ADVERTISEMENT

ಸುಧಾಕರ್ ಅನರ್ಹರಲ್ಲ, ಚಿಕ್ಕಬಳ್ಳಾಪುರದ ಮುತ್ತು

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ರೋಡ್‌ ಶೋ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 14:26 IST
Last Updated 3 ಡಿಸೆಂಬರ್ 2019, 14:26 IST
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ರೋಡ್ ಶೋ
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ರೋಡ್ ಶೋ   

ಚಿಕ್ಕಬಳ್ಳಾಪುರ: ‘ನನ್ನ ಮತದಾರರಿಗೆ ಅನ್ಯಾಯವಾಗಿದೆ ಎಂದು ಶಾಸಕ ಸ್ಥಾನ ತ್ಯಜಿಸಿದ, ಚಿಕ್ಕಬಳ್ಳಾಪುರದ ಹಿತದೃಷ್ಟಿಯಿಂದ ಅಧಿಕಾರ ತ್ಯಾಗ ಮಾಡಿದಂತಹ ಸುಧಾಕರ್ ಅವರು ಶಾಸಕರಾಗಿ, ಸಚಿವರಾಗಬೇಕೇ ಬೇಡವೆ? ನಿಮ್ಮ ಮತ ಸುಧಾಕರ್ ಅವರನ್ನು ಸಚಿವರನ್ನಾಗಿ ಮಾಡಲು, ಯಡಿಯೂರಪ್ಪ ಅವರ ಸರ್ಕಾರ ಭದ್ರ ಮಾಡಲು ನೀಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಪರ ನಡೆದ ರೋಡ್‌ ಶೋದಲ್ಲಿ ಮಾತನಾಡಿದ ಅವರು, ‘ಸುಧಾಕರ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದಕ್ಕೆ ಬಹಳಷ್ಟು ಜನರಿಗೆ ಸಂಶಯಗಳು ಕಾಡಬಹುದು. ರಾಜ್ಯದ ರಾಜಕಾರಣದ ಇತಿಹಾಸ ನೋಡಿದರೆ ವಿರೋಧ ಪಕ್ಷದ ಶಾಸಕ ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿದ್ದು ಕಂಡಿದ್ದೇವೆ. ಪಕ್ಷೇತರ ಅಭ್ಯರ್ಥಿ ಆಡಳಿತ ಪಕ್ಷದ ಜತೆ ಕೈಜೋಡಿಸಿದ್ದು ನೋಡಿದ್ದೇವೆ. ಆದರೆ ಅಧಿಕಾರದಲ್ಲಿ ಇರುವ, ಮುಖ್ಯಮಂತ್ರಿ ಇರುವ ಪಕ್ಷದ ಸುಧಾಕರ್ ಅವರು ಶಾಸಕ ರಾಜೀನಾಮೆ ಕೊಟ್ಟಿದ್ದಾರೆ ಎಂದರೆ ಅದು ತನ್ನ ಜನರಿಗೆ ನ್ಯಾಯ ಕೊಡಿಸಲು’ ಎಂದು ಅಭಿಪ್ರಾಯಪಟ್ಟರು.

‘2018ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲಿ ಎಂದು ಜನ ಬಿಜೆಪಿಗೆ ಆಶೀರ್ವಾದ ಮಾಡಿದರು. ಆದರೆ ಕುಟುಂಬ ರಾಜಕಾರಣ, ವಂಶಾಡಳಿತ ರಾಜಕಾರಣದವರು ಅಪವಿತ್ರ ಮೈತ್ರಿ ಮಾಡಿಕೊಂಡರು. ಪರಿಣಾಮ, ಮುಖ್ಯಮಂತ್ರಿಯಾದ ಕುಮಾರಸ್ವಾಮಿ ವಿಧಾನಸೌಧದ ಬದಲು ಪಂಚತಾರಾ ಹೋಟೆಲ್‌ನಿಂದ ಆಡಳಿತ ನಡೆಸಿದರು. ಅಲ್ಲಿಗೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳಿದ ಶಾಸಕರಿಗೆ ಅವಮಾನ ಮಾಡಿದರು. ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು, ಮಂಚೇನಹಳ್ಳಿ ತಾಲ್ಲೂಕಿನ ಅರ್ಜಿ ತಿರಸ್ಕಾರ ಮಾಡಿದರು. ನೀರಿನ ಸಮಸ್ಯೆಗಳನ್ನು ಬಗೆ ಹರಿಸಲು ಮುಂದಾಗಲಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಸುಧಾಕರ್ ಅವರಿಗೆ ಅನರ್ಹರು ಎಂದು ಟೀಕಿಸುವುದು ಸರಿಯಲ್ಲ. ಅವರು ಅವರು ಈ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ರಾಜೀನಾಮೆ ಕೊಟ್ಟು ಅರ್ಹರಾಗಿದ್ದಾರೆ. ಅವರು ಚಿಕ್ಕಬಳ್ಳಾಪುರ ಕ್ಷೇತ್ರದ ಮುತ್ತು. ಸುಧಾಕರ್ ಅವರಿಗೆ ನೀಡುವ ಮತ ಈ ಕ್ಷೇತ್ರದ ಅಭಿವೃದ್ಧಿಗೆ ಪೂರಕ. ಯಡಿಯೂರಪ್ಪ ಅವರ ಸರ್ಕಾರದ ಭದ್ರತೆಗೆ ಹಾಕಿದಂತೆ. ಯಡಿಯೂರಪ್ಪ ಅವರು ಈ ಕ್ಷೇತ್ರಕ್ಕೆ ಮೂರೇ ತಿಂಗಳಲ್ಲಿ ₹650 ಕೋಟಿ ಕೊಟ್ಟರು. ಮುಂದಿನ ಮೂರುವರೆ ವರ್ಷಗಳಲ್ಲಿ ₨3,500 ಕೋಟಿ ಅನುದಾನ ಹರಿದು ಬರಲಿದೆ’ ಎಂದರು.

ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮಾತನಾಡಿ, ‘ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಅವರು ಡಿ.9ರ ನಂತರ ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂಬ ಹಗಲುಗನಸು ಕಾಣುತ್ತಿದ್ದಾರೆ. ಆ ಆಸೆ ಇನ್ನು ಅವರ ಜನ್ಮದಲ್ಲಿ ಈಡೇರುವುದಿಲ್ಲ. ವಾರದ ಹಿಂದೆ ದೇವೇಗೌಡರು ಯಡಿಯೂರಪ್ಪ ಅವರ ಸರ್ಕಾರ ಬೀಳಿಸುವುದಿಲ್ಲ ಎನ್ನುತ್ತಾರೆ. ಅದು ನಿನ್ನೆ ಮೊನ್ನೆಯಿಂದ ಬದಲಾಗಿ ಹೋಗಿದೆ. ಸಿದ್ದರಾಮಯ್ಯ ಅವರ ಜತೆ ಕೈಮಿಲಾಯಿಸುವುದು, ಮತ್ತೆ ಮೈತ್ರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಈ ಹಿಂದೆ ಸಮ್ಮಿಶ್ರ ಸರ್ಕಾರ ಪತನಗೊಂಡಾಗ ಕಾಂಗ್ರೆಸ್, ಜೆಡಿಎಸ್‌ನವರು ಬೀದಿಯಲ್ಲಿ ವ್ಯಾಜ್ಯ ಮಾಡಿಕೊಂಡಿದ್ದು ಜನರೆಲ್ಲ ನೋಡಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವರ ಕನಸು ನನಸಾಗುವುದಿಲ್ಲ’ ಎಂದು ತಿಳಿಸಿದರು.

‘ಚಿಕ್ಕಬಳ್ಳಾಪುರ ಜಿಲ್ಲೆಯ ಅಳಿಯ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಅವರು ಜಿಲ್ಲೆಗೆ ಬಂದ ವೈದ್ಯಕೀಯ ಕಾಲೇಜನ್ನು ಸ್ನೇಹಿತರಿಗೆ ಉಡುಗೊರೆಯಾಗಿ ಕನಕಪುರಕ್ಕೆ ಕೊಟ್ಟರು. ವೈದ್ಯಕೀಯ ಕಾಲೇಜು ಕೇಳಿದ ನನಗೆ ಅದರಿಂದ ಏನೂ ಉಪಯೋಗವಿಲ್ಲ ಎಂದರು. ಈ ಅನ್ಯಾಯವನ್ನು ಪ್ರಶ್ನಿಸಿಯೇ ನಾವು ರಾಜೀನಾಮೆ ಕೊಟ್ಟೆವು. ಯಡಿಯೂರಪ್ಪ ಅವರು ಆ ಅನ್ಯಾಯ ಸರಿ ಮಾಡಲು ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಕೊಟ್ಟರು’ ಎಂದು ಹೇಳಿದರು.

‘ಜಿಲ್ಲೆಯ ಅಳಿಯ ಎಂದು ಹೇಳುವವರು ಇವತ್ತು ಒಕ್ಕಲಿಗ ಸಮುದಾಯದ ಹೆಸರು ಮುಂದು ಮಾಡುತ್ತಿರುವವರಿಗೆ, ಸಮುದಾಯದ ಬಗ್ಗೆ ಅಷ್ಟೊಂದು ಪ್ರೀತಿ ಇದ್ದಿದ್ದರೆ 2009ರಲ್ಲಿ ಬಚ್ಚೇಗೌಡರ ವಿರುದ್ಧ ಸ್ಪರ್ಧಿಸುವ ಔಚಿತ್ಯ ಏನಿತ್ತು? ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಒಕ್ಕಲಿಗರು ದಡ್ಡರಲ್ಲ. ಸಮುದಾಯದ ಮತ ತರುವ ವ್ಯರ್ಥ ಪ್ರಯತ್ನ ಮಾಡಲು ಹೋಗಬೇಡಿ. ನಿಮ್ಮ ನಿಜವಾದ ಬಣ್ಣ ಇಡೀ ರಾಜ್ಯದ ಜನರಿಗೆ ಗೊತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಶಾಸಕರಾದ ಗೂಳಿಹಟ್ಟಿ ಶೇಖರ್, ಎಂ.ಚಂದ್ರಪ್ಪ, ನಾಗೇಶ್‌, ಮಾಜಿ ಶಾಸಕ ಶಿವಾನಂದ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಡಾ.ಜಿ.ವಿ.ಮಂಜುನಾಥ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.