ADVERTISEMENT

ಚಿಕ್ಕಬಳ್ಳಾಪುರ: ಹೆಚ್ಚಿದ ಬೈಕ್ ಕಳ್ಳತನ; ಎರಡೂಕಾಲು ವರ್ಷದಲ್ಲಿ 466 ಪ್ರಕರಣ

ಪ್ರಸಕ್ತ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ತೀವ್ರವಾಗಿ ಹೆಚ್ಚಿದ ಬೈಕ್ ಕಳ್ಳತನ

ಡಿ.ಎಂ.ಕುರ್ಕೆ ಪ್ರಶಾಂತ
Published 20 ಅಕ್ಟೋಬರ್ 2024, 7:31 IST
Last Updated 20 ಅಕ್ಟೋಬರ್ 2024, 7:31 IST
ಕುಶಾಲ್ ಚೌಕ್ಸೆ
ಕುಶಾಲ್ ಚೌಕ್ಸೆ   

ಚಿಕ್ಕಬಳ್ಳಾಪುರ: ಜಿಲ್ಲೆಯ ಒಂದಲ್ಲಾ ಒಂದು ಪೊಲೀಸ್ ಠಾಣೆಯಲ್ಲಿ ವಾರಕ್ಕೆ ಒಂದಾದರೂ ಬೈಕ್ ಕಳ್ಳತನದ ಪ್ರಕರಣಗಳು ವರದಿ ಆಗುತ್ತಿವೆ. ಇತ್ತೀಚೆಗೆ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. 

ಒಂದೆಡೆ ಪೊಲೀಸರು ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುತ್ತಲೇ ಇದ್ದಾರೆ. ಆದರೆ ದ್ವಿಚಕ್ರ ವಾಹನಗಳ ಕಳ್ಳತನ ಮಾತ್ರ ಪೂರ್ಣವಾಗಿ ನಿಂತಿಲ್ಲ. ಈ ಪ್ರಕರಣಗಳಲ್ಲಿ ಬಂಧಿಸಿರುವ ಆರೋಪಿಗಳಲ್ಲಿ ಬಹುಪಾಲು ಮಂದಿ ಆಂಧ್ರಪ್ರದೇಶದವರೇ ಆಗಿದ್ದಾರೆ. 

ಜಿಲ್ಲೆಯಲ್ಲಿ ಕಳೆದ ಎರಡೂಕಾಲು ವರ್ಷದಲ್ಲಿ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಬರೋಬರಿ 466 ಪ್ರಕರಣಗಳು ದಾಖಲಾಗಿವೆ. 2022ರಲ್ಲಿ 182, 2023ರಲ್ಲಿ 155 ಮತ್ತು 2024ರ ಏಪ್ರಿಲ್ 17ರವರೆಗೆ 129 ಪ್ರಕರಣಗಳು ದಾಖಲಾಗಿವೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ 2024ರಲ್ಲಿ ಜಿಲ್ಲೆಯಲ್ಲಿ ಅತಿ ಹೆಚ್ಚು ಬೈಕ್ ಕಳ್ಳತನ ಪ್ರಕರಣಗಳು ವರದಿ ಆಗಿವೆ. 

ADVERTISEMENT

2022ರಲ್ಲಿ 155 ಪ್ರಕರಣಗಳು ದಾಖಲಾಗಿದ್ದರೆ ಆ ಪೈಕಿ 22 ಪ್ರಕರಣಗಳಲ್ಲಿ ವಾಹನಗಳನ್ನು ಪತ್ತೆ ಹಚ್ಚಲಾಗಿದೆ. 132 ಪ್ರಕರಣಗಳಲ್ಲಿ ಇಲ್ಲಿಯವರೆಗೂ ಬೈಕ್ ಗುರುತು ಪತ್ತೆ ಆಗಿಲ್ಲ. 26 ಪ್ರಕರಣಗಳು ವಿಚಾರಣೆ ಹಂತದಲ್ಲಿ ಇದ್ದರೆ 24 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಹೀಗೆ ಈ ವರ್ಷ ದೊಡ್ಡ ಸಂಖ್ಯೆಯಲ್ಲಿಯೇ ಕಳ್ಳತನವಾಗಿರುವ ಬೈಕ್‌ಗಳ ಗುರುತು ಪತ್ತೆಯಾಗಿಲ್ಲ.

2023ರಲ್ಲಿ 182 ಪ್ರಕರಣಗಳು ದಾಖಲಾಗಿದ್ದರೆ ಆ ಪೈಕಿ 22 ಪ್ರಕರಣಗಳಲ್ಲಿ ವಾಹನಗಳನ್ನು ಪತ್ತೆ ಹಚ್ಚಲಾಗಿದೆ. 130 ಪ್ರಕರಣಗಳಲ್ಲಿ ಇಲ್ಲಿಯವರೆಗೂ ಬೈಕ್ ಗುರುತು ಪತ್ತೆ ಆಗಿಲ್ಲ. 15 ಪ್ರಕರಣಗಳು ವಿಚಾರಣೆಯ ಹಂತದಲ್ಲಿ ಇದ್ದರೆ 7 ಪ್ರಕರಣಗಳನ್ನು ಮುಕ್ತಾಯಗೊಳಿಸಲಾಗಿದೆ. ಎರಡು ಪ್ರಕರಣಗಳನ್ನು ಹೊರ ಜಿಲ್ಲೆಗೆ ವರ್ಗಾವಣೆ ಆಗಿವೆ. ಒಂದು ಪ್ರಕರಣ ತನಿಖೆಯ ಹಂತದಲ್ಲಿದೆ.  

2024ರ ಏ.17ರವರೆಗೆ ಜಿಲ್ಲೆಯಲ್ಲಿ ಬೈಕ್ ಕಳ್ಳತಕ್ಕೆ ಸಂಬಂಧಿಸಿದಂತೆ 129 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 16 ಪ್ರಕರಣಗಳಲ್ಲಿ ವಾಹನಗಳನ್ನು ಪತ್ತೆ ಹಚ್ಚಲಾಗಿದೆ. 43 ಪ್ರಕರಣಗಳಲ್ಲಿ ಇಲ್ಲಿಯವರೆಗೂ ಬೈಕ್ ಗುರುತು ಪತ್ತೆ ಆಗಿಲ್ಲ. 74 ಪ್ರಕರಣಗಳ ತನಿಖೆ ಪ್ರಗತಿಯಲ್ಲಿದ್ದರೆ, 9 ಪ್ರಕರಣಗಳ ವಿಚಾರಣೆ ಬಾಕಿ ಇದೆ. 1 ಪ್ರಕರಣ ಮುಕ್ತಾಯಗೊಳಿಸಲಾಗಿದೆ. ಎರಡು ಪ್ರಕರಣಗಳನ್ನು ಹೊರ ಜಿಲ್ಲೆಗೆ ವರ್ಗಾವಣೆ ಆಗಿವೆ. 

ಪ್ರಸಕ್ತ ವರ್ಷ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಗರಿಷ್ಠ ಪ್ರಕರಣಗಳು ದಾಖಲಾಗಿವೆ. ಕೆಲವು ಸಮಯ ವಾರದಲ್ಲಿ ನಾಲ್ಕೈದು ಬೈಕ್ ಕಳ್ಳತನದ ಪ್ರಕರಣಗಳೂ ದಾಖಲಾಗಿವೆ. 

ಪ್ರಕರಣಗಳನ್ನು ಗಮನಿಸಿದರೆ ರಸ್ತೆ ಬದಿ, ಮನೆಗಳ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸುತ್ತಿದ್ದಾರೆ.  ಪ್ರಮುಖವಾಗಿ ನಗರ ಪ್ರದೇಶದಲ್ಲಿಯೇ ಬೈಕ್ ಕಳ್ಳತನಗಳು ಹೆಚ್ಚುತ್ತಿವೆ. 

ಕಾರ್ಯನಿಮಿತ್ತ ಹೊರಹೋಗಬೇಕಾದ ಸಂದರ್ಭದಲ್ಲಿ ಹಳ್ಳಿಗಳ ಜನರು ನಗರಕ್ಕೆ ಬೈಕ್‌ಗಳಲ್ಲಿ ಬಂದ ರಸ್ತೆ ಬದಿ ಅಥವಾ ಯಾವುದಾದರೂ ಕಚೇರಿ ಆವರಣದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದರು. ಆದರೆ ಕಳ್ಳತನದಿಂದ ಬೈಕ್‌ಗಳನ್ನು ನಿಲ್ಲಿಸಿ ತೆರಳಲು ಆತಂಕಗೊಂಡಿದ್ದಾರೆ. ರಾತ್ರಿ ಮನೆಗಳ ಹೊರಭಾಗದಲ್ಲಿ ಬೈಕ್‌ಗಳನ್ನು ನಿಲ್ಲಿಸುತ್ತಿದ್ದವರು ಸಹ ಪ್ರಕರಣಗಳಿಂದ ಮನೆಯ ಒಳಗೆ ಬೈಕ್‌ಗಳನ್ನು ನಿಲ್ಲಿಸುವಂತಾಗಿದೆ. 

ನೆರೆಯ ಆಂಧ್ರಪ್ರದೇಶ ಹಾಗೂ ಹೊರ ಜಿಲ್ಲೆಗಳ ಬೈಕ್ ಕಳ್ಳರ ತಂಡಗಳು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳ್ಳತನ ನಡೆಸುತ್ತಿವೆ ಎನ್ನುವ ಅನುಮಾನ ಪೊಲೀಸರು ಮತ್ತು ನಾಗರಿಕರಲ್ಲಿ ಇತ್ತು. ಅದಕ್ಕೆ ಪುಷ್ಠಿ ಎನ್ನುವಂತೆ ಗೌರಿಬಿದನೂರು, ಬಾಗೇಪಲ್ಲಿ ಮತ್ತು ಚಿಕ್ಕಬಳ್ಳಾಪುರ, ಚಿಂತಾಮಣಿಯಲ್ಲಿ ಆಂಧ್ರಪ್ರದೇಶದ ಬೈಕ್ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

ಬೈಕ್‌ಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುತ್ತಿದೆ. ಬೈಕ್ ಕಳ್ಳತನ ಪ್ರಕರಣಗಳ ಪತ್ತೆಗೆ ವಿಶೇಷ ತಂಡಗಳನ್ನೇ ರಚಿಸಲಾಗಿದೆ.

ಬಂಧಿತರಲ್ಲಿ ಆಂಧ್ರದವರೇ ಹೆಚ್ಚು

ಜಿಲ್ಲೆಯ ವಿವಿಧ ಕಡೆಗಳಲ್ಲಿ ಪೊಲೀಸರು ಸಹ ಬಿರುಸಿನ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳರ ಹೆಡೆಮುರಿ ಕಟ್ಟುತ್ತಿದ್ದಾರೆ. ಹೀಗೆ ಬೈಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಬಂಧನವಾಗಿರುವವರಲ್ಲಿ ನೆರೆಯ ಆಂಧ್ರಪ್ರದೇಶದ ಕಳ್ಳರೇ ಹೆಚ್ಚಿದ್ದಾರೆ. ಇತ್ತೀಚೆಗೆ ಚಿಂತಾಮಣಿ ಗ್ರಾಮಾಂತರ ಪೊಲೀಸರು ಆಂಧ್ರದ ಬೈಕ್ ಕಳ್ಳನನ್ನು ಬಂಧಿಸಿ 8 ಲಕ್ಷ ಮೌಲ್ಯದ ಬೈಕ್ ವಶಕ್ಕೆ ಪಡೆದಿದ್ದರು. ಜಿಲ್ಲೆಯಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿ ಅವುಗಳನ್ನು ಕಳ್ಳರು ಆಂಧ್ರಕ್ಕೆ ಸಾಗಿಸುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.