ಚಿಕ್ಕಬಳ್ಳಾಪುರ: ‘ಸಿದ್ದರಾಮಯ್ಯ ಮತ್ತು ಕೆ.ಆರ್.ರಮೇಶ್‌ಕುಮಾರ್ ಅವರ ಕುರಿತ ಕೆಲ ಸತ್ಯಗಳನ್ನು ಈಗಲೇ ಹೇಳಲು ಉಪ ಚುನಾವಣೆ ಕಾರಣಕ್ಕೆ ಕಷ್ಟವಾಗುತ್ತಿದೆ. ಉಪ ಚುನಾವಣೆ ಫಲಿತಾಂಶದ ಬಳಿಕ ಅವರ ಕುರಿತ ಸತ್ಯಗಳನ್ನು ಜನರ ಮುಂದಿಡುತ್ತೇನೆ’ ಎಂದು ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಯಕರಾದವರು ಹಿರಿತನ, ಅನುಭವಕ್ಕೆ ತಕ್ಕಂತೆ ಮಾತನಾಡಬೇಕು. ಆಧಾರ ರಹಿತವಾಗಿ ವೈಯಕ್ತಿಕ ನಿಂದನೆ, ಅಪಪ್ರಚಾರ ಮಾಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಈ ಹಿಂದಿನ ಚುನಾವಣೆಗಳಲ್ಲಿ ಸಿದ್ದರಾಮಯ್ಯ ಅವರು ನನಗೆ ಕಾಂಗ್ರೆಸ್ ಟಿಕೆಟ್ ಕೊಡಲಿಲ್ಲ ನನ್ನ ರಾಜಕೀಯ ಗುರು ಎಸ್.ಎಂ. ಕೃಷ್ಣ ಅವರು ನನಗೆ ಟಿಕೆಟ್ ಕೊಡಿಸಿದ್ದರು. ಈ ವಿಚಾರದಲ್ಲಿ ಡಾ.ಜಿ.ಪರಮೇಶ್ವರ್ ಅವರ ಪಾತ್ರವೂ ಇದೆ’ ಎಂದು ತಿಳಿಸಿದರು.
‘ರಮೇಶ್ ಕುಮಾರ್ ಅವರು ಹಿಂದೆ ಯಾವುದೋ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಅವರು ನಟನೆಯನ್ನೇ ಮುಂದುವರಿಸಿಕೊಂಡು ಹೋಗಲಿ. ಇವತ್ತು ಕಾಂಗ್ರೆಸ್ ನಾಯಕರು ಹಾಸ್ಯ ನಟರಂತೆ ಮಾತನಾಡುತ್ತಿದ್ದಾರೆ. ಉಪ ಚುನಾವಣೆ ಬಳಿಕ ಅವರಿಗೆ ಏನೂ ಕೆಲಸ ಇರುವುದಿಲ್ಲ. ಹಾಗಾಗಿ ಅವರು ನಟನೆಯನ್ನೇ ಮಾಡಿಕೊಂಡಿರಲಿ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.