ADVERTISEMENT

ಬಿಜೆಪಿ ಪಾಳಯದಲ್ಲಿ ಕಾಣದ ಸುಧಾಕರ್!

ವಿಧಾನಸಭೆ ಚುನಾವಣೆ ಫಲಿತಾಂಶ ಬಂದು ಒಂದೂವರೆ ತಿಂಗಳು; ಸಭೆಗಳಲ್ಲಿಯೂ ಭಾಗಿಯಿಲ್ಲ

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 7:36 IST
Last Updated 1 ಜುಲೈ 2023, 7:36 IST
ಡಾ.ಕೆ.ಸುಧಾಕರ್
ಡಾ.ಕೆ.ಸುಧಾಕರ್   

ಡಿ.ಎಂ.ಕುರ್ಕೆ ಪ್ರಶಾಂತ್

ಚಿಕ್ಕಬಳ್ಳಾಪುರ: ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ‌ ದಂಡನಾಯಕ ಎನಿಸಿದ್ದವರು ಮಾಜಿ ಸಚಿವ ಡಾ.ಕೆ.ಸುಧಾಕರ್. ಚುನಾವಣೆಯ ಫಲಿತಾಂಶ ಪ್ರಕಟವಾಗಿ ಒಂದೂವರೆ ತಿಂಗಳು ಕಳೆದಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿಯೂ ಸೋಲಿನ ಆತ್ಮಾವಲೋಕನ ಸಭೆಗಳು ನಡೆದಿವೆ. ಆರ್‌.ಅಶೋಕ್ ನೇತೃತ್ವದ ರಾಜ್ಯ ಬಿಜೆಪಿ ತಂಡ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ಸಹ ನಡೆಸಿದೆ. ಪಕ್ಷದ ಒಳಗೆ ಇಷ್ಟೆಲ್ಲಾ ಬೆಳವಣಿಗೆಗಳು ಆದರೂ ಡಾ.ಕೆ.ಸುಧಾಕರ್ ಮಾತ್ರ ಈ ಬಗ್ಗೆ ತಲೆ ಹಾಕಿಲ್ಲ. ಬಿಜೆಪಿ ಸಭೆಗಳಲ್ಲಿ ಪಾಲ್ಗೊಂಡಿಲ್ಲ. 

ಮೇ 15ರಂದು ಚಿಕ್ಕಬಳ್ಳಾಪುರದ ತಮ್ಮ ಗೃಹ ಕಚೇರಿಯಲ್ಲಿ ಸುಧಾಕರ್ ಬೆಂಬಲಿಗರ ಸಭೆ ನಡೆಸಿದ್ದರು. ಆ ಸಭೆಯಲ್ಲಿ ‘ನನ್ನ ಸೋಲು ಅಭಿವೃದ್ಧಿಯ ಸೋಲು. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಯಾರೂ ಎದೆಗುಂದುವ ಅವಶ್ಯಕತೆ ಇಲ್ಲ. ಇತಿಹಾಸದಲ್ಲಿ ಧೀಮಂತ ನಾಯಕರು ಸೋತಿದ್ದಾರೆ. ಮತ್ತೆ ಪುಟಿದಿದ್ದಾರೆ’ ಎಂದು ನುಡಿದಿದ್ದರು. ಬೆಂಬಲಿಗರಲ್ಲಿ ಧೈರ್ಯ ತುಂಬಿದ್ದರು.

ADVERTISEMENT

ಮೇ 22ರಂದು ಚಿಕ್ಕಬಳ್ಳಾಪುರದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ಅಧ್ಯಕ್ಷತೆಯಲ್ಲಿ ಸೋಲಿನ ಆತ್ಮಾವಲೋಕನ ಸಭೆ ನಡೆಯಿತು. ಬಾಗೇಪಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು, ಶಿಡ್ಲಘಟ್ಟ ಕ್ಷೇತ್ರದ ಅಭ್ಯರ್ಥಿ ಸೀಕಲ್ ರಾಮಚಂದ್ರಗೌಡ, ಚಿಂತಾಮಣಿ ಕ್ಷೇತ್ರದ ಅಭ್ಯರ್ಥಿ ಜಿ.ಎನ್.ವೇಣು ಗೋಪಾಲ್ ಹಾಜರಿದ್ದರು. ಗೌರಿಬಿದನೂರು ಕ್ಷೇತ್ರದ ಶಶಿಧರ್ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೈರಾಗಿದ್ದರು. 

ಜೂನ್ 22ರಂದು ನಗರದಲ್ಲಿ ನಿಗದಿಯಾಗಿದ್ದ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಭೆಗೆ ಸುಧಾಕರ್ ಅವರು ಹಾಜರಾಗುವುದಿಲ್ಲ ಎನ್ನುವುದು ತಿಳಿದೇ ಆ ಸಭೆಯನ್ನು ಬಾಗೇಪಲ್ಲಿಗೆ ಸ್ಥಳಾಂತರಿಸಲಾಯಿತು ಎನ್ನುವ ಮಾತುಗಳಿವೆ.

ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ ಬಿಜೆಪಿ ಅಭ್ಯರ್ಥಿಗಳು, ಪಕ್ಷದ ಕಚೇರಿಗಳಲ್ಲಿ ಮತ್ತು ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಸುಧಾಕರ್ ಅವರು ತಮ್ಮ ಗೃಹಕಚೇರಿಯಲ್ಲಿ ಸಭೆ ನಡೆಸಿದ್ದು
ಬಿಟ್ಟರೆ ಅಲ್ಲಿಂದ ಬಿಜೆಪಿಯ ಒಂದೂ ಸಭೆಯಲ್ಲಿ ಪಾಲ್ಗೊಂಡಿಲ್ಲ. ಬಿಜೆಪಿ ಕಾರ್ಯಕರ್ತರು ಸುಧಾಕರ್
ಅವರು ಸಕ್ರಿಯರಾಗುವತ್ತ ದೃಷ್ಟಿ ಹರಿಸಿದ್ದಾರೆ.

ಈಗಲೂ ಬಿಜೆಪಿಯ ಅಗ್ರ ನಾಯಕ: ಸುಧಾಕರ್ ಸೋಲು ಅನುಭವಿಸಿದರೂ ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿಯ ಅಗ್ರ ನಾಯಕ ಎನಿಸಿದ್ದಾರೆ. ಪಕ್ಷ ಸಂಘಟನೆಗೆ ಬಂಡವಾಳ ಹೂಡಿಕೆ, ಕಾರ್ಯಕರ್ತರನ್ನು ಜೊತೆಯಲ್ಲಿ ಕೊಂಡೊಯ್ಯುವ ಶಕ್ತಿ ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಅವರದ್ದೇ ಆಗಿದೆ.

‘ಸುಧಾಕರ್ ನೇತೃತ್ವ; ಪಕ್ಷಕ್ಕೆ ಶಕ್ತಿ’ ಡಾ.ಕೆ.ಸುಧಾಕರ್ ಅವರ ನೇತೃತ್ವದಲ್ಲಿಯೇ ಜಿಲ್ಲಾ ಪಂಚಾಯಿತಿ ತಾಲ್ಲೂಕು ಪಂಚಾಯಿತಿ ಸೇರಿದಂತೆ ಮುಂಬರುವ ಎಲ್ಲ ಚುನಾವಣೆಗಳನ್ನು ಬಿಜೆಪಿ ಎದುರಿಸಲಿದೆ. ಕಾರ್ಯಕರ್ತರಲ್ಲಿ ಉತ್ಸಾಹ ಮತ್ತು ಹುರುಪು ಮೂಡಿಸಲಾಗುವುದು. ನಮ್ಮ ಕಾರ್ಯಕರ್ತರ ಆತ್ಮವಿಶ್ವಾಸ ಕುಗ್ಗಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಮೈತ್ರಿಯಾದರೆ ಸ್ಪರ್ಧೆ ಸಾಧ್ಯತೆ? ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಏರ್ಪಟ್ಟರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಡಾ.ಕೆ.ಸುಧಾಕರ್ ಬಿಜೆಪಿ ಅಭ್ಯರ್ಥಿ ಆಗುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು.  ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಒಕ್ಕಲಿಗ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ತೀರಾ ಕಡಿಮೆ ಇದೆ. ಈ ಕ್ಷೇತ್ರದಲ್ಲಿ ಒಕ್ಕಲಿಗರು ಬಹುಸಂಖ್ಯಾತರಾಗಿದ್ದಾರೆ. ಒಂದು ವೇಳೆ ಜೆಡಿಎಸ್‌ ಮತ್ತು ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡರೆ ಡಾ.ಕೆ.ಸುಧಾಕರ್ ಚಿಕ್ಕಬಳ್ಳಾಪುರದ ಅಭ್ಯರ್ಥಿಯಾಗುವ ಸಾಧ್ಯತೆ ಕೇಳಿ ಬರುತ್ತಿದೆ. ಸುಧಾಕರ್ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವರು ಎನ್ನುವ ಅಂತೆ ಕಂತೆಗಳ ಸುದ್ದಿ ಸಹ ಹರಡಿತ್ತು. ಇದನ್ನು ಸುಧಾಕರ್ ಅವರ ಆಪ್ತರು ನಿರಾಕರಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.