ADVERTISEMENT

ಬಾಗೇಪಲ್ಲಿ: ಸಕಾಲದಲ್ಲಿ ಚಿಕಿತ್ಸೆ ದೊರೆಯದ ಮಹಿಳೆ ಸಾವು

ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಕೊರತೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 5:27 IST
Last Updated 25 ಫೆಬ್ರುವರಿ 2023, 5:27 IST
ಚಿಕಿತ್ಸೆ ದೊರೆಯದೆ ಬಾಗೇಪಲ್ಲಿ  ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ  ಮಂಗಮ್ಮ 
ಚಿಕಿತ್ಸೆ ದೊರೆಯದೆ ಬಾಗೇಪಲ್ಲಿ  ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೃತಪಟ್ಟ  ಮಂಗಮ್ಮ    

ಬಾಗೇಪಲ್ಲಿ: ತಾಲ್ಲೂಕಿನ ಬಿಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಶುಕ್ರವಾರ ಮಂಗಮ್ಮ (35) ಮೃತಪಟ್ಟಿದ್ದಾರೆ. ಬಿಳ್ಳೂರು ಗ್ರಾಮದ ಹೊರವಲಯದ ಗುಡಿಸಲಿನಲ್ಲಿ ಅವರು ವಾಸವಾಗಿದ್ದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತವರು ಜಿಲ್ಲೆ ಎನಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗಡಿಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದಿಗೂ ಸಮರ್ಪಕವಾಗಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲ.

ಮಂಗಮ್ಮ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶುಕ್ರವಾರ ಜ್ವರ ಹೆಚ್ಚಿದ ಕಾರಣ ಬೆಳಿಗ್ಗೆ 10ಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಕರು ಕರೆ ತಂದಿದ್ದಾರೆ. ಆದರೆ ಸಕಾಲದಲ್ಲಿ ವೈದ್ಯರು ಮತ್ತು ಸಿಬ್ಬಂದಿ ಚಿಕಿತ್ಸೆ ನೀಡಿಲ್ಲ.

ADVERTISEMENT

ಹೆಚ್ಚಿನ ಚಿಕಿತ್ಸೆಗೆ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ಸಿಬ್ಬಂದಿ ತಿಳಿಸಿದ್ದಾರೆ. ಆಸ್ಪತ್ರೆಗೆ ಕೊಂಡೊಯ್ಯಲು ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್‌ ಸಹ ಇಲ್ಲ. ಆಂಬುಲೆನ್ಸ್‌ಗಾಗಿ ಬಾಗೇಪಲ್ಲಿ ತಾಲ್ಲೂಕು ಆಸ್ಪತ್ರೆಗೆ ಕರೆ ಮಾಡಿದರೆ 2 ಗಂಟೆ ತಡ ಆಗುತ್ತದೆ ಎಂದು ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮಂಗಮ್ಮ ಅವರ ಸಂಬಂಧಿಕರು ಮತ್ತು ನೆರೆಹೊರೆಯವರು ದೂರಿದ್ದಾರೆ.

‘ಬಿಳ್ಳೂರು ಆರೋಗ್ಯ ಕೇಂದ್ರದಲ್ಲಿ ಸಮರ್ಪಕವಾಗಿ ವೈದ್ಯರು, ಸಿಬ್ಬಂದಿ ಇಲ್ಲ. ರೋಗಿಗಳು ಗಂಟೆಗಟ್ಟಲೇ ಕಾಯಬೇಕು. ತುರ್ತು ಚಿಕಿತ್ಸೆ ಪಡೆಯಲು ಬಂದ ರೋಗಿಗಳು ಪರದಾಡುವರು. ಬಾಗೇಪಲ್ಲಿ ಹಾಗೂ ಚಿಂತಾಮಣಿ ತಾಲ್ಲೂಕು ಕೇಂದ್ರ ಗ್ರಾಮದಿಂದ 40 ಕಿ.ಮೀ ದೂರದಲ್ಲಿವೆ’ ಎಂದು ಬಿಳ್ಳೂರು ಗ್ರಾಮದ ಅನಿಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ತುರ್ತು ಚಿಕಿತ್ಸೆ ಅಗತ್ಯವಿದ್ದವರು, ಬಾಣಂತಿಯರು, ಗರ್ಭಿಣಿಯರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಾಧ್ಯವಾಗುತ್ತಿಲ್ಲ. ಮಂಗಮ್ಮನಿಗೆ ಸಕಾಲದಲ್ಲಿ ಚಿಕಿತ್ಸೆ ನೀಡದಿರುವುದರಿಂದ ಹಾಗೂ ಆಂಬುಲೆನ್ಸ್ ಬಾರದ ಕಾರಣ ಮೃತಪಟ್ಟಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.