ಶಿಡ್ಲಘಟ್ಟ: ರಾಜ್ಯದಾದ್ಯಂತ ರೈತ ಸಮುದಾಯದಲ್ಲಿ ತಲ್ಲಣ ಮೂಡಿಸಿರುವ ವಕ್ಫ್ ಆಸ್ತಿ ವಿಚಾರವು ಶಿಡ್ಲಘಟ್ಟಕ್ಕೂ ವ್ಯಾಪಿಸಿದೆ. ತಾಲ್ಲೂಕಿನ ಬೆಳ್ಳೂಟಿ ಗೇಟ್‌ನಲ್ಲಿರುವ ಮುಜರಾಯಿ ಇಲಾಖೆಗೆ ಸೇರಿದ ಗುಟ್ಟಾಂಜನೇಯ ದೇವಾಲಯದ ಜಾಗದ ಪಹಣಿಯಲ್ಲೂ ಖಬರಸ್ಥಾನ್ ವಕ್ಫ್ ಸ್ವತ್ತು ಎಂದು ನಮೂದು ಆಗಿದೆ.
ಶಿಡ್ಲಘಟ್ಟ-ಜಂಗಮಕೋಟೆ ಮಾರ್ಗದ ಬೆಳ್ಳೂಟಿ ಗೇಟ್‌ನಲ್ಲಿನ ಸರ್ವೆ ನಂಬರ್ 6ರ ಜಮೀನಿನಲ್ಲಿ ಗುಟ್ಟಾಂಜನೇಯ ದೇವಾಲಯವಿದ್ದು ಈ ಪೂರಾ ಜಮೀನಿನ ಪಹಣಿಯಲ್ಲಿ ಖಬರಸ್ಥಾನ್ ವಕ್ಫ್ ಸ್ವತ್ತು ಎಂದು ನಮೂದಾಗಿದೆ.
ಗೆಜೆಟ್ ನೋಟಿಫಿಕೇಷನ್ ಆಗಿರುವಂತೆ ಗುಟ್ಟಾಂಜನೇಯ ದೇವಾಲಯಕ್ಕೆ 1.08 ಎಕರೆ ಜಮೀನು ಸೇರಬೇಕಿದ್ದು ಸರ್ವೆ ನಂಬರ್ 6ರ 1.30 ಎಕರೆ ಪೈಕಿ 1.08 ಎಕರೆ ಜಮೀನಿನ ಪಹಣಿಯಲ್ಲಿ ಗುಟ್ಟಾಂಜನೇಯ ದೇವಾಲಯ ಎಂದು ನಮೂದು ಮಾಡಬೇಕೆಂದು ಬೆಳ್ಳೂಟಿ ಗ್ರಾಮಸ್ಥರು ಕಳೆದ ಅಕ್ಟೋಬರ್ ತಿಂಗಳಲ್ಲಿ ತಹಶೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಗ್ರಾಮಸ್ಥರ ಮನವಿ ಅರ್ಜಿಯ ಆಧಾರದಲ್ಲಿ ಶಿಡ್ಲಘಟ್ಟದ ತಹಶೀಲ್ದಾರ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಗುಟ್ಟಾಂಜನೇಯ ದೇವಾಲಯವು ಮುಜರಾಯಿ ಇಲಾಖೆಗೆ ಸೇರಿದ್ದು ಸಿ ದರ್ಜೆಯ ದೇವಾಲಯವಾಗಿದೆ. ನಿತ್ಯವೂ ಪೂಜೆ ಪುನಸ್ಕಾರ ನಡೆಯುತ್ತಿದ್ದು ಇಲ್ಲಿ ಒಂದು ಕಲ್ಯಾಣ ಮಂಟಪವೂ ಇದೆ.
ಸರ್ವೆ ನಂಬರ್ 6 ರಲ್ಲಿನ 1.30 ಎಕರೆ ಜಮೀನು ಭೂ ಮಾಪನ ಇಲಾಖೆಯ ದಾಖಲೆಗಳಲ್ಲಿನ ಮೂಲ ಟಿಪ್ಪಣಿ ಪುಸ್ತಕದಲ್ಲಿರುವಂತೆ ಬೀಳು ಭೂಮಿಯಾಗಿದ್ದು ಗ್ರಾಮಸ್ಥರ ಕೋರಿಕೆಯಂತೆ ಸಾರ್ವಜನಿಕರ ಹಿತದೃಷ್ಟಿಯಿಂದ 1.08 ಎಕರೆ ಜಮೀನಿನಲ್ಲಿ ಗುಟ್ಟಾಂಜನೇಯ ದೇವಾಲಯ ಎಂದು ಪಹಣಿಯಲ್ಲಿ ದಾಖಲಿಸುವಂತೆ ಮನವಿ ಮಾಡಿ ಅಕ್ಟೋಬರ್ 10 ರಂದು ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.