಾನ್ ಪಾಷ ಹಾಗೂ ಪತ್ನಿ ಸಮೀನಾ ತಾಜ್ ಅವರೇ ಸ್ವತಃ ಸಮೋಸಾ ತಯಾರಿಸುತ್ತಾರೆ. ಇಲ್ಲಿ ಸಗ್ಗಟು ಮತ್ತು ಚಿಲ್ಲರೆ ವ್ಯಾಪಾರವು ನಡೆಯುತ್ತಿದೆ. ಪಟ್ಟಣದ ತಿಂಡಿ ವ್ಯಾಪಾರಿಗಳು ಇವರಿಂದಲೇ ಸಮೋಸಾ ಖರೀದಿಸುತ್ತಿದ್ದಾರೆ. ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಒಂದು ಸಮೋಸಾಗೆ ₹7ರಂತೆ ಮಾರಾಟ ಮಾಡುತ್ತಾರೆ.
‘ಪ್ರತಿದಿನ 800 ರಿಂದ 1000 ಸಮೋಸಾ ಸಿದ್ಧಪಡಿಸುತ್ತೇವೆ. 500ಕ್ಕೂ ಹೆಚ್ಚು ಸಮೋಸಾಗಳು ಚಿಕ್ಕಬಳ್ಳಾಪುರ, ಪೇರೇಸಂದ್ರ, ಮಿಟ್ಟೇಮರಿ, ಪಾತಪಾಳ್ಯ, ಸೇರಿದಂತೆ ವಿವಿಧ ಕಡೆಗಳಲ್ಲಿ ಸಮೋಸಾ ಅಂಗಡಿ ಹಾಗೂ ಬೇಕರಿ, ತಿಂಡಿತಿನಿಸುಗಳ ಅಂಗಡಿಗಳಿಗೆ ಮಾರಾಟ ಮಾಡುತ್ತೇವೆ. ಉಳಿದಂತೆ ಪಟ್ಟಣದ ತಿಂಡಿತಿನಿಸು ಮಾರಾಟಗಾರರು, ಅಂಗಡಿಗಳ ಮಾಲೀಕರು 50 ಹಾಗೂ 100 ಸಮೋಸಾ ಖರೀದಿಸುತ್ತಾರೆ’ ಎನ್ನುತ್ತಾರೆ ಪಾಷಾ ಮತ್ತು ತಾಜ್ ದಂಪತಿ.
‘ನಮ್ಮ ಅಜ್ಜ, ತಂದೆ ಸೇರಿದಂತೆ ನಮ್ಮ ವಂಶಸ್ಥರು ಸಮೋಸಾ ತಯಾರಿಸುತ್ತಿದ್ದರು. ನಾನು ಯುವಕನಾಗಿದ್ದಾಗ ತಂದೆ–ತಾಯಿ ಸಮೋಸಾ ತಯಾರಿಸಿದರೆ, ನಾನು ₹4–₹5ಗೆ ಮಾರಾಟ ಮಾಡುತ್ತಿದ್ದೆ’ ಎಂದು ರಿಜ್ವಾನ್ ಪಾಷಾ ನೆನಪಿಸಿಕೊಂಡರು.
ಪತಿ ರಿಜ್ವಾನ್ ಚಿಕ್ಕಬಳ್ಳಾಪುರ, ಪೇರೇಸಂದ್ರಗೆ ಹೋಗಿ ಮಾರಾಟ ಮಾಡುತ್ತಾರೆ. ಪ್ರತಿ ದಿನ ಪಟ್ಟಣದಲ್ಲಿ 200 ರಿಂದ 400 ಸಮೋಸಾಗಳನ್ನು ಮಾರಾಟ ಮಾಡುತ್ತೇನೆ. ಕಸುಬಿನಿಂದ ಕುಟುಂಬ ಪೋಷಣೆಗೆ ಸಹಕಾರಿ ಆಗಿದೆ. ಇದರಿಂದ ಸ್ವಾವಲಂಬಿ ಜೀವನ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಸಮೀನಾ ತಾಜ್.
ಸಂಜೆ ಸಮಯದಲ್ಲಿ ಪಾನಿಪೂರಿ, ಮಸಾಲೆಪೂರಿಯಂತಹ ಚಾಟ್ಸ್ ಜೊತೆಗೆ ಸಮೋಸಾ ಸೇವಿಸುವುದು ರೂಢಿಯಾಗಿದೆ. ಇಲ್ಲಿನ ಸಮೋಸಾಗಳು ಕಿರಿಯರಿಗೆ, ಹಿರಿಯರಿಗೆ ಅಚ್ಚುಮೆಚ್ಚು ಎಂದು ಹೇಳುತ್ತಾರೆ ನಿವೃತ್ತ ಶಿಕ್ಷಕ ಇಲಾಹಿ ಭಕ್ಷ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.