ಚಿಂತಾಮಣಿ: ಕಾರ್ತೀಕ ಹಬ್ಬಗಳ ಮಾಸ. ಅದರಲ್ಲಿ ಅತ್ಯಂತ ಮಹತ್ವದ ತುಳಸಿ ಹಬ್ಬವನ್ನು ಗುರುವಾರ ನಗರ ಹಾಗೂ ತಾಲ್ಲೂಕಿನ ಮನೆ ಮನೆಗಳಲ್ಲೂ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಪ್ರತಿವರ್ಷ ಕಾರ್ತೀಕ ಮಾಸದ ಕೃಷ್ಣ ಏಕಾದಶಿ, ದ್ವಾದಶಿಯಂದು ತುಳಸಿವ್ರತವನ್ನು ಭಕ್ತಿಯಿಂದ ಆಚರಣೆ ಮಾಡುವುದು ಸಂಪ್ರದಾಯ. ಮಹಿಳೆಯರು ಪ್ರತಿನಿತ್ಯ ತುಳಸಿ ಪೂಜೆ ಮಾಡುತ್ತಾರೆ. ಮನೆಯ ಮುಂದೆ ತುಳಸಿ ಕಟ್ಟೆ ಇರುತ್ತದೆ. ಇಂದು ಮಹಿಳೆಯರು ಶುಚೀಭೂತರಾಗಿ ತುಳಸಿ ಕಟ್ಟೆಗೆ ತಳಿರು ತೋರಣ ಕಟ್ಟಿ ವಿಶೇಷ ಅಲಂಕಾರ ಮಾಡಿದರು.
‘ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸಾಲು ಸಾಲು ದೀಪಗಳನ್ನು ಹಚ್ಚಿ ಪೂಜೆ ನೆರವೇರಿಸಿದರು. ತುಳಸಿ ಹಬ್ಬ ಪವಿತ್ರವಾದ ದಿನ. ವಿಷ್ಣು ಯೋಗ ನಿದ್ರೆಯಿಂದ ಎಚ್ಚೆತ್ತು ಭಕ್ತರಿಗೆ ದರ್ಶನ ನೀಡುವ ದಿನ. ತುಳಸಿ ವಿವಾಹದ ದಿನ. ತುಳಸಿ ಹಬ್ಬದಿಂದ ದಾರಿದ್ರ್ಯ ನಿವಾರಣೆ, ಸಂತಾನ ಪ್ರಾಪ್ತಿ, ಸುಖ-ಶಾಂತಿ, ಸಂಪತ್ತು, ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ಪ್ರತೀತಿ ಇದೆ’ ಎನ್ನುತ್ತಾರೆ ಗೃಹಿಣಿ ವರಲಕ್ಷ್ಮೀ.
ತುಳಸಿಗೆ ಅಭಿಮುಖವಾಗಿ ಶ್ರೀಕೃಷ್ಣಮೂರ್ತಿಯನ್ನು ಪ್ರತಿಷ್ಠಾಪಿಸಿ ಮಂಗಳದ್ರವ್ಯಗಳೊಂದಿಗೆ ತುಳಸಿ ವಿವಾಹವನ್ನು ನೆರವೇರಿಸಿ ಕುಟುಂಬ ಸಮೇತ ಪೂಜೆ ಸಲ್ಲಿಸಿದರು. ಬಾಳೆ ದಿಂಡಿನಲ್ಲಿ ತುಪ್ಪದ ದೀಪದಿಂದ ಆರತಿ ಬೆಳಗಿ ಮಹಿಳೆಯರು ಭಕ್ತಿಯನ್ನು ಮೆರೆದರು.
ವಿಶೇಷ ಪೂಜೆ: ತಾಲ್ಲೂಕಿನ ಕೈವಾರ ಶ್ರೀಯೋಗಿನಾರೇಯಣ ಮಠದ ಆವರಣದಲ್ಲಿ ಕಾರ್ತೀಕ ಮಾಸದ ಉತ್ಥಾನ ದ್ವಾದಶಿ ಪ್ರಯುಕ್ತ ತುಳಸಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ತುಳಸಿ ಕಟ್ಟೆಗೆ ಸುಣ್ಣ-ಬಣ್ಣ, ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ವಿವಿಧ ಬಗೆಯ ಪುಷ್ಪಗಳಿಂದ ಸಿಂಗರಿಸಿ ಬೆಟ್ಟದ ನೆಲ್ಲಿ ಗಿಡದ ಕೊಂಬೆಯನ್ನು ನೆಟ್ಟು ಭಕ್ತಿಯಿಂದ ಪೂಜಿಸಲಾಯಿತು. ಗಣಪತಿ ಪ್ರಾರ್ಥನೆ ಸಲ್ಲಿಸಲಾಯಿತು. ಶ್ರೀಕೃಷ್ಣನ ಮೂರ್ತಿಗೆ ಪಂಚಾಮೃತಾಭಿಷೇಕ ಸಲ್ಲಿಸಿ ವಿವಿಧ ಬಗೆಯ ಪುಷ್ಪಗಳಿಂದ ಪೂಜಿಸಲಾಯಿತು. ನಂತರ ತುಳಸಿ ಮಾತೆಗೆ ಅರಿಸಿನ ಕುಂಕುಮದ ಪೂಜೆ ಸಲ್ಲಿಸಿ ಪುಷ್ಪಾರ್ಚನೆಯನ್ನು ಸಮರ್ಪಿಸಲಾಯಿತು.
ತುಳಸಿ ಕಲ್ಯಾಣ ಘಟ್ಟವನ್ನು ಶಾಸ್ತ್ರೋಕ್ತವಾಗಿ ಅರ್ಚಕರು ನೆರವೇರಿಸಿದರು. ಮುತ್ತೈದೆಯರು ತುಳಸಿ ಮಾತೆಗೆ ಧೂಪ, ದೀಪಗಳನ್ನು ಬೆಳಗಿದರು. ವಿಶೇಷವಾಗಿ ನೆಲ್ಲಿಕಾಯಿಯಲ್ಲಿ ಮಂಗಳಾರತಿ ಸಮರ್ಪಿಸಲಾಯಿತು. ಮಹಿಳೆಯರು ಭಕ್ತಿಗೀತೆಗಳನ್ನು ಹಾಡಿ ತುಳಸಿಯನ್ನು ಸ್ತುತಿಸಿದರು. ಮಹಿಳೆಯರಿಗೆ ಅರಿಸಿನ ಕುಂಕುಮ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.