ಚಿಂತಾಮಣಿ: ಎಟಿಎಂ ಕೇಂದ್ರಗಳ ಬಳಿ ಸುತ್ತಾಡುತ್ತಾ ಹಣ ವಿತ್ ಡ್ರಾ ಮಾಡಲು ಬರುತ್ತಿದ್ದ ವಯಸ್ಸಾದ ವೃದ್ಧರು ಮತ್ತು ಹಣ ತೆಗೆಯಲು ತಿಳಿಯದವರನ್ನು ಗುರಿಯಾಗಿಸಿಕೊಂಡು ಎಟಿಎಂ ಕಾರ್ಡ್ ಕದ್ದು, ಹಣ ವಂಚನೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಟ್ಲಹಳ್ಳಿ ಸಮೀಪದ ಮುಷ್ಟೂರು ಪಟ್ಟಣದ ಗುರುಮೂರ್ತಿ ಬಂಧಿತ ಆರೋಪಿ. ಈತ ಖಾಸಗಿ ಬಸ್ ಕ್ಲೀನರ್ ಆಗಿದ್ದಾನೆ. ಈ ಹಿಂದೆಯೂ ಎಟಿಎಂನಲ್ಲಿ ವ್ಯಕ್ತಿಯೊಬ್ಬರ ಕಾರ್ಡ್ ಕದ್ದು, ಹಣ ವಿತ್ ಡ್ರಾ ಮಾಡಿದ ಆರೋಪದ ಮೇರೆಗೆ ಬಂಧಿಸಲ್ಪಟ್ಟಿದ್ದ. ಜೈಲಿನಿಂದ ಹೊರಬಂದ ಎರಡೇ ದಿನಗಳಲ್ಲಿ ಮತ್ತೆ ಎಟಿಎಂ ಗಳಿಗೆ ಹಣ ವಿತ್ ಡ್ರಾ ಮಾಡಲು ಬರುವವರನ್ನು ಗುರಿಯಾಗಿಸಿಕೊಂಡಿದ್ದಾನೆ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ರಂಗಶಾಮಯ್ಯ ತಿಳಿಸಿದ್ದಾರೆ.
ಶನಿವಾರ ಆಜಾದ್ ಚೌಕದ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಹಣ ವಿತ್ ಡ್ರಾ ಮಾಡಲು ಹೋಗಿದ್ದೆ. ಈ ವೇಳೆ ಒಬ್ಬ ವ್ಯಕ್ತಿಯು ಹಣ ವಿತ್ ಡ್ರಾ ಮಾಡಲು ನೆರವಾಗಿದ್ದ. ತನ್ನನ್ನು ಗುರುಮೂರ್ತಿ ಎಂದು ಪರಿಚಯಿಸಿಕೊಂಡಿದ್ದ. ಈ ವೇಳೆ ನನ್ನ ಎಟಿಎಂ ಕಾರ್ಡ್ ಪಿನ್ ಅನ್ನು ನೋಡಿಕೊಂಡಿದ್ದ. ಆ ಬಳಿಕ ನನ್ನ ಎಟಿಎಂ ಕಾರ್ಡ್ ಅನ್ನು ನನಗೆ ತಿಳಿಯದಂತೆ ತೆಗೆದುಕೊಂಡು ಪರಾರಿಯಾಗಿದ್ದ. ಆ ಬಳಿಕ ಚಿಂತಾಮಣಿಯ ಚಿನ್ನದ ಅಂಗಡಿಯೊಂದರಲ್ಲಿ ಸ್ವೈಪ್ ಮಾಡಿ ₹10 ಸಾವಿರ ಹಣ ಪಡೆದಿದ್ದ ಎಂದು ತಿಪ್ಪನಹಳ್ಳಿಯ ವೆಂಕಟಲಕ್ಷ್ಮಮ್ಮ ದೂರು ದಾಖಲಿಸಿದ್ದರು.
ಕಾರ್ಯಾಚರಣೆಗಿಳಿದ ಪೊಲೀಸರು ಅಂಗಡಿಯ ಸಿಸಿ ಕ್ಯಾಮೆರಾ ಮತ್ತು ಎಟಿಎಂ ಕೇಂದ್ರಗಳಲ್ಲಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಗಳ ಚಿತ್ರಗಳನ್ನು ಪರಿಶೀಲಿಸಿ, ಆರೋಪಿಯನ್ನು ಬಂಧಿಸಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.