ಕಾಂಗ್ರೆಸ್‌ನಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ, ಎರಡನೇ ಅವಧಿಯಲ್ಲಿ 14 ತಿಂಗಳಿಗೆ ರಾಜೀನಾಮೆ ಕೊಟ್ಟು, ಸದ್ಯ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ಕೆ.ಸುಧಾಕರ್ ಅವರು ‘ನನ್ನ ಜನರಿಗೆ ಅನ್ಯಾಯವಾದರೆ ನಾನು ಒಂದಲ್ಲ 10 ಬಾರಿ ರಾಜೀನಾಮೆ ಕೊಡುತ್ತೇನೆ’ ಎನ್ನುತ್ತಾರೆ. ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನ ಇಲ್ಲಿದೆ...
* ಹಣ, ಅಧಿಕಾರದ ಆಸೆಗೆ ಪಕ್ಷ ದ್ರೋಹ, ಪಕ್ಷಾಂತರ ಮಾಡಿ ಉಪ ಚುನಾವಣೆ ತಂದಿಟ್ಟ ಸುಧಾಕರ್ ಅವರಿಗೆ ಪಾಠ ಕಲಿಸಿ ಎನ್ನುತ್ತಿದ್ದಾರಲ್ಲ ನಿಮ್ಮ ವಿರೋಧಿಗಳು?
ಅಯ್ಯೊ, ನನ್ನ ಹಣವೆಲ್ಲ ಕಾಂಗ್ರೆಸ್‌ಗೆ ಹಾಕಿ, ಹಾಕಿ ನನ್ನ ಜೀವನವೆಲ್ಲ ಸವೆದಿದೆ. ಹಣಕ್ಕೆ ಮಾರಿಕೊಳ್ಳುವ ಸ್ಥಿತಿ ಭಗವಂತ ನನಗೆ ಕೊಟ್ಟಿಲ್ಲ. ಅಂತಹ ವ್ಯಕ್ತಿತ್ವ ನನ್ನದಲ್ಲ.
* ಈ ಹಿಂದಿನ ಎರಡು ಚುನಾವಣೆಗಳಲ್ಲಿ ಮಂಚೇನಹಳ್ಳಿ ತಾಲ್ಲೂಕು, ವೈದ್ಯಕೀಯ ಕಾಲೇಜು, ನಿವೇಶನ ಹಂಚಿಕೆ ವಿಚಾರವಾಗಿ ಮಾತನಾಡದ ನೀವು, ಈಗ ಏಕೆ ಅವುಗಳ ಜಪ ಮಾಡುತ್ತಿದ್ದೀರಿ?
ಇವೆಲ್ಲ ಒಂದೇ ಬಾರಿ ತರಲು ಆಗುವುದಿಲ್ಲ. ಅದಕ್ಕಾಗಿ ಕಳೆದ ಮೂರುವರೆ ವರ್ಷಗಳಿಂದ ಪ್ರಯತ್ನಪಟ್ಟಿದ್ದೇನೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಎಷ್ಟೇ ಮನವಿ ಮಾಡಿದರೂ ವೈದ್ಯಕೀಯ ಕಾಲೇಜಿಗೆ ಅನುದಾನ ಕೊಡಲಿಲ್ಲ. ಬದಲು ಅದನ್ನು ಕನಕಪುರ ತಾಲ್ಲೂಕಿಗೆ ವರ್ಗಾಯಿಸಿದರು. ಮಂಚೇನಹಳ್ಳಿ ತಾಲ್ಲೂಕು ಮಾಡಲು ಶಿವಶಂಕರರೆಡ್ಡಿ ಅಡ್ಡಗಾಲು ಹಾಕುತ್ತ ಬಂದರು.
ನಿವೇಶನಗಳ ಹಂಚಿಕೆಗಾಗಿ ಮೂರು ವರ್ಷಗಳಿಂದ 138 ಎಕರೆ ಜಾಗ ಗುರುತಿಸಿ, ಅದಕ್ಕೆ ಸಂಬಂಧಪಟ್ಟ ತಕರಾರುಗಳನ್ನೆಲ್ಲ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬಗೆಹರಿಸಿಕೊಂಡಿದ್ದೆ. ಆದರೆ ಮಂಜೂರಾತಿ ದೊರೆತಿರಲಿಲ್ಲ. ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿ ಭೂಮಿ ಮಂಜೂರು ಮಾಡಿಸಿಕೊಂಡಿರುವೆ. ಇಂತಹ ಸಾಧನೆ ಮಾಡಿರುವುದಕ್ಕೆ ಜೀವನ ಪರ್ಯಂತ ಆತ್ಮತೃಪ್ತಿ ಸಿಗಲಿದೆ.
* ಹಿಂದೆಲ್ಲ ಮಾತೆತಿದರೆ ಎತ್ತಿನಹೊಳೆ, ಎಚ್.ಎನ್.ವ್ಯಾಲಿ ವಿಚಾರ ಪ್ರಸ್ತಾಪಿಸುತ್ತಿದ್ದ ನೀವು, ಈಗ ಅವುಗಳ ಬಗ್ಗೆ ಏಕೆ ಅಷ್ಟಾಗಿ ಮಾತನಾಡುತ್ತಿಲ್ಲ?
ಎಚ್.ಎನ್.ವ್ಯಾಲಿ ಯೋಜನೆ ತಂದವನು ನಾನು. ಒಂದು ತಿಂಗಳಲ್ಲಿ ಆ ನೀರು ಕಂದವಾರ ಕೆರೆಗೆ ಬರಲಿದೆ. ಸಮ್ಮಿಶ್ರ ಸರ್ಕಾರದಲ್ಲಿ ಎತ್ತಿನಹೊಳೆ ಯೋಜನೆಗೆ ಭೂಸ್ವಾಧೀನ ಅಧಿಕಾರಿಗಳನ್ನು ನೇಮಕ ಮಾಡಲಿಲ್ಲ. ಇನ್ನು ಕಾಮಗಾರಿ ಎಲ್ಲಿ ಮುಗಿಯುತ್ತದೆ? ಅವರಿಗೆ ಆ ಕಾಮಗಾರಿ ಮುಗಿಸುವ ಬದ್ಧತೆ ಇರಲಿಲ್ಲ.
* ಕ್ಷೇತ್ರದ ಇತಿಹಾಸ ಅವಲೋಕಿಸಿದರೆ ಇದು ಕಾಂಗ್ರೆಸ್ ಭದ್ರಕೋಟೆಯಂತಿದೆ. ಬಿಜೆಪಿಯಿಂದ ಕಣಕ್ಕಿಳಿದಿರುವ ನಿಮ್ಮ ಗೆಲುವು ಸುಲಭಕ್ಕೆ ದಕ್ಕುತ್ತೆ ಅನಿಸುತ್ತಾ?
ಸದ್ಯ ಕಣದಲ್ಲಿರುವ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಚಾರಿತ್ರ್ಯಹೀನರು, ಮೇಲಾಗಿ ಹೊರಗಿನವರು. ಇಬ್ಬರಿಗೂ ಸಾಮಾಜಿಕ ಚಿಂತನೆ, ಬದ್ಧತೆ ಇಲ್ಲ. ಹಾಗಾಗಿ ಅವರು ಎಷ್ಟೇ ಹಣದ ಹೊಳೆ ಹರಿಸಿದರೂ ಜನ ಅವರನ್ನು ಸಾರಾಸಗಟಾಗಿ ತಿರಸ್ಕಾರ ಮಾಡುತ್ತಾರೆ.
* ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ನಿಮ್ಮನ್ನು ಸೋಲಿಸಲು ತಂತ್ರ ಮಾಡುತ್ತಿವೆ ಎಂಬ ವದಂತಿ ಹಬ್ಬಿದೆಯಲ್ಲ?
ಅಂತಹದೊಂದು ಒಳಸಂಚು ನಡೆದಿರುವುದು ನಿಜ. ಕಾಂಗ್ರೆಸ್‌ನವರು ಜೆಡಿಎಸ್‌ನವರಿಗೆ ಮತ ನೀಡಬೇಕು ಎಂಬ ತೀರ್ಮಾನ ಆಗಿದೆ, ಕಾಂಗ್ರೆಸ್ ಅಭ್ಯರ್ಥಿ ಡಮ್ಮಿ ಎಂದು ಹೇಳುತ್ತಿದ್ದಾರೆ. ಎರಡು ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ, ಬಳಿಕ ಜನರ ಕಣ್ಣಿಗೆ ಮಂಕುಬೂದಿ ಎರಚಿ, ಒಬ್ಬರಿಗೆ ಮಾತ್ರ ಒಳಗಿಂದ ಒಳಗೆ ಬೆಂಬಲಿಸುವುದು ಜನರಿಗೆ ಮಾಡುವ ಮೋಸವಲ್ಲವೆ?
* ನಿಮಗೆ ನೇರ ಸ್ಪರ್ಧಿ ಯಾರು?
ನನಗೆ ಕಣದಲ್ಲಿರುವ ಅಭ್ಯರ್ಥಿಗಳು ಪ್ರತಿಸ್ಪರ್ಧಿಗಳಲ್ಲ. ನನ್ನ ಸವಾಲುಗಳು, ನನಗೆ ಅನೇಕ ಕನಸು, ಗುರಿಗಳಿವೆ ಅವುಗಳೇ ನನಗೆ ಪ್ರತಿಸ್ಪರ್ಧಿಗಳು. ಕಾಂಗ್ರೆಸ್, ಜೆಡಿಎಸ್ ಇಬ್ಬರನ್ನೂ ನಾನು ಗಣನೆಗೆ ತೆಗೆದುಕೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.