ಚಿಕ್ಕಬಳ್ಳಾಪುರ: ಸರ್ಕಾರವು ಈ ಬಾರಿ ಬರಗಾಲದ ಕಾರಣ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಬರಗಾಲದಲ್ಲಿಯೂ ಬಿಸಿಯೂಟ ನೀಡಿತ್ತು. ವಿದ್ಯಾರ್ಥಿಗಳು ರಜೆ ಇದ್ದರೂ ಬಿಸಿಯೂಟಕ್ಕಾಗಿ ಶಾಲೆಗೆ ಬರುತ್ತಿದ್ದರು.
ಹೀಗೆ ಬರದಲ್ಲಿಯೂ ಬಿಸಿಯೂಟವನ್ನು ತಯಾರಿಸಿದ ಸಿಬ್ಬಂದಿಗೆ ಮಾತ್ರ ಇಲ್ಲಿಯವರೆಗೂ ಆ ಎರಡು ತಿಂಗಳ ಗೌರವಧನವನ್ನು ಸರ್ಕಾರ ಪಾವತಿಸಿಲ್ಲ. ಏಪ್ರಿಲ್ ಮತ್ತು ಮೇ ತಿಂಗಳ ಗೌರವಧನ ಈ ಬಾರಿ ಬರುತ್ತದೆ ಮುಂದಿನ ಬಾರಿ ಬರುತ್ತದೆ ಎಂದು ಪ್ರತಿ ತಿಂಗಳೂ ಜಿಲ್ಲೆಯ ಬಿಸಿಯೂಟ ಸಿಬ್ಬಂದಿ ಕಾಯುತ್ತಲೇ ಇದ್ದಾರೆ. ಆದರೆ ಹಣ ಮಾತ್ರ ಬಿಡುಗಡೆಯೇ ಆಗಿಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮುಖ್ಯ ಅಡುಗೆಯವರು ಹಾಗೂ ಅಡುಗೆ ಸಹಾಯಕರು ಸೇರಿ ಒಟ್ಟು 2,690 ಸಿಬ್ಬಂದಿ ಇದ್ದಾರೆ. ಈ ಪರಿಶಿಷ್ಟ ಜಾತಿಗೆ ಸೇರಿದ 189 ಮಂದಿ ಮುಖ್ಯ ಅಡುಗೆ ಸಿಬ್ಬಂದಿ, 252 ಸಹಾಯಕ ಅಡುಗೆ ಸಿಬ್ಬಂದಿ, ಪರಿಶಿಷ್ಟ ಪಂಗಡದ 228 ಮುಖ್ಯ ಅಡುಗೆ ಸಿಬ್ಬಂದಿ, 231 ಸಹಾಯಕ ಅಡುಗೆ ಸಿಬ್ಬಂದಿ, ಹಿಂದುಳಿದ ವರ್ಗಗಳಿಗೆ ಸೇರಿದ 1,161 ಮುಖ್ಯ ಅಡುಗೆ ಸಿಬ್ಬಂದಿ, 629 ಸಹಾಯಕ ಅಡುಗೆ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮುಖ್ಯ ಅಡುಗೆ ಸಿಬ್ಬಂದಿಗೆ ಸರ್ಕಾರವು ಮಾಸಿಕ ₹ 3,700 ಮತ್ತು ಸಹಾಯಕ ಸಿಬ್ಬಂದಿಗೆ ₹ 3,600 ಗೌರವಧನ ನೀಡುತ್ತದೆ.
ಬಿಸಿಯೂಟ ಸಿಬ್ಬಂದಿಯಾಗಿ ಆರ್ಥಿಕವಾಗಿ ಹಿಂದುಳಿದವರು, ವಿಧವೆಯರು, ಬದುಕು ನಡೆಸಲು ಕಷ್ಟ ಎನ್ನುವವರು ಪ್ರಮುಖವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಜೀವನ ನಿರ್ವಹಣೆಗೆ ಮುಖ್ಯ ಆಧಾರವೇ ವೇತನ. ಆದರೆ ಇಂತಹ ಅಶಕ್ತರು, ದುರ್ಬಲರು ಮತ್ತು ಆರ್ಥಿಕ ಹಿಂದುಳಿದವರಿಗೆ ಬರಗಾಲದಲ್ಲಿ ಬಿಸಿಯೂಟ ತಯಾರಿಸಿದ ಗೌರವಧನ ಇಂದಿಗೂ ಪಾವತಿ ಆಗಿಲ್ಲ. ಬೇಸಿಗೆ ಮುಗಿದು ದಸರಾ ರಜೆಯೇ ಪೂರ್ಣವಾಗಿದೆ.
ಕೆಲಸದ ಹೊರೆ ಹೆಚ್ಚು: ‘ಸೆ.25ರಿಂದ ಪ್ರತಿ ದಿನವೂ ವಿದ್ಯಾರ್ಥಿಗಳಿಗೆ ಮೊಟ್ಟೆ ನೀಡಲಾಗುತ್ತಿದೆ. ಅಂದಿನಿಂದ ಮತ್ತಷ್ಟು ಕೆಲಸ ಹೆಚ್ಚಿದೆ. ಪ್ರತಿ ದಿನ ಮೊಟ್ಟೆ ಬೇಯಿಸಬೇಕು, ಸುಲಿಯಬೇಕು. ಇದಕ್ಕೆ ಪ್ರತ್ಯೇಕವಾಗಿ ಹಣವನ್ನೂ ಕೊಡುತ್ತಿಲ್ಲ. ಬೆಳಿಗ್ಗೆ 9.30ಕ್ಕೆ ಶಾಲೆಗಳಿಗೆ ಹೋದರೆ ಕೆಲಸ ಮುಗಿಸಿ ವಾಪಸ್ ಬರಲು ಮಧ್ಯಾಹ್ನ 2.30 ಆಗುತ್ತದೆ ಎಂದು ಬಿಸಿಯೂಟ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.
ಒಬ್ಬ ಬಿಸಿಯೂಟ ಸಿಬ್ಬಂದಿಗೆ ದಿನಕ್ಕೆ ಸರಾಸರಿ ₹ 120 ನೀಡುತ್ತಾರೆ. ಆದರೆ ಈ ಹಣವನ್ನೂ ತಿಂಗಳಿಗೆ ಸರಿಯಾಗಿ ನೀಡುತ್ತಿಲ್ಲ. ಗೌರವಧನ ಪ್ರತಿ ತಿಂಗಳು ನೀಡಬೇಕು ಎಂದು ಹಲವು ಬಾರಿ ಮನವಿ ನೀಡಿದರೂ ಸ್ಪಂದನೆ ಇಲ್ಲ. ಕೆಲಸ ಮಾಡುವವರಲ್ಲಿ ಎಲ್ಲರಿಗೂ ಈ ಗೌರವಧನ ಮುಖ್ಯ ಆಧಾರ ಎಂದರು.
ಸರ್ಕಾರ ಜೂನ್ ಮತ್ತು ಜುಲೈ ವೇತನವನ್ನು ಬಿಡುಗಡೆ ಮಾಡಿದೆ. ಆದರೆ ಆಗಸ್ಟ್, ಸೆಪ್ಟೆಂಬರ್‌ನ ಗೌರವ ಧನ ಇನ್ನೂ ನೌಕರರ ಕೈ ಸೇರಿಲ್ಲ. ಜಿಲ್ಲೆಯಲ್ಲಿ ಬಿಸಿಯೂಟ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವವರಲ್ಲಿ ಹಿಂದುಳಿದವರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರೇ ಇದ್ದಾರೆ. ಹಲವು ಕುಟುಂಬಗಳು ಈ ಗೌರವಧನ ನಂಬಿ ಬದುಕು ನಡೆಸುತ್ತಿವೆ.
‘ಏಪ್ರಿಲ್ ಮತ್ತು ಮೇನಲ್ಲಿ ಶಾಲೆಗಳಿಗೆ ರಜೆ ಇತ್ತು. ಆಗ ಸರ್ಕಾರ ಬರಗಾಲದ ಬಿಸಿಯೂಟ ನೀಡಲು ಮುಂದಾದ ಕಾರಣ ನಾವೂ ಕೆಲಸ ಮಾಡಿದೆವು. ಆದರೆ ಇಷ್ಟು ತಿಂಗಳಾದರೂ ಕೆಲಸ ಮಾಡಿದ ಹಣ ನೀಡಿಲ್ಲ. ನಮಗೂ ಜೀವನ ಜೀವನ ಇರುತ್ತದೆ’ ಎಂದು ಚಿಕ್ಕಬಳ್ಳಾಪುರ ತಾಲ್ಲೂಕಿನ ಶಾಲೆಯೊಂದರ ಬಿಸಿಯೂಟ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದರು.
‘ಬಿಡುಗಡೆಯಾದರೂ ಕೈ ಸೇರದ ಹಣ’
ಏಪ್ರಿಲ್ ಮತ್ತು ಮೇ ತಿಂಗಳ ಗೌರವಧನ ನೀಡಿಲ್ಲ. ಜೂನ್ ಮತ್ತು ಜುಲೈ ಗೌರವಧನ ನೀಡಿದ್ದಾರೆ. ಆಗಸ್ಟ್ ಸೆಪ್ಟೆಂಬರ್ ಗೌರವಧನ ನೀಡಿಲ್ಲ. ಈಗ ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಗೌರವಧನ ಪಾವತಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದೆ. ಆದರೆ ಆ ಹಣ ಇನ್ನೂ ನಮ್ಮ ಕೈ ಸೇರಿಲ್ಲ ಎಂದು ಬಿಸಿಯೂಟ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುಳಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.