ಗೌರಿಬಿದನೂರು: ತಾಲ್ಲೂಕಿನ ರೈತರು ವಿದ್ಯುತ್ ಪರಿವರ್ತಕಗಳನ್ನು (ಟ್ರಾನ್ಸ್‌ಫಾರ್ಮರ್) ಪಡೆಯಲು ವರ್ಷದ ಹಿಂದೆಯೇ ಹಣ ಪಾವತಿಸಿದ್ದರೂ ಕೂಡ ಇದುವರೆಗೂ ಪರಿವರ್ತಕಗಳು ಸಿಕ್ಕಿಲ್ಲ.
ತಾಲ್ಲೂಕಿನಲ್ಲಿ 10 ಸಾವಿರಕ್ಕೂ ಅಧಿಕ ರೈತರು ಪಂಪ್‌ಸೆಟ್ ಗಳನ್ನು ಹೊಂದಿದ್ದಾರೆ. ಅದರಲ್ಲಿ ಶೇ 10 ರಷ್ಟು ಮಂದಿ ಮಾತ್ರ ಪ್ರತ್ಯೇಕ ಟಿಸಿ ಹೊಂದಿದ್ದಾರೆ. ಬಹುತೇಕ ರೈತರಿಗೆ ಕೃಷಿಯೇ ಆಧಾರ. ಇದರ ಪರಿಣಾಮವಾಗಿ ಈ ಹಿಂದೆ ಬೋರ್ ವೆಲ್ ಕೊರೆಸಿ ಒಂದೇ ಟಿಸಿ ಗೆ ನಾಲ್ಕೈದು ಮಂದಿ ರೈತರು ಸಂಪರ್ಕ ಪಡೆದಿದ್ದರು. ಇದರಿಂದಾಗಿ ಅಸಮರ್ಪಕವಾದ ವಿದ್ಯುತ್ ಪೂರೈಕೆಯ ಪರಿಣಾಮವಾಗಿ ಮೋಟರ್ ಮತ್ತು ಪಂಪ್ ಗಳು ದುರಸ್ತಿಯಾಗುತ್ತಿದ್ದವು. ಇದರಿಂದ ಬೇಸತ್ತಿದ್ದ 400 ಕ್ಕೂ ಹೆಚ್ಚು ರೈತರು ತಮ್ಮ ಬೋರ್ ವೆಲ್ ಗಳಿಗೆ ಪ್ರತ್ಯೇಕ ಟಿಸಿ ಅಳವಡಿಸುವಂತೆ ಸ್ಥಳೀಯ ಬೆಸ್ಕಾಂ ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಪ್ರತಿ ರೈತರು ಸುಮಾರು ₹30 ಸಾವಿರ ದಂತೆ ವಂತಿಗೆ ಹಣವನ್ನು 2022 ಮಾರ್ಚಿ ತಿಂಗಳಿನಲ್ಲಿ ಪಾವತಿಸಿದ್ದಾರೆ. ಸುಮಾರು ₹ 1.20 ಕೋಟಿಯನ್ನು ಸರ್ಕಾರಕ್ಕೆ ನೀಡಿದ್ದಾರೆ.
ಚುನಾವಣೆಗೂ ಪೂರ್ವ ಹಿರಿತನದ ಮೇರೆಗೆ ಈ ಭಾಗದ ಸುಮಾರು 128 ಮಂದಿ ರೈತರಿಗೆ ಪ್ರತ್ಯೇಕ ಟಿಸಿ ಅಳವಡಿಕೆಗಾಗಿ ಸರ್ಕಾರದಿಂದ ಅನುಮೋದನೆ ದೊರೆತಿದೆ. ₹ 3 ಕೋಟಿ ಹಣ ಗುತ್ತಿಗೆದಾರನಿಗೆ ಬಿಡುಗಡೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದುವರೆಗೂ ಗುತ್ತಿಗೆದಾರ ಸಂಬಂಧಪಟ್ಟ ರೈತರ ಜಮೀನು ಮತ್ತು ಪಂಪ್‌ಸೆಟ್ ಗಳ ಸ್ಥಳ ಪರಿಶೀಲನೆ ನಡೆಸಿಲ್ಲ. ಕನಿಷ್ಠ ಟಿಸಿ ಅಳವಡಿಕೆಗೆ ಬೇಕಾದ ಪರಿಕರಗಳನ್ನು ಸಂಗ್ರಹ ಮಾಡಿಕೊಳ್ಳುವಲ್ಲಿ ಯಾವುದೇ ಕ್ರಮವಹಿಸಿಲ್ಲ. ಮುಂದಿನ ಒಂದೆರಡು ವಾರದಲ್ಲಿ ಮುಂಗಾರು ಆರಂಭವಾದಲ್ಲಿ ರೈತರ ಜಮೀನಿಗೆ ವಿದ್ಯುತ್ ಪರಿಕರ ಸರಬರಾಜು ಮಾಡಲು ಸಾಧ್ಯವಾಗುವುದಿಲ್ಲ. ರೈತರ ಪಂಪ್ ಸೆಟ್ ಗಳಿಗೆ ಟಿಸಿ ಅಳವಡಿಸಲು ಮೀನ ಮೇಷ ಎಣಿಸುತ್ತಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗಿದೆ ಎನ್ನುತ್ತಾರೆ ರೈತರು.
ಬಯಲು ಸೀಮೆಯ ಈ ಭಾಗದಲ್ಲಿನ ಬಹುತೇಕ ರೈತರು ಕೃಷಿ ಆಧಾರಿತವಾಗಿ ಬದುಕು ಸಾಗಿಸುತ್ತಿದ್ದಾರೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿರುವ ಕಾರಣ ಪಂಪ್ ಸೆಟ್ ಗಳಿಗೆ ಪ್ರತ್ಯೇಕ ಟಿಸಿ ಅಳವಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಸರ್ಕಾರವು 128 ಮಂದಿ ರೈತರಿಗೆ ಟಿಸಿ ಅಳವಡಿಸುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರನಿಗೆ ಆದೇಶ ನೀಡಿದ್ದರೂ ಕೂಡ ಇದುವರೆಗೂ ಯಾವುದೇ ಕಾರ್ಯವಾಗಿಲ್ಲ ಎನ್ನುತ್ತಾರೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಿ.ವಿ.ಲೋಕೇಶ್ ಗೌಡ.
ನಿರ್ಲಕ್ಷ್ಯದಿಂದಾಗಿ ರೈತರು ತಮ್ಮ ಬೆಳೆಗಳಿಗೆ ಸಮರ್ಪಕವಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಒಂದೆರಡು ದಿನಗಳಲ್ಲಿ ಕಾಮಗಾರಿ ಆರಂಭ ಮಾಡದಿದ್ದಲ್ಲಿ ರೈತರು ಬೆಸ್ಕಾಂ ಕಚೇರಿಯ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.