ADVERTISEMENT

ಚಿಂತಾಮಣಿ: ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿಲ್ಲ ಮಕ್ಕಳು

ಚಿಂತಾಮಣಿ ತಾಲ್ಲೂಕಿನ ಗಡಿಭಾಗದ ಹಳ್ಳಿಗಳಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು

ಎಂ.ರಾಮಕೃಷ್ಣಪ್ಪ
Published 29 ಆಗಸ್ಟ್ 2022, 6:11 IST
Last Updated 29 ಆಗಸ್ಟ್ 2022, 6:11 IST
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚಿಂತಾಮಣಿ ತಾಲ್ಲೂಕಿನ ಪುಟ್ಟಗುಂಡ್ಲಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ
ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚಿಂತಾಮಣಿ ತಾಲ್ಲೂಕಿನ ಪುಟ್ಟಗುಂಡ್ಲಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ   

ಚಿಂತಾಮಣಿ: ಪುಟ್ಟಗುಂಡ್ಲಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4, ಅಂಕಾಲಮಡುಗು ಶಾಲೆಯಲ್ಲಿ 7, ಕೃಷ್ಣಾಪುರ ಶಾಲೆಯಲ್ಲಿ 7, ಧರ್ಮವಾರಹಳ್ಳಿಯಲ್ಲಿ 13

– ಇದು ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಸದ್ಯ ಪಾಠ ಕಲಿಯುತ್ತಿರುವ ಮಕ್ಕಳ ಸಂಖ್ಯೆ.

ಇದೇನೂ ಶಾಲೆಯಲ್ಲಿ ಬೆರಳೆಣಿಕೆಯ ಮಕ್ಕಳು ಎಂದುಕೊಂಡಿರಾ, ಹೌದು. ಇದು ಆಂಧ್ರಪ್ರದೇಶದ ಜತೆ ಗಡಿಹಂಚಿಕೊಂಡಿರುವ ಚಿಂತಾಮಣಿ ತಾಲ್ಲೂಕಿನ ಗಡಿಭಾಗಗಳಲ್ಲಿನ ಸರ್ಕಾರಿ ಶಾಲೆಗಳಿಗೆ ಮಕ್ಕಳು ದಾಖಲಾಗುತ್ತಿರುವ ಸ್ಥಿತಿ. ಒಂದು ಕಾಲದಲ್ಲಿ ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ತುಂಬಿ ತುಳುಕುತ್ತಿದ್ದರು. ಆದರೆ ಈಗ ಬೆರಳೆಣಿಯ ಮಂದಿ ಮಾತ್ರ ಕಲಿಯುತ್ತಿದ್ದಾರೆ!

ADVERTISEMENT

ದ್ವಾರಪ್ಪಲ್ಲಿ ಶಾಲೆಯ ಒಂದನೇ ತರಗತಿಯಲ್ಲಿ 2, ಎರಡನೇ ತರಗತಿಯಲ್ಲಿ 2, 4ನೇ ತರಗತಿಯಲ್ಲಿ 2, 5ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಪಾಠ ಕೇಳುತ್ತಿದ್ದಾನೆ. ಇದು ದಾಖಲಾತಿ. ಹಾಜರಾತಿ ಇಷ್ಟೂ ಸಹ ಇರುವುದಿಲ್ಲ. ಉಳಿದ ಸರ್ಕಾರಿ ಶಾಲೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

ಆಂಧ್ರಪ್ರದೇಶದ ಜತೆ ಗಡಿ ಹಂಚಿಕೊಂಡಿರುವ ಚಿಂತಾಮಣಿ. ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲ್ಲೂಕಾಗಿದೆ. ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿಯಾಗಿದೆ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಹಾಗೂ ಸಿಇಟಿಯಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳು ಜಿಲ್ಲೆಯಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಇದು ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಶೈಕ್ಷಣಿಕ ಸ್ಥಿತಿ. ಗಡಿಭಾಗದ ಗ್ರಾಮಗಳ ಶಾಲೆಗಳತ್ತ ಕಣ್ಣಾಯಿಸಿದರೆ ಪರಿಸ್ಥಿತಿ ಶೋಚನೀಯವಾಗಿದೆ.

ಕೊಠಡಿಗಳ ಕೊರತೆ
ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 48, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 26 ಹಾಗೂ ಪ್ರೌಢಶಾಲೆಗಳಲ್ಲಿ 24 ಕೊಠಡಿಗಳ ಕೊರತೆ ಇದೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ 47 ಪ್ರೌಢಶಾಲೆಗಳಲ್ಲಿ 22 ಅತಿಥಿ ‌‌ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 38, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 26, ಪ್ರೌಢಶಾಲೆಗಲ್ಲಿ 18 ಕೊಠಡಿಗಳು ಶಿಥಿಲವಾಗಿದೆ.

ತಾಲ್ಲೂಕಿನ ಉತ್ತರ ಭಾಗವು ಸಂಪೂರ್ಣ ತೆಲುಗುಮಯವಾಗಿದೆ. ಕೂಗಳತೆಯಲ್ಲಿ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಅಂಕಾಲಮಡುಗು, ಪುಟ್ಟಗುಂಡ್ಲಹಳ್ಳಿ, ಕೃಷ್ಣಾಪುರ, ದ್ವಾರಪ್ಪಲ್ಲಿ, ಚಿಲಕಲನೇರ್ಪು, ಧರ್ಮವಾರ, ಸುನ್ನಪಗುಟ್ಟ, ಬಿಲ್ಲಾಂಡ್ಲಹಳ್ಳಿ, ಬಾಲರೆಡ್ಡಿಪಲ್ಲಿ, ಯನಮಲಪಾಡಿ, ಗಡಿಗವಾರಹಳ್ಳಿ ಗ್ರಾಮಗಳಲ್ಲಿ ಶಿಕ್ಷಕರು ತೆಲುಗು–ಕನ್ನಡ ಮಿಶ್ರಿತವಾಗಿ ‌ಪಾಠ ಮಾಡಬೇಕಾಗಿದೆ.

ಈ ಹಿಂದೆ ವಿದ್ಯಾರ್ಥಿಗಳು ದಾಖಲಾಗುವಾಗ ಮಾತೃಭಾಷೆ ತೆಲುಗು,ಆಡು ಭಾಷೆ ತೆಲುಗು ಎಂದು ದಾಖಲೆ ಮಾಡಿಕೊಳ್ಳಲಾಗುತ್ತಿತ್ತು. ಇತ್ತೀಚೆಗೆ ಶಿಕ್ಷಕರೇ ಮಾತೃಭಾಷೆ ಕನ್ನಡ ಎಂದು ಬರೆಯತೊಡಗಿದ್ದಾರೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಬಸ್‌ ಸೌಲಭ್ಯವಿಲ್ಲ
ಗಡಿಭಾಗದ ಶಾಲೆಗಳು ತಾಲ್ಲೂಕು ಕೇಂದ್ರದಿಂದ 35ರಿಂದ 40 ಕಿ.ಮೀ ದೂರದಲ್ಲಿವೆ. ಸಮರ್ಪಕ ರಸ್ತೆಗಳು ಇಲ್ಲ. ಬಸ್ ಸೌಲಭ್ಯವಿಲ್ಲ. ಪುಟ್ಟಗುಂಡ್ಲಹಳ್ಳಿಗೆ ತೆರಳಬೇಕಾದರೆ ಬಿಲಾಂಡ್ಲಹಳ್ಳಿಯಿಂದ ಪ್ರತಿನಿತ್ಯ ಬೆಳಿಗ್ಗೆ, ಸಂಜೆ 4 ಕಿ.ಮೀ ನಡೆದುಹೋಗಬೇಕು. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಈ ಗ್ರಾಮಗಳು ಮತ್ತು ಶಾಲೆಗಳ ಕಡೆ ತಲೆಹಾಕುವುದಿಲ್ಲ.

ಏಕೋಪಾಧ್ಯಾಯ ಶಾಲೆಗಳಲ್ಲಿ ಶಾಲೆಗೆ ಒಬ್ಬ ಶಿಕ್ಷಕ ಮಾತ್ರ. ಎಲ್ಲ ತರಗತಿಗಳ ಎಲ್ಲ ವಿಷಯಗಳ ಪಾಠವನ್ನು ಇವರೊಬ್ಬರೇ ಮಾಡಬೇಕು. ನಲಿ-ಕಲಿ ಹಾಗೂ ಸಾಮಾನ್ಯ ಶಿಕ್ಷಣದ ಪಾಠಗಳನ್ನು ಬೋಧಿಸಬೇಕು. ಬಿಸಿಯೂಟದ ವ್ಯವಸ್ಥೆ ಮಾಡಿಕೊಳ್ಳಬೇಕು. ಮೇಲಿಂದ ಮೇಲೆ ಇಲಾಖೆಗಳಿಂದ ಕೇಳುವ ಮಾಹಿತಿ ಒದಗಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿ ಕರೆಯುವ ಸಭೆಗಳಲ್ಲಿ ಭಾಗವಹಿಸಬೇಕು. ರಜೆ ಪಡೆದರೆ ಅಥವಾ ಇಲಾಖೆಯ ಸಭೆಗಳಲ್ಲಿ ಭಾಗವಹಿಸಲು ತೆರಳಿದರೆ ಶಾಲೆ ಬಂದ್? ಅಥವಾ ಬಿಸಿಯೂಟದ ಸಿಬ್ಬಂದಿ ನೋಡಿಕೊಳ್ಳಬೇಕಾಗುತ್ತದೆ.

ಹೀಗೆ ಬಹುತೇಕಏಕೋಪಾಧ್ಯಾಯ ಶಾಲೆಗಳು ಗಡಿಭಾಗದಲ್ಲಿಯೇ ಇವೆ.ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿ ಅತ್ಯಂತ ಕಡಿಮೆ ಮಕ್ಕಳಿರುವುದರಿಂದ ಕಲಿಕೆಯ ವಾತಾವರಣ ಇಲ್ಲ. ಮಕ್ಕಳು ಗುಂಪು ಸೇರಿ ಆಟ-ಪಾಠಗಳಲ್ಲಿ ಭಾಗವಹಿಸುವ ಅವಕಾಶವೂ ಇಲ್ಲ. ಕೂಲಿ ಕಾರ್ಮಿಕರು, ಪರಿಶಿಷ್ಟರು ಹಾಗೂ ಬಡವರ ಮಕ್ಕಳು ಮಾತ್ರ ಈ ಶಾಲೆಗಳಿಗೆ ಬರುತ್ತಾರೆ. ಮನೆಗಳಲ್ಲೂ ಪೋಷಕರು ಮಕ್ಕಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎನ್ನುತ್ತಾರೆಶಿಕ್ಷಕರು.

ಕೊರೊನಾ ಸಂದರ್ಭದಲ್ಲಿ ದಾಖಲಾತಿ ಸ್ವಲ್ಪಮಟ್ಟಿಗೆ ಸುಧಾರಿಸಿತ್ತು. ನಂತರ ಮತ್ತೆ ಖಾಸಗಿ ಶಾಲೆಗಳ ಕಡೆ ಮುಖ ಮಾಡಿದ್ದಾರೆ. ಗಡಿಭಾಗದವರೆಗೂ ಹಳ್ಳಿ ಹಳ್ಳಿಗೂ ಖಾಸಗಿ ಶಾಲೆಗಳ ವಾಹನಗಳು ಸಂಚರಿಸುತ್ತವೆ. ಖಾಸಗಿ ಶಾಲೆಗಳ ಹಾವಳಿಯಿಂದಲೇ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ ಎನ್ನುತ್ತಾರೆಶಿಕ್ಷಕರು.

ಮನೆ ಮನೆಗೆ ಭೇಟಿ ನೀಡಿ ಅರಿವು
ಗಡಿಭಾಗದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಶಿಕ್ಷಣದಿಂದ ವಂಚಿತರಾಗಬಾರದು. ಅವರು ಶಾಲೆ ತೊರೆಯುವಂತೆ ಆಗಬಾರದು ಎಂದು ಇಲಾಖೆಯ ನಿರ್ದೇಶನದ ಪ್ರಕಾರ ಶಾಲೆಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿವೆಂಕಟೇಶಪ್ಪ ತಿಳಿಸಿದರು.

ಶಾಲೆ ಮುಚ್ಚಿದರೆ ಅಥವಾ ವಿಲೀನಗೊಳಿಸಿದರೆ ಆ ಮಕ್ಕಳು ಶಾಲೆ ತೊರೆಯುವ ಸಂಭವ ಇರುತ್ತದೆ. ಶಿಕ್ಷಕರ ಸಭೆಗಳಲ್ಲಿ ಮಕ್ಕಳ ದಾಖಲಾತಿ ಕೊರತೆಗೆ ಕಾರಣಗಳನ್ನು ಸಿಆರ್‌ಪಿಗಳು ವಿಶ್ಲೇ‌ಷಿಸುವರು. ಗ್ರಾಮಗಳಲ್ಲಿ ಹಿರಿಯರು, ಮುಖಂಡರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮನೆ ಮನೆಗೂ ಭೇಟಿ ನೀಡಿ ಅರಿವು ಮೂಡಿಸಲಾಗುತ್ತಿದೆ ಎಂದರು.

ಗಡಿಭಾಗದ ಶಾಲೆಗಳಿಗೆ ಅಗತ್ಯವಿರುವ ಆಟದ ಮೈದಾನ, ರಂಗಮಂದಿರ ಮುಂತಾದ ಸೌಲಭ್ಯಗಳ ಕುರಿತು ಕ್ರಿಯಾಯೋಜನೆ ತಯಾರಿಸಿ ಶಿಕ್ಷಣ ಕ್ಷೇತ್ರದ ವಿಧಾನಪರಿಷತ್ ಸದಸ್ಯರಿಗೆ ಕಳುಹಿಸಲಾಗಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಕ್ಷಕರ ಕೊರತೆ ಆಗದಂತೆ ಖಾಲಿ ಇರುವ ಸ್ಥಳಗಳಿಗೆ ಅತಿಥಿ ಶಿಕ್ಷಕರ ನೇಮಕ ಮಾಡಲಾಗಿದೆ ಎಂದು ಹೇಳಿದರು.

ಸೌಲಭ್ಯವಿದ್ದರೂ ಮಕ್ಕಳಿಲ್ಲ
ಹಿಂದೆ ಮಕ್ಕಳಿದ್ದರು. ಆದರೆ ಶಾಲಾ ಕೊಠಡಿಗಳು, ನೀರು, ಶೌಚಾಲಯ ಮತ್ತಿತರ ಸೌಲಭ್ಯಗಳು ಇರಲಿಲ್ಲ. ಇಂದು ಕೊಠಡಿಗಳು, ನೀರು, ಶೌಚಾಲಯ ಸೇರಿದಂತೆ ಎಲ್ಲ ಸೌಲಭ್ಯಗಳಿದ್ದರೂ ಮಕ್ಕಳೇ ಇಲ್ಲ.
-ನರಸಿಂಹಪ್ಪ ಸಿಆರ್‌ಪಿ, ಕಡದಲಮರಿ ಕ್ಲಸ್ಟರ್, ಚಿಂತಾಮಣಿ ತಾ

ಗಡಿಶಾಲೆಗೆ ಎಲ್ಲ ಸೌಲಭ್ಯ ಅಗತ್ಯ
ಶಾಲೆಗಳಲ್ಲಿ ಒಬ್ಬರು, ಇಬ್ಬರು ಮಕ್ಕಳಿಗೆ ಪಾಠ ಮಾಡುವುದು ಪರಿಪೂರ್ಣ ಬೋಧನೆ ಆಗುವುದಿಲ್ಲ. ಕಲಿಕೆಯ ವಾತಾವರಣವೂ ಇರುವುದಿಲ್ಲ. ಆಧುನಿಕ ತಂತ್ರಜ್ಞಾನದ ಕಂಪ್ಯೂಟರ್, ಇಂಟರ್‌ನೆಟ್, ಕ್ರೀಡಾ ಚಟುವಟಿಕೆಗಳು ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಇರುವಂತಹ ಎಲ್ಲ ಸೌಲಭ್ಯಗಳನ್ನು ನೀಡಿ ಪಂಚಾಯಿತಿಗೆ ಒಂದು ಶಾಲೆ ತೆರೆದು ವಾಹನ ಸೌಲಭ್ಯವನ್ನು ನೀಡಬಹುದು. ಅಥವಾ ವಸತಿ ಶಾಲೆಯಾಗಿಸಬಹುದು. ಇದರಿಂದ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯುತ್ತದೆ.
-ಕೆ.ನರಸಿಂಹಪ್ಪ, ಶಿಕ್ಷಕ, ತುಳುವನೂರು, ಚಿಂತಾಮಣಿ ತಾ.

ದಾಖಲಾತಿ ಕ್ಷೀಣ
ಗಡಿಭಾಗದ ಜನರು ಶೈಕ್ಷಣಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇನ್ನು ಜಾಗೃತಿ ಮೂಡಿಲ್ಲ. ನಗರದ ಸುತ್ತಮುತ್ತಲ ಭಾಗಗಳಿಗೆ ಹೋಲಿಸಿದರೆ ವಿದ್ಯಾರ್ಥಿಗಳ ದಾಖಲಾತಿ ಅತ್ಯಂತ ಕ್ಷೀಣ. ಭೌತಿಕವಾಗಿ ಸಾಧ್ಯವಾದಷ್ಟು ಅನುಕೂಲಗಳಿವೆ. ಬಸ್ ಮತ್ತು ಉತ್ತಮ ರಸ್ತೆ ಸೌಲಭ್ಯಗಳಿಲ್ಲ. ಗಡಿಭಾಗದ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ದ್ವಿಚಕ್ರವಾಹನ ಇರಲೇಬೇಕು.
-ಶಂಕರ್, ಸಿಆರ್‌ಪಿ, ಎಂ.ಗೊಲ್ಲಹಳ್ಳಿ ಕ್ಲಸ್ಟರ್ ಚಿಂತಾಮಣಿ ತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.