ADVERTISEMENT

ಚಿಕ್ಕಬಳ್ಳಾಪುರ | ‘ಇಕೋ ಥೀಮ್ ಪಾರ್ಕ್’ ನನೆಗುದಿಗೆ; ಕಡತಗಳಲ್ಲಿ ಮಾತ್ರ ‘ಪ್ರಗತಿ’

ಡಿ.ಎಂ.ಕುರ್ಕೆ ಪ್ರಶಾಂತ
Published 2 ಜೂನ್ 2024, 5:38 IST
Last Updated 2 ಜೂನ್ 2024, 5:38 IST
ಚಿಕ್ಕಬಳ್ಳಾಪುರದ ಕಂದವಾರ ಕೆರೆಯಲ್ಲಿ ‘ಇಕೋ ಥೀಮ್ ಪಾರ್ಕ್’ ಕಾಮಗಾರಿ ಪರಿಶೀಲಿಸಿದ್ದ ಅಂದಿನ ಜಿಲ್ಲಾಧಿಕಾರಿ ಆರ್.ಲತಾ (ಸಂಗ್ರಹ ಚಿತ್ರ)
ಚಿಕ್ಕಬಳ್ಳಾಪುರದ ಕಂದವಾರ ಕೆರೆಯಲ್ಲಿ ‘ಇಕೋ ಥೀಮ್ ಪಾರ್ಕ್’ ಕಾಮಗಾರಿ ಪರಿಶೀಲಿಸಿದ್ದ ಅಂದಿನ ಜಿಲ್ಲಾಧಿಕಾರಿ ಆರ್.ಲತಾ (ಸಂಗ್ರಹ ಚಿತ್ರ)   

ಚಿಕ್ಕಬಳ್ಳಾಪುರ: ಪ್ರಸ್ತುತ ಕಾಮಗಾರಿಯ ಫೌಂಡೇಶನ್ ಕೆಲಸ ಮುಗಿದಿದೆ. ಭಾಗಶಃ ಮೊತ್ತ ಒಟ್ಟಾರೆ ಪಾವತಿಸಲಾಗಿದೆ. ಕಾಂಪೌಂಡ್ ಕಾಮಗಾರಿ, ಶೌಚಾಲಯ, ಸಂಗೀತ ತೊಟ್ಟಿ, ಆಪರೇಟರ್ ರೂಂಗಳ ಕಾಮಗಾರಿ ಪ್ರಗತಿಯಲ್ಲಿದೆ–ನಗರದ ಕಂದವಾರ ಕೆರೆಯ ಏರಿ ಬದಿಯಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದ್ದ ‘ಇಕೋ ಥೀಮ್ ಪಾರ್ಕ್’ ಕಾಮಗಾರಿ ಎಲ್ಲಿಗೆ ಬಂದಿತು ಎಂದು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಮತ್ತು ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರೆ ದೊರೆಯುವ ಉತ್ತರ. 

ಕಾಮಗಾರಿ ಪ್ರಗತಿಯಲ್ಲಿದೆ ಎನ್ನುವ ಸಿದ್ಧ ಉತ್ತರಕ್ಕೆ ವರ್ಷಗಳೇ ಉರುಳಿವೆ.  ಕಡತಗಳಲ್ಲಿ ಮಾತ್ರ ಕಾಮಗಾರಿ ಪ್ರಗತಿ ಎನ್ನುವ ಷರವನ್ನು ಬರೆಯಲಾಗುತ್ತದೆ. ಆದರೆ ಎಷ್ಟರ ಪ್ರಮಾಣದಲ್ಲಿ ಕಾಮಗಾರಿ ಪ್ರಗತಿಯಾಗಿದೆ, ಮುಂದಿನ ಎಷ್ಟು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎನ್ನುವ ಖಚಿತ ಮಾಹಿತಿ ಮಾತ್ರ ಯಾವ ಅಧಿಕಾರಿಗಳ ಬಳಿಯೂ ಇಲ್ಲ!

ಹೀಗೆ ಚಿಕ್ಕಬಳ್ಳಾಪುರ ನಗರದಲ್ಲಿ ಅನುಷ್ಠಾನಗೊಳ್ಳಬೇಕಾಗಿದ್ದ ಪ್ರಮುಖ ಯೋಜನೆಗಳಿಗೆ ಗ್ರಹಣ ಬಡಿದಿದೆ. 

ADVERTISEMENT

2021ರಲ್ಲಿ ಪಾರ್ಕ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 2022ರ ಏಪ್ರಿಲ್‌ನಲ್ಲಿ ಸಂಗೀತ ಕಾರಂಜಿ ನಿರ್ಮಾಣಕ್ಕೆ ಅಂದಿನ ಸಚಿವ ಡಾ.ಕೆ.ಸುಧಾಕರ್ ಭೂಮಿ ಪೂಜೆ ನೆರವೇರಿಸಿದ್ದರು. ಭೂಮಿ ಪೂಜೆ ವೇಳೆ ಉದ್ಯಾನದಲ್ಲಿ ಯಾವ ರೀತಿ ಕೆಲಸಗಳು ಆಗಲಿವೆ, ಚಿಕ್ಕಬಳ್ಳಾಪುರ ಪ್ರವಾಸೋದ್ಯಮಕ್ಕೆ ಇದು ಹೇಗೆ ಹೆಮ್ಮೆ ಎನಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಹಣದಿಂದ ಈ ಉದ್ಯಾನ ನಿರ್ಮಾಣವಾಗಲಿದೆ. ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಕೆರೆ ಅಭಿವೃದ್ಧಿ ಯೋಜನೆಗಳ ಪ್ರಕಾರ ಈ ಪಾರ್ಕ್ ನಿರ್ಮಾಣಕ್ಕೆ ಕ್ರಮವಹಿಸಲಾಗಿತ್ತು.

 ₹ 8.10 ಕೋಟಿ ವೆಚ್ಚದಲ್ಲಿ ಕೆಆರ್‌ಎಸ್ ಬೃಂದಾವನ ಮಾದರಿಯಲ್ಲಿ ‘ಇಕೋ ಥೀಮ್ ಪಾರ್ಕ್’ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ದೊಡ್ಡ ಮೊತ್ತರ ಈ ಯೋಜನೆಯು ಪರಿಸರ ಸ್ನೇಹಿಯಾಗಿ ಜಿಲ್ಲಾ ಕೇಂದ್ರಕ್ಕೆ ಸೊಬಗನ್ನು ಸಹ ತರಲಿದೆ ಎನ್ನುವ ವಿಶ್ವಾಸವಿತ್ತು. ಈ ಉದ್ಯಾನ ನಿರ್ಮಾಣವಾದರೆ ಜಿಲ್ಲೆಯ ಪ್ರವಾಸೋದ್ಯಮದ ವಿಚಾರವಾಗಿ ಮುಕುಟ ಮಣಿಯಾಗುವುದು ಖಚಿತ ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು.

2022ರ ಜುಲೈನಲ್ಲಿ ಕಂದವಾರ ಕೆರೆಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲಿಸಿದ್ದ ಅಂದಿನ ಜಿಲ್ಲಾಧಿಕಾರಿ ಆರ್.ಲತಾ, ‘ಎರಡು ತಿಂಗಳಲ್ಲಿ ಉದ್ಯಾನ ನಿರ್ಮಣವಾಗಲಿದೆ’ ಎಂದಿದ್ದರು. ಆದರೆ ಇಂದಿಗೂ ಉದ್ಯಾನ ನಿರ್ಮಾಣದ ಕಾಮಗಾರಿಗಳು ಕುಂಟುತ್ತ ಸಾಗಿವೆ. 

ಹೀಗೆ ದೊಡ್ಡ ಮಟ್ಟದ ಬಂಡವಾಳ ಹೂಡಿರುವ ಉದ್ಯಾನವು ಜಿಲ್ಲೆಯಲ್ಲಿಯೇ ಮಾದರಿಯಾಗುತ್ತದೆ ಎಂದು ಅಧಿಕಾರಿಗಳು ಸಹ ನುಡಿದಿದ್ದರು. ಯೋಜನೆಗೆ ಚಾಲನೆ ದೊರೆತು ಮೂರು ವರ್ಷವಾದರೂ ಕಾಮಗಾರಿ ಪೂರ್ಣಗೊಂಡಿಲ್ಲ. 

ಗುತ್ತಿಗೆದಾರರಿಗೆ ಅಧಿಕಾರಿಗಳು ನಿಗದಿತ ಗಡುವು ನೀಡಿಲ್ಲವೇ? ಪಾರ್ಕ್ ನಿರ್ಮಾಣ ಕಾಮಗಾರಿ ಏಕೆ ತಡವಾಗುತ್ತಿದೆ ಎನ್ನುವ ಪ್ರಶ್ನೆಗಳು ಪ್ರಜ್ಞಾವಂತರಲ್ಲಿ ಮೂಡಿವೆ.

ಏನಿರಲಿದೆ ಇಲ್ಲಿ

ಸರಳ ಜಿಮ್ ಪಾರ್ಕಿಂಗ್ ವ್ಯವಸ್ಥೆ ಮಕ್ಕಳ ಆಟದ ಅನುಕೂಲಗಳು ಹಿರಿಯ ನಾಗರಿಕರ ವಿಶ್ರಾಂತಿ ಸ್ಥಳ ಸಂಗೀತ ಕಾರಂಜಿ ಬೋಟಿಂಗ್ ಕಲಾಗ್ರಾಮದ ಮಳಿಗೆಗಳು ಸ್ಥಳೀಯ ಕಲೆಗಳ ಪ್ರದರ್ಶನ ಕೇಂದ್ರ ಪಾದಚಾರಿ ಸೇತುವೆ ವನೌಷಧಿ ಸಸ್ಯಗಳ ಪಾರ್ಕ್ ಇತ್ಯಾದಿ ವಿಶೇಷ ಆಕರ್ಷಣೆಗಳು ಈ ಉದ್ಯಾನದಲ್ಲಿ ಇರಲಿವೆ ಎನ್ನುತ್ತವೆ ಮೂಲಗಳು. ಕೆರೆ ಕೋಡಿಯ ಕಡೆಯಿಂದ ಹೋಗುವ ಸ್ಥಳದಲ್ಲಿ ಸಂಗೀತ ಕಾರಂಜಿ ನಿರ್ಮಾಣಕ್ಕೂ ಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.