ADVERTISEMENT

ಬಾಗೇಪಲ್ಲಿ: ಹೆಚ್ಚಾದ ಬೀದಿನಾಯಿ ಉಪಟಳ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2024, 14:31 IST
Last Updated 20 ಅಕ್ಟೋಬರ್ 2024, 14:31 IST
ಬಾಗೇಪಲ್ಲಿ ಪಟ್ಟಣದ ಕೊತ್ತಪಲ್ಲಿ ರಸ್ತೆಯಲ್ಲಿ ಬೀದಿನಾಯಿಗಳ ಗುಂಪು ಅಡ್ಡಾದಿಡ್ಡಿಯಾಗಿ ಬೀಡುಬಿಟ್ಟಿರುವುದು.
ಬಾಗೇಪಲ್ಲಿ ಪಟ್ಟಣದ ಕೊತ್ತಪಲ್ಲಿ ರಸ್ತೆಯಲ್ಲಿ ಬೀದಿನಾಯಿಗಳ ಗುಂಪು ಅಡ್ಡಾದಿಡ್ಡಿಯಾಗಿ ಬೀಡುಬಿಟ್ಟಿರುವುದು.   

ಬಾಗೇಪಲ್ಲಿ: ಪಟ್ಟಣದ ಮುಖ್ಯರಸ್ತೆ ಹಾಗೂ ಬೀದಿಗಳಲ್ಲಿ ಬೀದಿನಾಯಿಗಳ ದಂಡು ಹೆಚ್ಚಾಗಿದೆ. ವಾಹನ ಸವಾರರ ದಾಳಿ ಮಾಡುತ್ತಿವೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಆಗಿದೆ.

ಪಟ್ಟಣದ ನ್ಯಾಷನಲ್ ಕಾಲೇಜಿನಿಂದ, ಸಿವಿಲ್ ನ್ಯಾಯಾಲಯದವರೆಗೆ ಮುಖ್ಯರಸ್ತೆ ಇದೆ. ರಸ್ತೆಯ ಇಕ್ಕೆಲಗಳಲ್ಲಿ ಬೀದಿನಾಯಿಗಳು ಗುಂಪಾಗಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತವೆ.

ಪಟ್ಟಣದ ಆವುಲಮಂದೆ ರಸ್ತೆ, ಗಂಗಮ್ಮ ಗುಡಿ ರಸ್ತೆ, ಭಜನೆ ಮಂದಿರ, ಸಂತೆಮೈದಾನ, ಕುಂಬಾರಪೇಟೆ, ಕೊತ್ತಪಲ್ಲಿ ರಸ್ತೆ, ಗೂಳೂರು ರಸ್ತೆ, ಕಾಲೊನಿ ರಸ್ತೆಗಳು ಸೇರಿದಂತೆ ವಾಲ್ಮೀಕಿ ಹಾಗೂ ಅಂಬೇಡ್ಕರ್ ನಗರಗಳಲ್ಲಿ ಬೀದಿನಾಯಿ ಹೆಚ್ಚಾಗಿವೆ.

ADVERTISEMENT

ಪಟ್ಟಣದ 7ನೇ ವಾರ್ಡ್‍ನಲ್ಲಿ ರಾಜಸ್ಥಾನದ ಕಂಬಳಿ ವ್ಯಾಪಾರಿಯೊಬ್ಬರಿಗೆ ಬೀದಿನಾಯಿ ಕಚ್ಚಿವೆ. ಶಾಲೆಗೆ ಸಂಚರಿಸುತ್ತಿದ್ದ ಮಕ್ಕಳ ಮೇಲೆ ದಾಳಿ ಮಾಡಿ ಕಾಲಿಗೆ ಕಚ್ಚಿವೆ. ಇಂತಹಾ ಘಟನೆಗಳು ಪಟ್ಟಣದಲ್ಲಿ ಹೆಚ್ಚಾಗಿದ್ದು, ಗಾಯಗೊಂಡವರು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪೊಲೀಸರಿಗೂ ಬೀದಿನಾಯಿಗಳಿಂದ ತೊಂದರೆ ಆಗಿದೆ. ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಸಂದರ್ಭದಲ್ಲಿ ಬೀದಿನಾಯಿಗಳು ಏಕಾಏಕಿ ದಾಳಿ ಮಾಡುತ್ತಿವೆ.

ನಾಯಿಗಳಿಗೆ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿದರೆ ಮಾತ್ರ ಬೀದಿನಾಯಿ ಕಡಿಮೆ ಆಗುತ್ತದೆ. ಪುರಸಭೆ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಶಿಕ್ಷಕ ಎಚ್.ಆರ್.ಸುಬ್ರಮಣ್ಯಂ ತಿಳಿಸಿದರು.

ಬೀದಿನಾಯಿ ಉಪಟಳ ಹೆಚ್ಚಾಗಿದೆ ಎಂದು ಸಾರ್ವಜನಿಕರಿಂದ ಮಾಹಿತಿ ಬಂದಿದೆ. ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಬೀದಿನಾಯಿಗಳ ಗುಂಪು ಅಡ್ಡಾದಿಡ್ಡಿಯಾಗಿ ಬೀಡುಬಿಟ್ಟಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.