ಶಿಡ್ಲಘಟ್ಟ: ಶಿಡ್ಲಘಟ್ಟ ಕ್ಷೇತ್ರ ‘ಬಂಡಾಯ ಅಭ್ಯರ್ಥಿ’ಗಳು ಮತ್ತು ಟಿಕೆಟ್ ನಡುವಿನ ಗೊಂದಲಗಳ ಕಾರಣಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಗಮನ ಸೆಳೆದಿತ್ತು. ಈ ಬಾರಿಯೂ ಬಂಡಾಯ, ಆಂತರಿಕ ಬೇಗುದಿ, ಒಳಜಗಳ ಕ್ಷೇತ್ರದಲ್ಲಿದೆ.
2018ರ ಚುನಾವಣೆಗಿಂತ ಸ್ವಲ್ಪ ಭಿನ್ನ ಎನ್ನುವಂತೆ ಈ ಬಾರಿ ಕಾಂಗ್ರೆಸ್‌ನಲ್ಲಿ ಮಾತ್ರ ಈ ಬೀದಿ ಜಗಳ ಈಗಲೇ ಕಾಣುತ್ತಿದೆ. ಚುನಾವಣೆಯ ಸಮಯದಲ್ಲಿ ಈ ಜಗಳ ತಣಿಯುತ್ತದೆಯೊ ಸ್ಫೋಟಿಸುತ್ತದೆಯೊ ನೋಡಬೇಕು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷವನ್ನು ಬಂಡಾಯ ಮತ್ತು ಒಡಕು ತೀವ್ರವಾಗಿ ಬಾಧಿಸಿದ್ದವು. ಆದರೆ ಈ ಬಾರಿ ಜೆಡಿಎಸ್‌ನಲ್ಲಿ ಯಾವುದೇ ಗೊಂದಲಗಳು ಇಲ್ಲ. ಮೇಲೂರು ಬಿ.ಎನ್.ರವಿಕುಮಾರ್ ಅವರೇ ಕ್ಷೇತ್ರದ ಜೆಡಿಎಸ್‌ನ ದಂಡನಾಯಕ. ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆ ನಡೆದಿದೆ.
ಆದರೆ ಕಾಂಗ್ರೆಸ್‌ನಲ್ಲಿ ಮಾತ್ರ ಕಳೆದ ಬಾರಿಗಿಂತಲೂ ಈ ಬಾರಿ ಭಿನ್ನಾಭಿಪ್ರಾಯಗಳು ಹೆಚ್ಚಿವೆ. ಈ ಬಣ ರಾಜಕಾರಣ ಕಾಂಗ್ರೆಸ್ ಟಿಕೆಟ್ ಘೋಷಣೆಯ ತರುವಾಯ ಯಾವ ರೂಪು ಪಡೆಯುತ್ತದೆ ಎನ್ನುವುದೇ ಸದ್ಯದ ಕುತೂಹಲ. ಬಣ ರಾಜಕಾರಣದ ಕಾರಣ ಕಾರ್ಯಕರ್ತರು ಸಹ ಹರಿದು ಹಂಚಿದ್ದಾರೆ. ಮುಖಂಡರು ಕಾರ್ಯಕರ್ತರು ಬಣಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಅಬ್ಲೂಡು, ದಿಬ್ಬೂರಹಳ್ಳಿ, ಕಸಬಾ, ಜಂಗಮಕೋಟೆ ಹೋಬಳಿಗಳನ್ನು ಒಳಗೊಂಡಿರುವ ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದೆ. ಮುಸ್ಲಿಮರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತದಾರರು ನಿರ್ಣಾಯಕರಾಗಿದ್ದಾರೆ. ಮೂರು ಪಕ್ಷಗಳು ಸಹ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುತ್ತವೆ. ಉಳಿದ ಸಮುದಾಯದ ಮತದಾರರ ಮನಗೆಲ್ಲುವವರು ರೇಷ್ಮೆ ನಾಡಿನ ಶಾಸಕನಾಗುತ್ತಾರೆ.
ಏಷ್ಯಾದ ಎರಡನೇ ಅತಿ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ಹೊಂದಿರುವ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಬಿಸಿನೀರಿನಲ್ಲಿ ಬೇಯುವ ರೇಷ್ಮೆ ಹುಳುಗಳಂತೆ ಚಡಪಡಿಕೆಯಲ್ಲಿದ್ದಾರೆ. ಕ್ಷೇತ್ರದ ‘ಚಂದ್ರಿಕೆ’ಯನ್ನು ಶೋಧಿಸಿದರೆ ಇಲ್ಲಿ ‘ಕಾಂಗ್ರೆಸ್’ ಪಕ್ಷವೇ ಹೆಚ್ಚು ಹಣ್ಣಾಗಿ, ಗೂಡು ಕಟ್ಟಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್, ಜೆಡಿಎಸ್ ಸಾಂಪ್ರದಾಯಿಕ ಎದುರಾಳಿಗಳು.
ಇಂತಿಪ್ಪ ಶಿಡ್ಲಘಟ್ಟ ಕ್ಷೇತ್ರದ ರಾಜಕೀಯ ಮುತ್ಸದಿ, ಶಾಸಕ ವಿ. ಮುನಿಯಪ್ಪ ಅವರೇ ಕಾಂಗ್ರೆಸ್‌ನ ಅದ್ವಿತೀಯ ನಾಯಕ. ಆರು ಬಾರಿ ಅವರು ಕಾಂಗ್ರೆಸ್ ಪ್ರತಿನಿಧಿಸಿದ್ದಾರೆ. 2018ರ ಚುನಾವಣೆಯಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಸಹ ಕಾಂಗ್ರೆಸ್ ಟಿಕೆಟ್ ಬಯಸಿದ್ದರು. ಟಿಕೆಟ್ ದೊರೆಯದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 10,986 ಮತಗಳನ್ನು ಪಡೆದರು. ಬಂಡಾಯದ ನಡುವೆಯೂ ಮುನಿಯಪ್ಪ ಗೆಲುವಿನ ನಗೆ ಬೀರಿದ್ದರು.
2018ರ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿಯೂ ಒಡಕು, ಬೇಗುದಿ ಇತ್ತು. ಟಿಕೆಟ್ ವಿಚಾರದಲ್ಲಿ ಅಂದಿನ ಜೆಡಿಎಸ್ ಶಾಸಕ ಎಂ.ರಾಜಣ್ಣ ಮತ್ತು ಮುಖಂಡ ಮೇಲೂರು ರವಿಕುಮಾರ್ ನಡುವೆ ಪೈಪೋಟಿ ನಡೆದಿತ್ತು.
ನಾಟಕೀಯ ಬೆಳವಣಿಗೆಗಳಲ್ಲಿ ರವಿಕುಮಾರ್ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾದರೆ, ರಾಜಣ್ಣ ಪಕ್ಷೇತರರಾಗಿ ‘ಅಖಾಡ’ಕ್ಕಿಳಿದಿದ್ದರು. ರವಿಕುಮಾರ್ 66,531 ಮತ್ತು ಎಂ.ರಾಜಣ್ಣ 8,593 ಮತಗಳನ್ನು ಪಡೆದಿದ್ದರು. ಹೀಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಲ್ಲಿ ‘ಬಂಡಾಯ’ ಎದುರಾಗಿತ್ತು. ಈಗ ರಾಜಣ್ಣ ಬಿಜೆಪಿಯಲ್ಲಿ ಇದ್ದಾರೆ. ಜೆಡಿಎಸ್‌ನಲ್ಲಿ ಸಣ್ಣ ಗೊಂದಲವೂ ಇಲ್ಲ.
ಆದರೆ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಬಣಗಳ ರಾಜಕೀಯ ಮೇಲಾಟ ಜೋರಾಗಿಯೇ ನಡೆಯುತ್ತಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಕಾಂಗ್ರೆಸ್ ಅಭ್ಯರ್ಥಿಯಾಗುವರು ಎಂದು ಶಾಸಕ ವಿ.ಮುನಿಯಪ್ಪ ಬಹಿರಂಗವಾಗಿಯೇ ಘೋಷಿಸಿದ್ದಾರೆ. ಈ ಘೋಷಣೆಯ ತರುವಾಯ ಕಾಂಗ್ರೆಸ್‌ನಲ್ಲಿ ಬಣ ರಾಜಕಾರಣ ಮತ್ತಷ್ಟು ಬಿರುಸು ಪಡೆದಿದೆ.
ಸಮಾಜ ಸೇವಕರಾಗಿ ಬಂದು ನಂತರ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ಮುಖಂಡ ರಾಜೀವ್ ಗೌಡ, ಕೆ.ಎಚ್.ಮುನಿಯಪ್ಪ ಮೂಲಕ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಕಳೆದ ಬಾರಿ ಬಂಡಾಯ ಅಭ್ಯರ್ಥಿಯಾಗಿದ್ದ ಆಂಜನಪ್ಪ ಪುಟ್ಟು ಸಹ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಘೋಷಣೆಯ ತರುವಾಯ
ಯಾರು ಬಂಡಾಯ ಅಭ್ಯರ್ಥಿಯಾಗುವರು, ತಟಸ್ಥವಾಗುವರು, ಇಲ್ಲವೆ ಒಗ್ಗೂಡಿ ನಡೆಯುವರು ಎನ್ನುವ ಕುತೂಹಲ ಕ್ಷೇತ್ರದಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.