ADVERTISEMENT

ಕೃಷಿ ಖುಷಿ | ‘ಶಶಿ’ಗೆ ಘಮ ತಂದ ಸುಗಂಧರಾಜ

ಗೌರಿಬಿದನೂರು ಕಾಚಮಾಚೇನಹಳ್ಳಿ ಯುವ ರೈತನ ಯಶೋಗಾಥೆ

ಕೆ.ಎನ್‌.ನರಸಿಂಹಮೂರ್ತಿ
Published 9 ಜೂನ್ 2024, 7:10 IST
Last Updated 9 ಜೂನ್ 2024, 7:10 IST
   

ಗೌರಿಬಿದನೂರು: ‘ಎರಡು ಎಕರೆಯಲ್ಲಿ ಸುಗಂಧ ರಾಜ ಹೂ ಬೆಳೆದಿದ್ದೇನೆ. ನಿರಂತರ ಆದಾಯವಾಗಿ ಆದಾಯ ಬರುತ್ತಿದೆ. ನಿತ್ಯ 180 ರಿಂದ 200 ಕೆ.ಜಿ ಸುಗಂಧರಾಜ ಹೂ ಕೊಯ್ಲು ಮಾಡುತ್ತಿದ್ದು ಒಂದು ಕೆ.ಜಿಗೆ ಕನಿಷ್ಠ ₹50 ಸಿಕ್ಕರೂ ಪ್ರತಿದಿನ 10,000 ಸಿಗುತ್ತಿದೆ’–ಹೀಗೆ ತಮ್ಮ ಹೂ ಬೇಸಾಯದ ಬಗ್ಗೆ ಮಾಹಿತಿ ನೀಡಿದರು ತಾಲ್ಲೂಕಿನ ಕಾಚಮಾಚೇನಹಳ್ಳಿಯ ಯುವ ರೈತ ಶಶಿಕುಮಾರ್. 

ಹೂ ಬೆಳೆಗಾರರಾಗಿ ಗಮನ ಸೆಳೆದಿರುವ ಶಶಿಕುಮಾರ್ ಅವರ ಬದುಕನ್ನು ಸಮೃದ್ಧಗೊಳಿಸಿರುವುದು ಸಹ ಹೂ ಬೇಸಾಯವೇ. 

4 ಎಕರೆ ಜಮೀನಿನಲ್ಲಿ ನಿರಂತರವಾಗಿ ಆದಾಯ ಗಳಿಸುವ ಹೂಗಳನ್ನು ಬೆಳೆದು ಯಶಸ್ಸಿನ ಹಾದಿಯಲ್ಲಿದ್ದಾರೆ. ಅರ್ಧ ಎಕರೆಯಲ್ಲಿ ಕನಕಾಂಬರ ಬೆಳೆಯುತ್ತಿದ್ದು ಇದೂ ಸಹ ಉತ್ತಮ ಆದಾಯ ಕೊಡುತ್ತಿದೆ.

ADVERTISEMENT

ಪ್ರತಿದಿನ 5ರಿಂದ 6 ಕೆ.ಜಿ ಕನಕಾoಬರ ಹೂ ಬಿಡಿಸುತ್ತಿದ್ದು ಪ್ರತಿ ಕೆ.ಜಿ ಗೆ ಕನಿಷ್ಠ  ₹500 ಮಾರುಕಟ್ಟೆಯಲ್ಲಿ ಸಿಗುತ್ತಿದೆ. ಇದರಿಂದ ನಿತ್ಯ ಕನಕಾoಬರ ಹೂವಿನಿಂದ ಕನಿಷ್ಠ ₹ 2,000 ಆದಾಯ ಗಳಿಸುತ್ತಿದ್ದಾರೆ. ಹಬ್ಬಗಳಲ್ಲಿ ಹೂವಿನ ಬೆಲೆ ಹೆಚ್ಚಾಗಿರುವುದರಿಂದ ಉತ್ತಮ ಆದಾಯ ಪಡೆಯುವರು.

ಕೃಷಿ ಎಂದರೆ ಮೂಗು ಮುರಿಯುವ ಈ ಕಾಲದಲ್ಲಿ ಹೂ ಬೇಸಾಯ ಅವರಿಗೆ ಆರ್ಥಿಕವಾಗಿ ಅನುಕೂಲ ತಂದಿದೆ. ‘ಆತ್ಮಸ್ಥೈರ್ಯ ಮತ್ತು ಆತ್ಮಾಭಿಮಾನದಿಂದ ಭೂಮಿಯನ್ನು ನಂಬಿದರೆ ಯಾವತ್ತಿಗೂ ಮೋಸವಾಗುವುದಿಲ್ಲ’ ಎನ್ನುತ್ತಾರೆ ಶಶಿಕುಮಾರ್.

ಅರ್ಧ ಎಕರೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಬೆಳೆದಿದ್ದಾರೆ. ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಒಳ್ಳೆಯ ಆದಾಯ ದೊರೆಯುತ್ತಿದೆ. ಜೊತೆಗೆ ಎರಡು ಸೀಮೆ ಹಸುಗಳಿರುವುದರಿಂದ ಮನೆಗೆ ಹಾಲು, ಮೊಸರು, ತುಪ್ಪದ ಕೊರತೆ ಇಲ್ಲ. 

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 30 ಲೀಟರ್ ಹಾಲನ್ನು ಸ್ಥಳೀಯ ಡೇರಿಗೆ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಸಂಸಾರದ ನಿರ್ವಹಣೆ ತುಂಬಾ ಸುಲಭವಾಗಿದೆ. ವಾರಕ್ಕೊಮ್ಮೆ ಡೇರಿಯಿಂದ ಬಟವಾಡೆ ನೀಡುತ್ತಾರೆ. ಎಲ್ಲಾ ಖರ್ಚನ್ನು ಕಳೆದು ಕನಿಷ್ಠ 10 ಸಾವಿರ ಸಿಗುತ್ತದೆ ಎನ್ನುವುದು ಅವರ ಮಾತು. 

ಜೊತೆಗೆ ಉಳಿಕೆ ಜಮೀನಿನಲ್ಲಿ ಜೋಳ, ರಾಗಿ, ನೇಪಿಯರ್ ಹುಲ್ಲು ಮತ್ತು ಜಮೀನಿನ ಬದುಗಳಲ್ಲಿ ಪಡವಲ ಕಾಯಿ, ತೆಂಗು, ಮಾವು, ಬಾಳೆ ಹೀಗೆ ಹಲವು ತೋಟಗಾರಿಕಾ ಬೆಳೆಗಳನ್ನು ಬೆಳೆದಿದ್ದಾರೆ. ಇರುವ ಅಲ್ಪ ಭೂಮಿಯಲ್ಲಿಯೇ ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಕೇವಲ ಒಂದು ಕೊಳವೆ ಬಾವಿಯಿಂದ, ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಸಿಗುವ ರೈನ್ ಟ್ಯೂಬ್ ಬಳಸಿಕೊಂಡು 4 ಎಕರೆ ಜಮೀನಿನಲ್ಲಿ ಯಶಸ್ವಿಯಾಗಿ ಕೃಷಿ ಮಾಡುತ್ತಿದ್ದಾರೆ.

ಕೃಷಿ ಎನ್ನುವ ಬಂಗಾರದ ಬದುಕು

ಕೃಷಿ ಎಂದರೆ ಹೊಲದಲ್ಲಿ ಉತ್ತು ಬಿತ್ತುವ ಕಾಯಕವಷ್ಟೇ ಅಲ್ಲ, ಕೋಳಿ ಸಾಕಣೆಯಿಂದ ಹಿಡಿದು ಹೈನುಗಾರಿಕೆವರೆಗೆ ಎಲ್ಲವೂ ಕೃಷಿಯೊಂದಿಗೆ ಬೆರೆತಿದೆ. ಎಲ್ಲವನ್ನೂ ಜೊತೆಯಲ್ಲಿ ಮಾಡಿದರೆ ಕೃಷಿ ಬಂಗಾರದ ಬದುಕು ಎನಿಸುತ್ತದೆ ಎನ್ನುವರು ಶಶಿಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.