ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಟಿಪ್ಪರ್‌ಗಳ ಹಾವಳಿ ಮಿತಿ ಮೀರಿದೆ. ‘ಟಿಪ್ಪರ್ ಡಿಕ್ಕಿಗೆ ವ್ಯಕ್ತಿ ಸಾವು’, ‘ರೈತ ಸಾವು’, ‘ಟಿಪ್ಪರ್ ಹಾವಳಿ ವಿರೋಧಿಸಿ ಪ್ರತಿಭಟನೆಗೆ ಇಳಿದ ಗ್ರಾಮಸ್ಥರು... ಹೀಗೆ ಟಿಪ್ಪರ್ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಆಗಾಗ್ಗೆ ಅವಘಡಗಳು, ಪ್ರತಿಭಟನೆಗಳು ನಡೆಯುತ್ತಲೇ ಇವೆ.
ಅವಘಡಗಳ ವೇಳೆ ಸ್ಥಳೀಯರು ಟಿಪ್ಪರ್‌ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬೀದಿಗೆ ಇಳಿಯುವರು. ಅವುಗಳ ಓಡಾಟಕ್ಕೆ ತಡೆಯೊಡ್ಡುವರು. ಸ್ಥಳಕ್ಕೆ ಬರುವ ಅಧಿಕಾರಿಗಳು ‘ಸಮಸ್ಯೆ ಸರಿಪಡಿಸುತ್ತೇವೆ’ ಎಂದು ಭರವಸೆ ನೀಡುವರು. ಇದೆಲ್ಲ ತಣ್ಣಗಾದ ಮೇಲೆ ಟಿಪ್ಪರ್‌ಗಳ ಸಂಚಾರ ನಿಯಮಗಳ ಉಲ್ಲಂಘನೆ ಯಥಾ ಪ್ರಕಾರ ನಡೆಯುತ್ತದೆ.
ಟಿಪ್ಪರ್ ಡಿಕ್ಕಿಯಾಗಿ ಮತ್ತೊಂದು ಸಾವು ಸಂಭವಿಸುವವರೆಗೂ ಅಧಿಕಾರಿಗಳು ನಿದ್ದೆಗೆ ಜಾರುವರು. ಮತ್ತೆ ಅವಘಡ ನಡೆದಾಗ ಎಚ್ಚೆತ್ತು ‘ನಿಯಮ ಉಲ್ಲಂಘಿಸಿದರೆ ಕ್ರಮಕೈಗೊಳ್ಳುತ್ತೇವೆ’ ಎಂದು ಚರ್ವಿತ ಚರ್ವಣದ ಮಾತು ಪುನರಾವರ್ತಿಸುವರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 79 ಕ್ರಷರ್‌ಗಳು ಮತ್ತು 136 ಕಟ್ಟಡಕಲ್ಲು ಗಣಿಗಾರಿಕೆಗಳು ನಡೆಯುತ್ತಿವೆ. ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಎಂ.ಸ್ಯಾಂಡ್, ಜಲ್ಲಿಕಲ್ಲು, ಕಟ್ಟಡ ನಿರ್ಮಾಣದ ಕಲ್ಲುಗಳು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಕಚ್ಚಾ ಸಾಮಗ್ರಿಗಳು ಪೂರೈಕೆ ಆಗುತ್ತಿವೆ.
ಹೀಗೆ ಜಿಲ್ಲೆಯಿಂದ ಎಂ.ಸ್ಯಾಂಡ್, ಜಲ್ಲಿಕಲ್ಲು ಹೊರ ಜಿಲ್ಲೆಗಳಿಗೆ ಪ್ರಮುಖವಾಗಿ ರವಾನೆ ಆಗುತ್ತಿದೆ. ಈ ವೇಳೆ ಟಿಪ್ಪರ್‌ಗಳಿಗೆ ಇಂತಿಷ್ಟು ಟನ್ ಎಂ.ಸ್ಯಾಂಡ್, ಜಲ್ಲಿಯನ್ನು ಕೊಂಡೊಯ್ಯಬೇಕು. ಆದರೆ ಈ ನಿಯಮಗಳು ನೆಪ ಮಾತ್ರ ಎನ್ನುವಂತಿದೆ.
ಜಿಲ್ಲೆಯಲ್ಲಿ ಟಿಪ್ಪರ್‌ಗಳಿಂದ ನಡೆದ ಅಪಘಾತಗಳು ಟಿಪ್ಪರ್‌ಗಳ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಸಾರಿ ಹೇಳುತ್ತಿವೆ.
ನ.13ರಂದು ಚಿಕ್ಕಬಳ್ಳಾಪುರ ನಗರದ ಹೊರ ವಲಯದ ಚದುಲಪುರ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಟಿಪ್ಪರ್ ಡಿಕ್ಕಿಯಾಗಿ ರೈತ ಕುಪ್ಪಳ್ಳಿ ಕೃಷ್ಣಪ್ಪ ಸಾವು. ನ.9ರಂದು ಗೌರಿಬಿದನೂರು ಕಡೆಯಿಂದ ಗುಡಿಬಂಡೆಗೆ ಹೋಗುತ್ತಿದ್ದ ಟಿಪ್ಪರ್ ವಾಹನವು, ಲಕ್ಷ್ಮಿಪುರ ಕ್ರಾಸ್ ಬಳಿ ಆಟೊಗೆ ಡಿಕ್ಕಿಯಾಗಿ ಮಂಡಿಕಲ್ ನಿವಾಸಿ ಶ್ರೀನಿವಾಸ (45) ಸಾವು. ಲಕ್ಷ್ಮಿಪತಿಗೆ ಗಾಯ.
ಸೆ.5ರಂದು ಚಿಂತಾಮಣಿಯಲ್ಲಿ ಟಿಪ್ಪರ್ ಹೋಟೆಲ್‌ಗೆ ನುಗ್ಗಿ ಮಾಡಿಕೆರೆ ಗ್ರಾಮದ ಶಿವಾನಂದ್ (58) ಹಾಗೂ ಕೋಲಾರ ತಾಲ್ಲೂಕಿನ ವೆಲಗಲಬುರ್ರೆ ಗ್ರಾಮದ ಕುಮಾರ್ (50) ಸಾವು.
ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದ ಬಳಿ ಕೆಎಸ್‌ಆರ್‌ಟಿಸಿ ಬಸ್‌ಗೆ ಟಿಪ್ಪರ್ ಡಿಕ್ಕಿ. ಬಾಗೇಪಲ್ಲಿಯ ಗೂಳೂರು ರಸ್ತೆ ಬದಿ ನಡೆದು ಹೋಗುತ್ತಿದ್ದ ಜೂಲಪಾಳ್ಯ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗೋಪಾಲಪ್ಪ ಮೇಲೆ ಟಿಪ್ಪರ್ ಹರಿದು ಅವರ ಸಾವು. ಟಿಪ್ಪರ್ ಮತ್ತು ದ್ವಿಚಕ್ರ ವಾಹನದ ನಡುವೆ ಅಪಘಾತ ನಡೆದು ಗುಡಿಬಂಡೆಯ ಕಮ್ಮಗುಟ್ಟಹಳ್ಳಿ ಗ್ರಾಮದ ರಾಜೇಶ್ ಸಾವು.
ಇವು ಜಿಲ್ಲೆಯಲ್ಲಿ ಈ ವರ್ಷ ನಡೆದ ಟಿಪ್ಪರ್ ಸಂಬಂಧಿತ ಕೆಲವು ಪ್ರಮುಖ ಅವಘಡಗಳು.
ಜಲ್ಲಿ, ಎಂ.ಸ್ಯಾಂಡ್ ಹೊತ್ತ ಟಿಪ್ಪರ್‌ಗಳು, ಸಿಮೆಂಟ್ ಮತ್ತು ಕಲ್ಲು ದಿಮ್ಮೆಯ ಲಾರಿಗಳ ಓಡಾಟದಿಂದ ಗ್ರಾಮದ ರಸ್ತೆ ಪೂರ್ಣವಾಗಿ ಹಾಳಾಗಿದೆ. ಅಧಿಕ ಭಾರ ಹೊತ್ತು ಸಾಗುವ ಲಾರಿಗಳ ವಿರುದ್ಧ ಅಧಿಕಾರಿಗಳು ಸಹ ಕ್ರಮವಹಿಸುತ್ತಿಲ್ಲ ಎಂದು ಜಡಲ ತಿಮ್ಮನಹಳ್ಳಿ ಗ್ರಾಮಸ್ಥರು ಆಗಾಗ್ಗೆ ಪ್ರತಿಭಟನೆಗಳನ್ನು ಸಹ ನಡೆಸಿದ್ದಾರೆ.
ಸಂಚಾರ ನಿಯಮಗಳ ಪಾಲನೆ ವಿಚಾರವಾಗಿ ಪೊಲೀಸರು ಈ ಹಿಂದೆ ಟಿಪ್ಪರ್‌ಗಳ ಮಾಲೀಕರು, ಚಾಲಕರ ಜೊತೆ ಸಭೆಗಳನ್ನು ಸಹ ನಡೆಸಿದ್ದರು. ಆದರೆ ಟಿಪ್ಪರ್‌ಗಳಿಂದ ನಡೆದ ಅವಘಡಗಳು ನಿಯಮಗಳು ಪಾಲನೆ ಆಗುತ್ತಿಲ್ಲ ಎನ್ನುವುದನ್ನು ಸಾರುತ್ತಿವೆ.
ಅಧಿಕ ಭಾರ; ವಾಹನಗಳ ಮೇಲೆ ಕ್ರಮ
ಅಧಿಕ ಭಾರ ಸಾಗಿಸುವ ರವಾನೆದಾರ ಮತ್ತು ಪರವಾನಿಗೆದಾರರ ಸರಕು ಸಾಗಣೆ ವಾಹನಗಳ ಮೇಲೆ ಮೋಟಾರು ವಾಹನಗಳ ಕಾಯ್ದೆ 194ರ ಪ್ರಕಾರ ಕಟ್ಟುನಿಟ್ಟಿನ ಕ್ರಮವಹಿಸಲಾಗುತ್ತದೆ.– ಎ.ವಿವೇಕಾನಂದ, ಪ್ರಾದೇಶಿಕ ಸಾರಿಗೆ ಅಧಿಕಾರಿ ಚಿಕ್ಕಬಳ್ಳಾಪುರ
‘ಕಣ್ಗಾವಲು ಇಲ್ಲ’
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗಣಿಗಾರಿಕೆ ಹೆಚ್ಚಿದೆ. ಈ ಅಂಗವಾಗಿ ಟಿಪ್ಪರ್‌ಗಳು ಸಹ ಹೆಚ್ಚಿವೆ. ಆದರೆ ಅವುಗಳು ಯಾವ ಮಟ್ಟಿಗೆ ಸಂಚಾರ ನಿಯಮ ಪಾಲಿಸುತ್ತಿವೆ ಎನ್ನುವ ಬಗ್ಗೆ ಕಣ್ಣಿಡಬೇಕಾದುದು ಅಧಿಕಾರಿಗಳು ಮತ್ತು ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿ. ಆದರೆ ಆ ಕೆಲಸ ಜಿಲ್ಲೆಯಲ್ಲಿ ಆಗುತ್ತಿಲ್ಲ ಎಂದು ಜಿಲ್ಲಾ ರೇಷ್ಮೆ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ಆರೋಪಿಸುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.