ಚಿಕ್ಕಬಳ್ಳಾಪುರ: ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಕೋಚಿಮುಲ್) ವಿಭಜನೆಯ ವಿಚಾರಗಳು ಅವಳಿ ಜಿಲ್ಲೆಯ ಸಹಕಾರ ವಲಯದಲ್ಲಿ ಮತ್ತೆ ಗರಿಗೆದರಿವೆ. ಕೋಚಿಮುಲ್‌ಗೆ ಚುನಾವಣೆ ನಡೆಯಬೇಕಾದ ಈ ಹೊತ್ತಿನಲ್ಲಿಯೇ ವಿಭಜನೆಯ ಮಾತುಗಳು ಕೇಳುತ್ತಿರುವುದು ಚರ್ಚೆಯನ್ನು ಮತ್ತಷ್ಟು ಜೋರಾಗಿಸಿದೆ.
ಕೋಚಿಮುಲ್ ವಿಭಜನೆ ಆಗುತ್ತದೆಯೇ, ಆಡಳಿತ ಮಂಡಳಿಯ ಅಧಿಕಾರದ ಅವಧಿ ವಿಸ್ತರಣೆ ಆಗುತ್ತದೆಯೇ, ಆಡಳಿತಾಧಿಕಾರಿ ನೇಮಕವಾಗುವರೇ, ಕೋಚಿಮುಲ್ ಆಡಳಿತ ಮಂಡಳಿಗೆ ಚುನಾವಣೆ ನಡೆಯುವುದೇ–ಹೀಗೆ ಚುನಾವಣೆ ಮತ್ತು ವಿಭಜನೆಯ ವಿಚಾರಗಳು ಸಹಕಾರ ವಲಯದಲ್ಲಿ ಗರಿಬಿಚ್ಚಿವೆ.
ಕೋಚಿಮುಲ್ ನಿರ್ದೇಶಕರ ಅವಧಿ 2024 ಮೇ 12ಕ್ಕೆ ಅಂತ್ಯವಾಗಿದ್ದು ಒಂದೂವರೆ ತಿಂಗಳಿನಿಂದ ಅವಧಿ ವಿಸ್ತರಿಸಲಾಗಿದೆ. ‘ಅವಧಿಯನ್ನು ವಿಸ್ತರಿಸಿಕೊಳ್ಳಲು ಕೋಚಿಮುಲ್ ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ. ಆಡಳಿತಾಧಿಕಾರಿ ನೇಮಿಸಬೇಕು. ಮೊದಲು ಚುನಾವನೆ ನಡೆಯಬೇಕು’ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಹಾಗೂ ಬಿಜೆಪಿ ಬೆಂಬಲಿತ ಸಹಕಾರ ವಲಯದ ಧುರೀಣರು ಆಗ್ರಹಿಸುತ್ತಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಕೋಚಿಮುಲ್ ನಿರ್ದೇಶಕರು, ‘ಈ ಹಿಂದೆ ಶಿವಾರೆಡ್ಡಿ ಮತ್ತು ಕಾಡೇನಹಳ್ಳಿ ನಾಗರಾಜ್ ಅಧ್ಯಕ್ಷರಾಗಿದ್ದ ವೇಳೆ ಆಡಳಿತ ಮಂಡಳಿ ಅಧಿಕಾರದ ಅವಧಿ ವಿಸ್ತರಿಸಲಾಗಿದೆ. ಅವಧಿ ವಿಸ್ತರಣೆ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು’ ಎಂದು ಪ್ರತಿಪಾದಿಸುತ್ತಿದ್ದಾರೆ.
ವಿಭಜನೆಗೆ ಸಂಬಂಧಿಸಿದಂತೆ ರಾಜ್ಯ ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆಯಲು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ನೇತೃತ್ವದಲ್ಲಿ ನಡೆದ ಅವಳಿ ಜಿಲ್ಲೆಗಳ ಶಾಸಕರು, ನಿರ್ದೇಶಕರು ಮತ್ತು ಸಹಕಾರ ಇಲಾಖೆ ಉನ್ನತ ಅಧಿಕಾರಿಗಳ ಸಭೆಯಲ್ಲಿ ಸೂಚಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳು ಕೋಚಿಮುಲ್ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಆದ್ದರಿಂದ ಮೊದಲು ಚುನಾವಣೆ ನಡೆಯುತ್ತದೆಯೇ ಅಥವಾ ವಿಭಜನೆಯ ನಂತರ ಚುನಾವಣೆ ನಡೆಯುತ್ತದೆಯೇ ಎನ್ನುವ ಕುತೂಹಲ ಹೈನುಗಾರರಲ್ಲಿ ಇದೆ. ಚುನಾವಣೆಯೊ, ವಿಭಜನೆಯೊ ಎನ್ನುವ ಜಿಜ್ಞಾಸೆ ಪರಿಹಾರಕ್ಕಾಗಿಯೇ ವಿಧಾನಸೌಧದಲ್ಲಿ ಇತ್ತೀಚೆಗೆ ಎರಡು ಸಭೆಗಳು ಸಹ ನಡೆದಿವೆ.
‘ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿ 2024ರ ಮಾ.21ಕ್ಕೆ ಯಾವ ಹಂತದಲ್ಲಿ ನಿಂತು ಹೋಗಿದೆಯೊ ಆ ಹಂತದಿಂದಲೇ ಚುನಾವಣಾ ಪ್ರಕ್ರಿಯೆ ಆರಂಭಿಸಬೇಕು’ ಎಂದು ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಮಾರ್ಪಾಡು ಆದೇಶ ಹೊರಡಿಸಿದ್ದಾರೆ.
ಮತದಾನದ ಹಕ್ಕು ಹೊಂದಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳ ಅರ್ಹ ಮತದಾರರ ಕರಡು ಪಟ್ಟಿಯನ್ನೂ ಪ್ರಕಟಿಸಲಾಗಿದೆ. ಈ ನಡುವೆ ಕೆಲವು ನಿರ್ದೇಶಕರು ವಿಭಜನೆಯ ತರುವಾಯ ಚುನಾವಣೆ ನಡೆಸಬೇಕು ಎಂದು ಸಚಿವರ ಮೂಲಕ ಸರ್ಕಾರದ ಮನವೊಲಿಸಲು ಮುಂದಾಗಿದ್ದಾರೆ. ಈ ಕಾರಣದಿಂದ ಕೋಚಿಮುಲ್ ಅಂಗಳದಲ್ಲಿ ಚಟುವಟಿಕೆಗಳು ಬಿರುಸು ಪಡೆದಿವೆ.
ವಿಭಜನೆ ಮತ್ತು ಅವಧಿ ವಿಸ್ತರಣೆಯ ವಿಚಾರವಾಗಿ ಒಂದು ವಾರದ ಒಳಗೆ ರಾಜ್ಯ ಅಡ್ವೊಕೇಟ್ ಜನರಲ್ ಅಭಿಪ್ರಾಯವನ್ನು ಸಹಕಾರ ಇಲಾಖೆ ಪಡೆಯುವ ಸಾಧ್ಯತೆ ಇದೆ. ಆ ಅಭಿಪ್ರಾಯ ಆಧರಿಸಿ ಚುನಾವಣೆಯೊ ವಿಭಜನೆಯೊ ಎನ್ನುವುದು ನಿರ್ಧಾರವಾಗಲಿದೆ.
₹ 350 ಕೋಟಿ ವೆಚ್ಚದ ಕಾಮಗಾರಿ: ವಿಭಜನೆಯ ವಿಚಾರದ ನಡುವೆಯೇ ಕೋಚಿಮುಲ್ ಕೈಗೊಂಡಿರುವ ಕಾಮಗಾರಿಗಳ ಬಗ್ಗೆಯೂ ಚರ್ಚೆ ಆಗುತ್ತಿದೆ. ಕೋಚಿಮುಲ್ ವಿಭಜನೆಯಾದರೆ ಕೈಗೊಂಡಿರುವ ಮತ್ತು ಯೋಜಿತ ಕಾಮಗಾರಿಗಳಿಗೆ ಸಂಪನ್ಮೂಲ ಹೇಗೆ ಎನ್ನುವ ಮಾತುಗಳನ್ನು ಕೇಳಿ ಬರುತ್ತಿವೆ. ಆದರೆ ಈ ಕಾಮಗಾರಿಗಳಿಗೆ ಸಂಪನ್ಮೂಲದ ಕೊರತೆ ಆಗುವುದಿಲ್ಲ ಎನ್ನುತ್ತಾರೆ ಕೋಚಿಮುಲ್ ಅಧ್ಯಕ್ಷರೂ ಆದ ಮಾಲೂರು ಶಾಸಕ ಕೆ.ವೈ.ನಂಜೇಗೌಡ.
‘ಆಡಳಿತ ಮಂಡಳಿ ಮುಂದುವರಿಬೇಕು ಎನ್ನುವ ವಿಚಾರ ನಮ್ಮ ಮುಂದಿಲ್ಲ. ನಾನು ಅಧ್ಯಕ್ಷನಾಗಿ ತೆಗೆದುಕೊಂಡ ತೀರ್ಮಾನದ ಕಾರಣ ಒಕ್ಕೂಟವು ಈಗ ಕೈಗೊಂಡಿರುವ ಕಾಮಗಾರಿಗಳಿಗೆ ಸಂಪನ್ಮೂಲದ ಕೊರತೆ ಆಗುವುದಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
ಕೋಲಾರದಲ್ಲಿ ಎಂವಿಕೆ ಗೋಲ್ಡನ್ ಡೇರಿ, ಹೊಳಲಿಯಲ್ಲಿ ಸೋಲಾರ್ ಘಟಕ ಕಾಮಗಾರಿಗಳು ಪ್ರಗತಿಯಲ್ಲಿವೆ. ಚಿಂತಾಮಣಿಯಲ್ಲಿ ಐಸ್‌ಕ್ರೀಂ ಘಟಕ ಮತ್ತು ಚಿಕ್ಕಬಳ್ಳಾಪುರದಲ್ಲಿ ಹಾಲಿನ ಪ್ಯಾಕೆಟ್ ಘಟಕ ನಿರ್ಮಾಣಕ್ಕೆ ಕ್ರಮವಹಿಸಲಾಗಿದೆ. ₹ 350 ಕೋಟಿ ವೆಚ್ಚದ ಯೋಜನೆಗಳು ಇವು ಎಂದರು.
ನಾನು ಅಧ್ಯಕ್ಷನಾದ ಮೇಲೆ ಅಭಿವೃದ್ಧಿಗಾಗಿ ಎಂದು ಪ್ರತಿ ಲೀಟರ್ ಹಾಲಿಗೆ ₹ 1 ತೆಗೆದಿರಿಸಿದೆವು. ಇದಕ್ಕೆ ಆಡಳಿತ ಮಂಡಳಿ ಒಪ್ಪಿಗೆ ಸಹ ಪಡೆಯಲಾಯಿತು. ಈಗ ಈ ಹಣವೇ ಸುಮಾರು ₹ 250 ಕೋಟಿ ಇದೆ. ಮುಂದಿನ ಒಂದೂವರೆ ವರ್ಷದಲ್ಲಿ ಎಲ್ಲ ಕಾಮಗಾರಿಗಳು ಸಹ ಪೂರ್ಣವಾಗಲಿವೆ. ಈ ಅವಧಿಯಲ್ಲಿ ₹ 45 ಕೋಟಿಗೂ ಹೆಚ್ಚು ಹಣ ದೊರೆಯುತ್ತದೆ. ಎನ್‌ಡಿಡಿಬಿಯಿಂದ ಸಾಲ ಮಂಜೂರಾದರೂ ಅದನ್ನು ಅಗತ್ಯವಿದ್ದರೆ ಮಾತ್ರ ಡ್ರಾ ಮಾಡಲಾಗುತ್ತದೆ. ಆದ್ದರಿಂದ ಸಂಪನ್ಮೂಲದ ಕೊರತೆ ಇಲ್ಲ ಎಂದರು.
‘ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 5 ಲಕ್ಷ ಮತ್ತು ಕೋಲಾರ ಜಿಲ್ಲೆಯಲ್ಲಿ 7.15 ಲಕ್ಷ ಲೀಟರ್ ಹಾಲು ನಿತ್ಯ ಉತ್ಪಾದನೆ ಆಗುತ್ತಿದೆ. ಹಾಲು ಪೂರೈಕೆದಾರರಿಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ದರ ನೀಡುತ್ತಿರುವ ಒಕ್ಕೂಟ ನಮ್ಮದು. ಹೈನುಗಾರರ ಹಿತವನ್ನು ಪರಿಗಣಿಸಿಯೇ ಮುಂದುವರಿಯುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.