ಚೇಳೂರು: ಟೊಮೆಟೊ ಬೆಲೆ ದಿಢೀರ್ ಕುಸಿತವಾಗಿದ್ದು, ತಾಲ್ಲೂಕಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬೆಳೆ ಬೆಳೆದ ರೈತರು ಕಂಗಾಲಾಗಿದ್ದಾರೆ.
ಕೆಳದ ಎರಡು ತಿಂಗಳ ಹಿಂದೆ 15 ಕೆಜಿ ಟೊಮೆಟೊ ಬಾಕ್ಸ್ ಬೆಲೆ ₹ 1,000ರಿಂದ 2,500 ರೂವರೆಗೆ ಮಾರಾಟವಾಗಿತ್ತು. ಆದರೆ, ಮಾರುಕಟ್ಟೆಯಲ್ಲಿ ದಿನೇ ದಿನೆ ಬೆಲೆ ಕುಸಿತವಾಗಿದೆ.
ಎರಡು ತಿಂಗಳ ಹಿಂದೆ ಟೊಮೆಟೊ ಹೆಸರು ಕೇಳಿದರೆ ಭಯ ಪಡುವಂತಿತ್ತು. ಕೆ.ಜಿ.ಗೆ ಬರೋಬ್ಬರಿ ₹ 200ವರೆಗೆ ತಲುಪಿತ್ತು. ಇದೀಗ ಕೆ.ಜಿ.ಗೆ ₹ 10ಕ್ಕೆ ಇಳಿಕೆಯಾಗಿದೆ. ಟೊಮೆಟೊ ಬೆಳೆದ ರೈತರು ಬೆಲೆಯಿಲ್ಲದೆ ಕಂಗಾಲಾಗಿದ್ದು, ರಸ್ತೆಗೆ ಸುರಿಯುವಂತಹ ಸ್ಥಿತಿ ಬಂದಿದೆ. ಸರ್ಕಾರ ಬೆಂಬಲ ಬೆಲೆ ನೀಡಿ ನೆರವಾಗಬೇಕೆಂಬುದು ರೈತರ ಒತ್ತಾಯ.
ಚೇಳೂರು ತಾಲ್ಲೂಕಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಹಾಗಾಗಿ, ಮಾರುಕಟ್ಟೆಯಲ್ಲಿ ಟೊಮೆಟೊ ಆವಕ ಹೆಚ್ಚಾಗಿದೆ. ಇದರಿಂದ ಬೆಲೆ ಕಡಿಮೆಯಾಗಿದೆ. ಇದೀಗ ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಮಹಾರಾಷ್ಟ್ರ ರಾಜ್ಯಗಳಲ್ಲೂ ಸಹಾ ಹೆಚ್ಚು ಪ್ರಮಾನದಲ್ಲಿ ಟೊಮೊಟೊ ಬೆಳೆದಿರುವುದಿರಂದ ಅಕ್ಕಪಕ್ಕದ ರಾಜ್ಯಗಳಿಗೂ ಟೊಮೆಟೊ ರಫ್ತಾಗುತ್ತಿಲ್ಲ.
ಜೂನ್-ಜುಲೈನಲ್ಲಿ ಬಿಂಗಿರೋಗದಿಂದ ದೇಶದಾದ್ಯಂತ ಟೊಮೇಟೊ ಬೆಳೆ ಹಾಳಾಗಿತ್ತು. ಆಗ ಟೊಮೊಟೊ ಬೆಳೆದವರಿಗೆ ಚಿನ್ನದ ಬೆಲೆ ಸಿಕ್ಕಿತ್ತು. ಬಹುಶಃ ಇನ್ನೂ ಕೆಲ ತಿಂಗಳು ಬೆಲೆ ಮುಂದುವರಿಯಬಹುದು ಎಂದು ಭಾವಿಸಿ ಬಹುತೇಕ ರೈತರು ಟೊಮೆಟೊ ನಾಟಿ ಮಾಡಿದರು. ಇದೀಗ ಆ ಎಲ್ಲಾ ಬೆಳೆಯೂ ಏಕಕಾಲಕ್ಕೆ ಕೊಯ್ಲಿಗೆ ಬಂದಿರುವುದರಿಂದ ದಿಢೀರ್ ಬೆಲೆ ಕುಸಿದಿದೆ.
ಮಳೆ ಕೊರತೆ, ಬೇಡಿಕೆ ಹೆಚ್ಚಳ, ಕಾಯಿಲೆಗಳು, ಫಸಲು ಕುಸಿತ ಸೇರಿದಂತೆ ನಾನಾ ಕಾರಣಗಳಿಂದ ಶೇ 40ರಷ್ಟು ಫಸಲು ಕಳೆದ 2 ತಿಂಗಳ ಹಿಂದೆ ಕುಸಿತವಾಗಿತ್ತು. ಇದರಿಂದ ಟೊಮೆಟೊ ದರ ₹100ರ ದಾಟಿ ಮುನ್ನುಗ್ಗಿತ್ತು. ಕೆಲವೆಡೆ ಟೊಮೆಟೊ ಬೇಡಿಕೆ ಹಿನ್ನೆಲೆಯಲ್ಲಿ ಕಳ್ಳತನ ಕೂಡ ಆಗಿತ್ತು. ಆದರೆ ಸದ್ಯ ಬೇಡಿಕೆ ಕುಸಿತ, ಫಸಲು ಕೈಸೇರಿದ ಹಿನ್ನೆಲೆಯಲ್ಲಿ ಗಣನೀಯ ದರ ಇಳಿದಿದ್ದು, ಮಾರುಕಟ್ಟೆಯಲ್ಲಿ ₹ 3ರಿಂದ5ಕ್ಕೆ ಮಾರಾಟವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.