ADVERTISEMENT

ಸಾದಲಿ: ಸಾಂಕ್ರಾಮಿಕ ರೋಗದ ಭೀತಿ

ಚರಂಡಿ ಸ್ವಚ್ಛತೆಗೆ ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 4:56 IST
Last Updated 11 ಏಪ್ರಿಲ್ 2021, 4:56 IST
ಚರಂಡಿಯಲ್ಲಿ ನಿಂತಿರುವ ಕಲ್ಮಷ ನೀರು
ಚರಂಡಿಯಲ್ಲಿ ನಿಂತಿರುವ ಕಲ್ಮಷ ನೀರು   

ಸಾದಲಿ: ಗ್ರಾಮದಲ್ಲಿ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದ ಕಲುಷಿತ ವಾತಾವರಣ ಸೃಷ್ಟಿಯಾಗಿದೆ. ತ್ಯಾಜ್ಯ ನೀರು ಹರಿದು ಹೋಗದೆ ಮಡುಗಟ್ಟಿ ನಿಂತಿದ್ದು ಸಾಂಕ್ರಾಮಿಕ ರೋಗದ ಭೀತಿ ತಲೆದೋರಿದೆ. ಆದರೆ, ಸ್ಥಳೀಯ ಆಡಳಿತ ಮಾತ್ರ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ.

ಮೂಲಸೌಕರ್ಯದ ಕೊರತೆಯಿಂದ ನರಳುತ್ತಿರುವ ಊರಿನಲ್ಲಿ ಇದೀಗ ಸ್ವಚ್ಛತೆ ಮರೀಚಿಕೆಯಾಗಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಲ್ಮಷ ತುಂಬಿಕೊಂಡಿರುವ ಚರಂಡಿಗಳು ದಿನೇ ದಿನೇ ಸೃಷ್ಟಿಸುತ್ತಿರುವ ಸಮಸ್ಯೆಗಳಿಂದಾಗಿ ಜನರು ರೋಸಿ ಹೋಗಿದ್ದಾರೆ.

ಬೆಳಕು ಹರಿದರೆ ದುರ್ವಾಸನೆಗೆ ಮೂಗು ಸಿಂಡರಿಸುವ ಈ ಊರಿನ ಜನರಿಗೆ ಸಂಜೆಯಾದರೆ ಸೊಳ್ಳೆ ಕಾಟ ಹೇಳತೀರದು. ಊರಿನಲ್ಲಿ ಜನರು ಮೂಗು ಮುಚ್ಚಿಕೊಂಡು ವ್ಯವಹರಿಸಬೇಕಾದ ಪರಿಸ್ಥಿತಿ ತಲೆದೋರಿದೆ. ಇಷ್ಟಾದರೂ ಯಾವೊಬ್ಬ ಗ್ರಾಮ ಪಂಚಾಯಿತಿ ಅಧಿಕಾರಿಯೂ ಈ ಬಗ್ಗೆ ಕಾಳಜಿವಹಿಸುತ್ತಿಲ್ಲ ಎನ್ನುವುದು ಗ್ರಾಮಸ್ಥರು ಆಕ್ರೋಶ.

ADVERTISEMENT

ಕೆಲವೆಡೆಯಂತೂ ಚರಂಡಿಗಳೇ ಇಲ್ಲದೆ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿದು ಪಾಚಿಗಟ್ಟಿದೆ. ಜನರು ಈ ಗಲೀಜು ನೀರಿನಲ್ಲಿಯೇ ನಡೆದಾಡಬೇಕಾಗಿದೆ. ರಾತ್ರಿ ವೇಳೆ ಕಾಲು ಜಾರಿ ಬಿದ್ದವರ ಸಂಖ್ಯೆಗೇನು ಕಡಿಮೆ ಇಲ್ಲ.

‘ಕಲ್ಮಷ ನೀರು ತುಂಬಿದ ಕಸದ ಗುಂಡಿ ಇರುವುದರಿಂದ ಚಿಕ್ಕಮಕ್ಕಳನ್ನು ಮನೆ ಹೊರಗೆ ಬಿಡಲು ಭಯವಾಗುತ್ತದೆ. ಕಟ್ಟಿಕೊಂಡ ಕಸದ ಗುಂಡಿಯಿಂದಾಗಿ ಕ್ರಿಮಿಕೀಟಗಳು ಹೆಚ್ಚುತ್ತಿವೆ. ಗಬ್ಬುವಾಸನೆಗೆ ಹೊಟ್ಟೆ ತೊಳೆಸಿದಂತಾಗುತ್ತಿದೆ. ಜನರಿಗೆ ಆಸ್ಪತ್ರೆಗೆ ಅಲೆದಾಡುವುದೇ ಕೆಲಸವಾಗಿದೆ’ ಎಂದು ಸ್ಥಳೀಯ ನಿವಾಸಿ ಎಸ್.ಎಂ. ನಾರಾಯಣಪ್ಪ ಬೇಸರ ತೋಡಿಕೊಂಡರು.

ಈ ಬಗ್ಗೆ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಅನೇಕ ಬಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಊರಲ್ಲಿ ಎಲ್ಲಿ ನೋಡಿದರೂ ಕಸದ ರಾಶಿಗಳು, ತುಂಬಿದ ಚರಂಡಿಗಳನ್ನು ನೋಡುವಂತಾಗಿದೆ. ಗ್ರಾಮ ಪಂಚಾಯಿತಿ ಆಡಳಿತದ ಜಾಣಕುರುಡು ಪ್ರದರ್ಶನದಿಂದಾಗಿ ಜನರು ತೊಂದರೆ ಅನುಭವಿಸಬೇಕಾಗಿದೆ.

‘ಊರಿನ ಹದಗೆಟ್ಟ ಸ್ಥಿತಿ ತೋರಿಸಿದರೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಹೊಣೆಗಾರಿಕೆ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಅಧಿಕಾರಿಗಳು ಕೂಡ ಉದ್ಧಟತನದಿಂದ ವರ್ತಿಸುತ್ತಿದ್ದಾರೆ. ಊರಿನಲ್ಲಿ ರೋಗ ಉಲ್ಬಣಿಸಿ ಸಾವು ಸಂಭವಿಸಿದರೆ ಅದಕ್ಕೆ ಯಾರು ಹೊಣೆ, ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ನಾವು ಹೋರಾಟದ ಹಾದಿ ತುಳಿಯುವುದು ಅನಿವಾರ್ಯ’ ಎಂಬುದು ಸ್ಥಳೀಯ ನಿವಾಸಿ ಮುನಿಯಪ್ಪ ಅವರ ಎಚ್ಚರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.