ಪಾತಪಾಳ್ಯ: ಚಿಕ್ಕಬಳ್ಳಾಪುರ ಜಿಲ್ಲೆ ಪ್ರವಾಸಿಗರನ್ನು ಕೈಬೀಸಿ ಕರೆಯುವ ಸುಂದರವಾದ ಆಕರ್ಷಣೆಯ ತಾಣಗಳಾಗಿವೆ. ಜಿಲ್ಲೆಯಲ್ಲಿ ಒಂದಾಗಿರುವ ಬಾಗೇಪಲ್ಲಿ ತಾಲ್ಲೂಕು ಸಹ ಒಂದಲ್ಲ ಒಂದು ರೀತಿಯಲ್ಲಿ ಹೆಸರುವಾಸಿಯಾಗಿದ್ದು, ಎಲ್ಲಿ ನೋಡಿದರೂ ಐತಿಹಾಸಿಕ ಕುರುಹುಗಳು ಪತ್ತೆಯಾಗುತ್ತಿರುತ್ತವೆ.
ಪಾತಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಜ್ಜೇಪಲ್ಲಿ ಗ್ರಾಮದ ಬಳಿಯ ಜಡಮಡುಗು ಅಕ್ಕಮ್ಮನ ಬೆಟ್ಟದಲ್ಲಿ ಪ್ರಾಗೈತಿಹಾಸಿಕ (ಇತಿಹಾಸ ಪೂರ್ವ ಕಾಲದ) ಬೃಹತ್ ಶಿಲಾಯುಗದ ಮಾನವ ನೆಲೆಗಳು ಕಂಡುಬರುತ್ತವೆ. ಈ ಮಹತ್ವದ ಸ್ಥಳವನ್ನು ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಲು ಸುತ್ತಮುತ್ತಲಿನ ಪ್ರದೇಶದ ಹಿರಿಯರು, ಪ್ರವಾಸಿಗರು ಮತ್ತು ಸಂಶೋಧಕರು ಒತ್ತಾಯಿಸುತ್ತಾರೆ.
ಜಡಮಡುಗು ಬೆಟ್ಟದ ಮೇಲ್ಬಾಗದಲ್ಲಿರುವ ಮಾನವ ನೆಲೆಗಳು ಸುಮಾರು ಎಂಟು ಅಡಿ ಉದ್ದ, ಎಂಟು ಅಡಿ ಅಗಲವಿದೆ. ಐದು ಅಡಿ ಎತ್ತರ ಇರುವ ಬಂಡೆಗಳಿಂದ ನಿರ್ಮಿಸಲಾಗಿದೆ. ದೇವ ಮೂಲೆಯಲ್ಲಿ ಕಿಂಡಿ ಮಾಡಲಾಗಿದ್ದು, ಕಿಂಡಿ ಆಕಾರದಷ್ಟೇ ಕಲ್ಲಿನ ಚಪ್ಪಡಿಯಿಂದ ಕಿಂಡಿಯನ್ನು ಮುಚ್ಚಲಾಗಿದೆ. ಆಯುತಾಕಾರ ಈ ಕಲ್ಲಿನ ಪೆಟ್ಟಿಗೆಗಳ ಸೂತ್ತಲೂ ಹೂವಿನ ದಳದ ರೀತಿಯಲ್ಲಿ ಬಂಡೆಗಳನ್ನು ನಿಲ್ಲಿಸಲಾಗಿದೆ. ಹಾಗೆ ನಿಲ್ಲಿಸಲಾದ ಬಂಡೆಗಳಿಗೆ ಕಿಂಡಿ ಕೊರೆಯಲಾಗಿದ್ದು ಸಂಶೋಧನೆಗೆ ಉತ್ತಮ ತಾಣವಾಗಿದೆ.
ಬೆಟ್ಟದ ಮೇಲೆ ಒಂದು ಸರೋವರವಿದ್ದು ಅದನ್ನು ಅಲ್ಲಿನ ಸ್ಥಳೀಯರು ರಾಜನಾಲ ದೊಣೆ ಎಂದು ಕರೆಯುತ್ತಾರೆ. ಬೇಸಿಗೆಯಲ್ಲೂ ರಾಜನಾಲ ಸರೋವರ ಬತ್ತುವುದಿಲ್ಲ ಎನ್ನುತ್ತಾರೆ ಹಿರಿಯರು. ಇದರ ಸುತ್ತಲೂ ಬೆಳೆಯುವ ಬತ್ತದ ಪೈರಿನಿಂದ ಅಕ್ಕಿ ಕಾಳುಗಳು ಅರಿಶಿಣ, ಕುಂಕುಮ ಬಣ್ಣ ಇರುತ್ತದೆ. ಇಂಥ ವಿಶೇಷ ತಳಿಯ ಅಕ್ಕಿಯನ್ನು ಇಲ್ಲಿ ಕಾಣಬಹುದಾಗಿದೆ.
ಇಲ್ಲೇ ಸಮೀಪದಲ್ಲಿ ನೀರಿನ ಚಿಕ್ಕ ಹೊಂಡವಿದ್ದು ಅದರ ಮುಂದೆ ಇರುವ ಎತ್ತರವಾದ ಸ್ಥಳದಲ್ಲಿ ಸಪ್ತ ಮಾತೃಕೆಯರನ್ನು ಇರಿಸಲಾಗಿದೆ. ಜಡಮಡುಗು ಬೆಟ್ಟ ವಿಶಾಲವಾದ ಮೈದಾನ ಹೊಂದಿದ್ದು ಬೆಟ್ಟದ ಮೇಲೆ ಬೀಸುವ ತಣ್ಣನೆಯ ಗಾಳಿ ಮೈ ಮನಸ್ಸಿಗೆ ಮುದ ನೀಡುತ್ತದೆ. ಗಾಳಿಯ ನಡುವೆ ಬೆಟ್ಟ ಹತ್ತುವವರ ಪಾಲಿಗೆ ಒಂದಿಷ್ಟು ಖುಷಿ ಎನಿಸುತ್ತದೆ.
ಮನವಿಗೆ ಸಿಗಲಿಲ್ಲ ಸ್ಪಂದನೆ: ಜಡಮಡುಗು ಅಕ್ಕಮ್ಮ ಬೆಟ್ಟದ ಮಹತ್ವ ಹಾಗೂ ಅಲ್ಲಿ ಕಂಡುಬರುವ ಬೃಹತ್ ಶಿಲಾಯುಗದ ನೆಲೆಗಳ ಅಳತೆ, ಬೆಟ್ಟದ ಮೇಲಿನ ಸರೋವರ, ಪರಿಶೋಧನೆ ಮಾಡಲಾದ ರೀತಿ ಸೇರಿದಂತೆ ಮಹತ್ವಪೂರ್ಣ ಸ್ಥಳ ಸಂರಕ್ಷಣೆ ಮಾಡಬೇಕೆಂದು ಈ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ದ್ ಶ್ರವಣ್ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ಸಂರಕ್ಷಣೆ ಎಲ್ಲರ ಕರ್ತವ್ಯ
ಪುರಾತನ ಕಾಲದ ವಸ್ತುಗಳು ಶಿಲಾ ಶಾಸನ ಹಾಗೂ ಸ್ಥಳಗಳನ್ನು ರಕ್ಷಣೆ ಮಾಡಬೇಕಾಗಿರುವುದು ಸರ್ಕಾರ ಸೇರಿದಂತೆ ಎಲ್ಲರ ಕರ್ತವ್ಯ. ಪುರಾತತ್ವ ಇಲಾಖೆ ಅಧಿಕಾರಿಗಳಿಂದ ಜಡಮಡುಗು ಬೆಟ್ಟದ ಪ್ರದೇಶ ಪರಿಶೀಲನೆ ಮಾಡಿಸಿ ಅಕ್ಕಮ್ಮ ಬೆಟ್ಟವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಲು ಸರ್ಕಾರ ಹಾಗೂ ಪ್ರವಾಸೋದ್ಯಮ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಚಂದ್ರಮೋಹನ್ ಪಾತಪಾಳ್ಯ ನಿವಾಸಿ ಸಂಶೋಧನೆ ನಡೆಯಬೇಕು ಬಾಗೇಪಲ್ಲಿ ತಾಲ್ಲೂಕಿನ ಜಡಮಡುಗು ಅಕ್ಕಮ್ಮನ ಬೆಟ್ಟದಲ್ಲಿರುವ ಮಾನವ ನೆಲೆಯ ಮೇಲೆ ಹೆಚ್ಚಾಗಿ ಸಂಶೋಧನೆ ನಡೆಯಬೇಕು. ನಿಧಿ ಶೋಧಕರ ಹಾವಳಿಯಿಂದ ಮಾನವ ನೆಲೆಗಳನ್ನು ಸಂರಕ್ಷಿಸಿ ಉಳಿಸಿದರೆ ಮತ್ತಷ್ಟು ಸಂಶೋಧನೆ ನಡೆಸಿ ಹೊಸ ವಿಚಾರಗಳನ್ನು ತಿಳಿದುಕೊಳ್ಳಬಹುದು ಬಿ.ಆರ್.ಕೃಷ್ಣ ಸಂಶೋಧಕ ಹಾಗೂ ಪುರಾತತ್ವ ಇಲಾಖೆ ರಾಜ್ಯ ಸದಸ್ಯ ಪುರಾತನ ನೆಲೆ ಉಳಿಸಿ ಜಡಮಡುಗು ಬೆಟ್ಟದ ಮೇಲ್ಭಾಗದಲ್ಲಿ ಕಂಡುಬರುವ ಹಲವು ಪುರಾತನ ನೆಲೆಗಳನ್ನು ಪಾಂಡವರ ಗುಳ್ಳು ಪಾಂಡವರ ಮನೆ ವಾಲಿಯರ ಮನೆ ಮೋರಿಯರ ಮನೆ ಇತ್ಯಾದಿ ಹೆಸರುಗಳಿಂದ ಗ್ರಾಮದ ಹಿರಿಯರು ಕರೆಯುತ್ತಾರೆ. ಬೆಟ್ಟ ಎತ್ತರವಾದ ಸ್ಥಳದಲ್ಲಿರುವುದರಿಂದ ಬಹುತೇಕ ಕಡೆಗಳಲ್ಲಿ ಕರೆಯುವಂತೆ ಈ ಬೆಟ್ಟದ ಮೇಲ್ಭಾಗವನ್ನು ಜೀಗುಟ ಎಂದೂ ಕರೆಯುತ್ತಾರೆ. ಪ್ರಕೃತಿ ದತ್ತವಾದ ಪುರಾತನ ನೆಲೆಗಳನ್ನು ಉಳಿಸಿಕೊಳ್ಳಬೇಕು ಗುಜ್ಜೇಪಲ್ಲಿ ಸುಧಾಕರರೆಡ್ಡಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.