ADVERTISEMENT

ಕಾರ್ತಿಕ ಸೋಮವಾರ: ದೇವಾಲಯಕ್ಕೆ ಹರಿದು ಬಂದ ಜನಸಾಗರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 14:00 IST
Last Updated 25 ನವೆಂಬರ್ 2024, 14:00 IST
ಚಿಂತಾಮಣಿಯಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ನಾಗನಾಥೇಶ್ವರನಿಗೆ ಅಲಂಕಾರ ಮಾಡಲಾಗಿತ್ತು
ಚಿಂತಾಮಣಿಯಲ್ಲಿ ಕಾರ್ತಿಕ ಸೋಮವಾರದ ಅಂಗವಾಗಿ ನಾಗನಾಥೇಶ್ವರನಿಗೆ ಅಲಂಕಾರ ಮಾಡಲಾಗಿತ್ತು   

ಚಿಂತಾಮಣಿ: ನಗರ ಹಾಗೂ ತಾಲ್ಲೂಕಿನಾದ್ಯಂತ ಕಡೇ ಕಾರ್ತಿಕ ಸೋಮವಾರವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜನರು ಬೆಳಗ್ಗೆಯಿಂದಲೇ ಸಡಗರ ಸಂಭ್ರಮದಿಂದ ದೇಗುಲಗಳತ್ತ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ನಗರದ ನಾಗನಾಥೇಶ್ವರ ದೇವಾಲಯ ಮತ್ತು ಅಜಾದ್‌ಚೌಕದ ಹರಿಹರೇಶ್ವರ ದೇವಾಲಯಗಳಲ್ಲಿ ಲಕ್ಷದೀಪೋತ್ಸವ ನಡೆಸಲಾಯಿತು. ಎನ್ಎನ್‌ಟಿ ರಸ್ತೆಯ ನಾಗನಾಥೇಶ್ವರ ದೇವಾಲಯದಲ್ಲಿ ಭಕ್ತರು ದರ್ಶನ ಪಡೆದರು.

ಕೈವಾರದ ಭೀಮಲಿಂಗೇಶ್ವರ ದೇವಾಲಯದಲ್ಲಿ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗಿನಿಂದಲೇ ಭಕ್ತಾದಿಗಳು ದೂರದ ಊರುಗಳಿಂದ ಆಗಮಿಸಿ ಪೂಜೆಯಲ್ಲಿ ಭಾಗವಹಿಸಿದರು.

ADVERTISEMENT

ಈಶ್ವರ ಲಿಂಗಕ್ಕೆ ಮಹನ್ಯಾಸಪೂರ್ವಕ ರುದ್ರಾಭಿಷೇಕ ಅರ್ಪಿಸಲಾಯಿತು. ಪಾರ್ವತಿ ಅಮ್ಮನಿಗೆ ವಿಶೇಷ ಅಭಿಷೇಕ, ಲಲಿತಾ ಸಹಸ್ರನಾಮಾರ್ಚನೆ ಮಾಡಲಾಯಿತು. ಭೀಮಲಿಂಗೇಶ್ವರ ಲಿಂಗಕ್ಕೆ ಹೂಗಳಿಂದ ಮಾಡಿದ ಅಲಂಕಾರ ಭಕ್ತರ ಮನತಣಿಸಿತು.

ಮುರುಗಮಲೆಯ ಮುಕ್ತೀಶ್ವರ ದೇವಾಲಯದಲ್ಲೂ ಪೂಜೆ, ಅಲಂಕಾರ, ದೀಪೋತ್ಸವ ನಡೆದವು. ಕೈಲಾಸಗಿರಿಯ ಗಂಗಾಧರೇಶ್ವರ ಗುಹಾಂತರ ದೇವಾಲಯದಲ್ಲೂ ವಿಶೇಷ ಪೂಜೆ, ಅಲಂಕಾರ ನಡೆದವು. ಕೈವಾರದ ಯೋಗಿನಾರೇಯಣ ಮಠ, ಅಮರನಾರೇಯಣ ದೇವಾಲಯ, ಆಲಂಬಗಿರಿ ಸೇರಿದಂತೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.

ನಗರದ ಗಣಪತಿ ದೇವಾಲಯ, ಕನಂಪಲ್ಲಿ ಆಂಜನೇಯ, ಬೂರಗಮಾಕಲಹಳ್ಳಿ, ಕುರುಟಹಳ್ಳಿ ಆಂಜನೇಯ ದೇವಾಲಯ, ಜೋಡಿ ರಸ್ತೆಯಲ್ಲಿರುವ ಈಶ್ವರ ದೇವಾಲಯದಲ್ಲಿ ಸಂಭ್ರಮ ಮನೆ ಮಾಡಿತ್ತು.

ದೇವರನಾಮ, ಸಂಗೀತ ಕಚೇರಿ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಹಿಳೆಯರು ದೇಗುಲದ ಆವರಣದಲ್ಲಿ ಎಲೆಯ ಮೇಲೆ ಪೂಜೆಯ ಸಾಮಗ್ರಿಗಳೊಂದಿಗೆ ಅಕ್ಕಿ, ಬೆಲ್ಲ, ಬಾಳೆಹಣ್ಣು ಇಟ್ಟು ದೇವರಿಗೆ ನೈವೇದ್ಯ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.