ಚಿಕ್ಕಬಳ್ಳಾಪುರ: ನಗರ ಹೊರವಲಯದ ಚಿತ್ರಾವತಿಯ ಸುಬ್ರಹ್ಮಣೇಶ್ವರ ಸ್ವಾಮಿ ಜಾತ್ರೆ ಮುನ್ನ ಒಂದು ವಾರದ ಕಾಲ ನಡೆಯುವ ದನಗಳ ಸಂತೆ ಮೂಲಸೌಕರ್ಯಗಳಿಲ್ಲದೆ, ಉತ್ತಮ ವ್ಯಾಪಾರವಿಲ್ಲದೆ ವಾರಕ್ಕೂ ಮುನ್ನವೇ ಸೊರಗಿ ಹೋಗಿದೆ.
ಒಂದು ಕಾಲದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಈ ಜಾನುವಾರು ಸಂತೆಗೆ ಸಾವಿರಾರು ಸಂಖ್ಯೆಯಲ್ಲಿ ದನಕರುಗಳನ್ನು ರೈತರು ಮಾರಾಟಕ್ಕೆ ತರುತ್ತಿದ್ದರು. ಆದರೆ ದಿನೇ ದಿನೇ ಮೆರಗು ಕಳೆದುಕೊಂಡ ಸಂತೆಗೆ ಈ ಬಾರಿ ಸುಮಾರು100 ಜೋಡಿಗಳು ಎತ್ತು, ಹೋರಿಗಳು ಮಾತ್ರ ಬಂದಿದ್ದವು.
ಕಳೆದ ವರ್ಷ ಬರ ಮತ್ತು ಕಾಲು ಬಾಯಿ ಜ್ವರ ದನಗಳ ಜಾತ್ರೆ ಮೇಲೆ ಪರಿಣಾಮ ಬೀರಿತ್ತು. ಈ ಬಾರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಸೃಷ್ಟಿಸಿದ ಪ್ರವಾಹದ ಹಾನಿಯ ಬಿಸಿ ತಟ್ಟಿದೆ. ಹೀಗಾಗಿ ಬೇರೆ ಜಿಲ್ಲೆಗಳ ವ್ಯಾಪಾರಸ್ಥರು ಸಹ ಸಂತೆಯತ್ತ ತಲೆ ಹಾಕುತ್ತಿಲ್ಲ. ಈ ಹಿಂದೆ ಜಾತ್ರೆಗೆ ರಾಸುಗಳನ್ನು ಖರೀದಿಸಲು ಅನಂತಪುರ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಂದ ಬರುತ್ತಿದ್ದ ವ್ಯಾಪಾರಸ್ಥರು ಈಗ ಬರುತ್ತಿಲ್ಲ. ಆದ್ದರಿಂದ ವ್ಯಾಪಾರಸ್ಥರೇ ಇಲ್ಲದೆ ಜಾತ್ರೆ ಭಣಗುಡುತ್ತಿದೆ.
ಒಂದೆಡೆ ಖರೀದಿಗೆ ಬಾರದ ರೈತರು, ಇನ್ನೊಂದೆಡೆ ದನಗಳ ಸಂತೆ ಪ್ರದೇಶದಲ್ಲಿ ವರ್ಷದಿಂದ ವರ್ಷಕ್ಕೆ ಕುಡಿಯುವ ನೀರು, ಮೇವಿನಂತಹ ಮೂಲ ಸೌಕರ್ಯಗಳ ಕೊರತೆ ಉಂಟಾಗುತ್ತಿರುವುದು ಸಹ ಜಾತ್ರೆ ಮೆರಗು ಕಳೆದುಕೊಳ್ಳಲು ಕಾರಣ ಎನ್ನುತ್ತಾರೆ ಹಿಂದಿನಿಂದಲೂ ಜಾತ್ರೆ ನೋಡಿಕೊಂಡು ಬಂದ ಅನುಭವಿಗಳು.
ಸಂತೆಗೆ ತರುವ ಒಂದು ಜೋಡಿ ಎತ್ತಿಗೆ ₹50 ತಾಲ್ಲೂಕು ಆಡಳಿತ ಸುಂಕ ವಸೂಲಿ ಮಾಡುತ್ತಿದೆ. ಆದರೆ ರಾಸುಗಳಿಗೆ ಬೇಕಾದ ಕುಡಿಯುವ ನೀರಿನ ಸೌಲಭ್ಯ, ತುರ್ತು ವೈದ್ಯಕೀಯ ಸೇವೆ ಒದಗಿಸಿಲ್ಲ. ಇದು ಅನ್ಯಾಯ ಎನ್ನುವುದು ದನಗಳ ಸಂತೆಗೆ ಬಂದವರ ಅಸಮಾಧಾನ.
ಜಿಲ್ಲೆಯ ನಾನಾ ಭಾಗಗಳಿಂದ ಬರುವ ರಾಸುಗಳಿಗೆ ಸಾಂಕ್ರಾಮಿಕ ರೋಗ ಮತ್ತು ಕಾಲು ಬಾಯಿ ಜ್ವರ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪಶು ವೈದ್ಯಕೀಯ ಇಲಾಖೆ ಅಧಿಕಾರಿಗಳು ಸಂತೆ ಆವರಣದಲ್ಲಿ ಚಿಕಿತ್ಸೆ ನೀಡಲು ಒಬ್ಬ ವೈದ್ಯರನ್ನು ನೇಮಕ ಮಾಡಬೇಕು. ಆ ಕೆಲಸವನ್ನು ಅಧಿಕಾರಿಗಳು ಮರತೇ ಬಿಟ್ಟಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ರೈತರು ಬೇಡವಾದ ಜಾನುವಾರುಗಳನ್ನು ಮಾರಾಟ ಮಾಡಿ ಮುಂದಿನ ಮುಂಗಾರಿನಲ್ಲಿ ತಮಗೆ ಬೇಸಾಯಕ್ಕೆ ಬೇಕಾದ ಉತ್ತಮ ರಾಸುಗಳನ್ನು ಕೊಂಡುಕೊಳ್ಳುವುದು ಇಲ್ಲಿನ ವಾಡಿಕೆ. ಹೀಗಾಗಿ ಸದ್ಯ ರೈತರಿಗೆ ಬೇಡವಾದ ದನಕರುಗಳೆಲ್ಲವೂ ಕಡಿಮೆ ದರದಲ್ಲಿ ಕಸಾಯಿಖಾನೆಯವರ ಪಾಲಾಗುತ್ತಿವೆ.
ಸೊರಗಿದ ವ್ಯಾಪಾರವನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾಸ್ಥರು ಜಾನುವಾರುಗಳನ್ನು ಬಾಯಿಗೆ ಬಂದ ಬೆಲೆಗೆ ಕೇಳುತ್ತಿದ್ದು, ಇದರಿಂದಾಗಿ ಬೆರಳೆಣಿಕೆ ಎತ್ತುಗಳಷ್ಟೇ ಮಾರಾಟವಾಗಿವೆ. ಉಳಿದಂತೆ ನೂರಾರು ರೈತರು ಕೊಳ್ಳುವವರನ್ನು ಎದುರು ನೋಡಿ, ನೋಡಿ ಬೇಸತ್ತು ಸಂತೆಯ ಸಹವಾಸವೇ ಬೇಡ ಎಂದು ವಾಪಾಸಾಗಿದ್ದಾರೆ.
**
ನೀರಿಗಾಗಿ ಪರದಾಡುವ ಸ್ಥಿತಿ
ಮೊದಲಿನಂತೆ ವ್ಯಾಪಾರ ಇಲ್ಲ. ನಾಲ್ಕಾರು ದಿನ ಇದ್ದು ಮಾರಾಟ ಮಾಡಿ ಹೋಗೋಣ ಎಂದರೆ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಇದೆ. ಎರಡು ದಿನ ಟ್ಯಾಂಕರ್ ಮೂಲಕ ನೀರು ಕೊಟ್ಟಂತೆ ಮಾಡಿದರು. ಆ ಮೇಲೆ ನೀರು ಸಿಗಲೇ ಇಲ್ಲ. ಹೀಗಾಗಿ ರೈತರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಐತಿಹಾಸಿಕ ಜಾನುವಾರು ಸಂತೆಯನ್ನು ತಾಲ್ಲೂಕು ಆಡಳಿತ ನಿರ್ಲಕ್ಷಿಸಿದೆ. ಯಾವುದೇ ಮೂಲ ಸೌಕರ್ಯದ ವ್ಯವಸ್ಥೆ ಮಾಡಿಲ್ಲ. ಇದು ಪ್ರತಿ ವರ್ಷ ಮರುಕಳುಹಿಸುತ್ತಿದೆ. ಹೀಗೆ ಮುಂದು ವರಿದರೆ ಕೆಲವೇ ವರ್ಷಗಳಲ್ಲಿ ಸಂತೆ ನಿಂತು ಹೋದರೂ ಅಚ್ಚರಿ ಇಲ್ಲ.
–ಚೆಲುವರಾಜು, ಹೊನ್ನೆನಹಳ್ಳಿ
**
ಕೇಳುವವರೇ ಇಲ್ಲ
ಈ ಬಾರಿ ಸುಮಾರು 100 ಜೋಡಿಗಳು ಸಂತೆಗೆ ಬಂದಿದ್ದವು. ಆದರೆ ದನಗಳನ್ನು ಕೇಳುವವರು ಇಲ್ಲ. ಈ ಸಂತೆಗೆ ಬಳ್ಳಾರಿ, ಹಾವೇರಿ, ಹೆಚ್ಚಿನ ಖರೀದಿದಾರರು ಶಿರಾಳಕೊಪ್ಪದಿಂದ ಬರುತ್ತಿದ್ದರು. ಈ ಬಾರಿ ಆ ಭಾಗಗಳಿಂದ ಒಬ್ಬರೂ ಬಂದಿಲ್ಲ. ನನಗೆ ತಿಳುವಳಿಕೆ ಬಂದಾಗಿನಿಂದ ಈ ಸಂತೆಗೆ ಬರುತ್ತಿದ್ದೇನೆ. ಹಿಂದೆ ಇಲ್ಲಿ ದನಗಳ ಕುಡಿಯವ ನೀರಿಗಾಗಿ ತೊಟ್ಟಿಗಳ ವ್ಯವಸ್ಥೆ ಮಾಡಿದ್ದರು. ಈಗ ತೊಟ್ಟಿಗಳು ಎಲ್ಲಿಯೂ ಕಾಣುತ್ತಿಲ್ಲ. ವರ್ಷದಿಂದ ವರ್ಷಕ್ಕೆ ದನಗಳ ಸಂತೆ ಸೊರಗುತ್ತಿರುವುದು ಬೇಸರ ಮೂಡಿಸುತ್ತಿದೆ.
-ಮುನಿರಾಜು, ಮುದ್ದನಾಯಕನಹಳ್ಳಿ, ದೇವನಹಳ್ಳಿ ತಾಲ್ಲೂಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.