ADVERTISEMENT

ಕೊತ್ತನೂರಲ್ಲಿ ಟಸ್ಸಾರ್ ರೇಷ್ಮೆ ಪತಂಗ ಪ್ರತ್ಯಕ್ಷ, ಸೋಜಿಗ ಮೂಡಿಸಿದ ಚಿಟ್ಟೆ

ಡಿ.ಜಿ.ಮಲ್ಲಿಕಾರ್ಜುನ
Published 12 ಆಗಸ್ಟ್ 2021, 6:16 IST
Last Updated 12 ಆಗಸ್ಟ್ 2021, 6:16 IST
ಟಸ್ಸಾರ್ ರೇಷ್ಮೆ ಪತಂಗ
ಟಸ್ಸಾರ್ ರೇಷ್ಮೆ ಪತಂಗ   

ಶಿಡ್ಲಘಟ್ಟ: ತಾಲ್ಲೂಕಿನ ಕೊತ್ತನೂರು ಗ್ರಾಮದ ರೇಷ್ಮೆ ಬೆಳೆಗಾರ ಕೆ.ಬಿ. ವೆಂಕಟಶಿವಾರೆಡ್ಡಿ ಅವರ ಮನೆಗೆ ಟಸ್ಸಾರ್ ರೇಷ್ಮೆ ಪತಂಗ ಭೇಟಿ ನೀಡಿದ್ದು, ಸೋಜಿಗ ಮೂಡಿಸಿತು.

ಸಂಜೆ ವೇಳೆ ಮನೆಯ ಮುಂದಿನ ವಿದ್ಯುತ್ ಕಂಬದ ದೀಪದ ಬೆಳಕಿನಲ್ಲಿ ಹಕ್ಕಿಯೊಂದು ನಿಧಾನವಾಗಿ ರೆಕ್ಕೆ ಬಡಿದು ಹಾರುತ್ತಿರುವಂತೆ ವೆಂಕಟ ಶಿವಾರೆಡ್ಡಿ ಅವರಿಗೆ ಕಾಣಿಸಿದೆ. ಅದು ಕೆಳಗಿಳಿದಂತೆ ಹತ್ತಿರ ಹೋಗಿ ನೋಡಿದಾಗ ದೊಡ್ಡ ಗಾತ್ರದ ಪತಂಗ ಕಾಣಿಸಿದೆ. ಗಾಢ ಹಳದಿ ಬಣ್ಣದ ಸುಂದರವಾದ ಪತಂಗದ ರೆಕ್ಕೆಗಳ ಮೇಲೆ ಕಪ್ಪು, ಕೆಂಪು ಗುರುತುಗಳಿದ್ದು, ಆಕರ್ಷಕವಾಗಿತ್ತು. ಅಗಲವಾದ ಅದರ ರೆಕ್ಕೆಗಳ ಮೇಲೆ ದೊಡ್ಡ ಕಣ್ಣುಗಳ ರೀತಿಯ ಗುರುತುಗಳಿದ್ದವು. ಪಾರದರ್ಶಕವಾಗಿ ಕನ್ನಡಿಯಂತೆಹೊಳೆಯುತ್ತಿದ್ದ ಕಣ್ಣಿನಂಥ ಆಕೃತಿಯಲ್ಲಿ ಪ್ರತಿಬಿಂಬವನ್ನು ಕಾಣಬಹುದಿತ್ತು. ಅಚ್ಚರಿಗೊಂಡ ಅವರು ಮನೆಯವರನ್ನೆಲ್ಲಾ ಕರೆದು ತೋರಿಸಿದ್ದಾರೆ.

ಅದೇ ಗ್ರಾಮದ ಸ್ನೇಕ್ ನಾಗರಾಜ್ ಅವರನ್ನು ಕರೆ ಅಪರೂಪದ ಪತಂಗ ಬಂದಿದೆ ಎಂದು ತೋರಿಸಿದ್ದಾರೆ. ಅದನ್ನು ಕಂಡ ಸ್ನೇಕ್ ನಾಗರಾಜ್, ಅದನ್ನು ಟಸ್ಸಾರ್ ಪತಂಗವೆಂದು ಗುರುತಿಸಿದ್ದಾರೆ. ಟಸ್ಸಾರ್ ರೇಷ್ಮೆ ಹೆಚ್ಚಾಗಿ ಕಂಡು ಬರುವುದು ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ. ಅಷ್ಟು ದೂರದ ರಾಜ್ಯಗಳಲ್ಲಿ ಕಂಡುಬರುವ ಈ ಟಸ್ಸಾರ್ ರೇಷ್ಮೆ ಪತಂಗ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅದರಲ್ಲೂ ರೇಷ್ಮೆ ಬೆಳೆಗಾರರ ಮನೆಯ ಮುಂದಿನ ಸಸ್ಯದ ಮೇಲೆ ಕಂಡು ಬಂದುದು ಅಚ್ಚರಿಯ ಸಂಗತಿಯಾಗಿದೆ.

ADVERTISEMENT

ಬಾಂಬಿಕ್ಸ್ ತಳಿಯ ಹಿಪ್ಪುನೇರಳೆ ಗಿಡದ ಸೊಪ್ಪನ್ನು ತಿಂದು ಬೆಳೆಯುವ ರೇಷ್ಮೆ ಹುಳು ಸಾಕುವುದು ನಮ್ಮಲ್ಲಿ ರೂಢಿಯಲ್ಲಿದೆ. ಗ್ರಾಮೀಣ ಜನರಿಗೆ ಉದ್ಯೋಗ ಸೃಷ್ಟಿಸಿ, ಅಧಿಕ ಲಾಭ ತರುವ ಜನಪ್ರಿಯ ಕೃಷಿಯಾಗಿದೆ. ಅದೇ ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಟಸ್ಸಾರ್ ರೇಷ್ಮೆಯನ್ನು ಉತ್ಪಾದಿಸಲಾಗುತ್ತದೆ. ಆದರೆ ಅದರಿಂದ ರೇಷ್ಮೆತೆಗೆಯುವ ರೀತಿ ಮಾತ್ರ ವಿಭಿನ್ನವಾದುದು.

ನಮ್ಮಲ್ಲಿಯ ರೇಷ್ಮೆಯಲ್ಲಾದರೆ ಕುದಿಯುವ ನೀರಿಗೆ ರೇಷ್ಮೆ ಹುಳುಗಳ ಸಮೇತ ಗೂಡನ್ನು ಹಾಕಿ ನೂಲನ್ನು ತೆಗೆಯುತ್ತಾರೆ. ಟಸ್ಸಾರ್‌ನಲ್ಲಿ ಹಾಗಲ್ಲ. ರೇಷ್ಮೆಹುಳು ಗೂಡುಕಟ್ಟಿ ಅದರಿಂದ ಪತಂಗ ಹೊರಹೋದ ಮೇಲೆ ಆ ಗೂಡುಗಳನ್ನು ಸಂಸ್ಕರಿಸಿ ನೂಲು ತಯಾರಿಸಿ ರೇಷ್ಮೆ ಸೀರೆ ತಯಾರಿಸುತ್ತಾರೆ. ಟಸ್ಸರ್ ರೇಷ್ಮೆಯನ್ನು ವನ್ಯ ರೇಷ್ಮೆ ಎನ್ನುವರು. ಈಶಾನ್ಯ ರಾಜ್ಯಗಳ ಬುಡಕಟ್ಟು ಜನರು ದಟ್ಟ ಕಾಡುಗಳಲ್ಲಿ ಈ ರೇಷ್ಮೆಗೂಡುಗಳನ್ನು ಹುಡುಕಿ ತರುತ್ತಾರೆ. ಮೊದಲೆಲ್ಲ ಟಸ್ಸರ್ ರೇಷ್ಮೆ ನುಣುಪಿರುವುದಿಲ್ಲವೆಂದು ಹೆಣ್ಣುಮಕ್ಕಳಿಗೆ ಇಷ್ಟ ಆಗುತ್ತಿರಲಿಲ್ಲ. ಆದರೆ, ವಿಭಿನ್ನತೆಯ ನೆವದಲ್ಲಿ ಮತ್ತು ಅಹಿಂಸಾ ರೇಷ್ಮೆ ಎಂಬ ಕಾರಣಕ್ಕೆ ಟಸ್ಸರ್ ರೇಷ್ಮೆಯನ್ನು ಈಗ ಇಷ್ಟಪಡುತ್ತಿದ್ದಾರೆ.

ನಿಶಾಚರ ಜೀವಿಗಳು

ರಾಷ್ಟ್ರೀಯ ಪತಂಗ ವಾರವೆಂದು ದೇಶದೆಲ್ಲೆಡೆ ಪ್ರತಿ ವರ್ಷ ಜುಲೈ 21ರಿಂದ 29ರ ವರೆಗೂ ಆಚರಿಸಲಾಗುತ್ತದೆ. ಪತಂಗವು ಚಿಟ್ಟೆಯ ಹತ್ತಿರದ ಸಂಬಂಧಿ. ಎರಡೂ ಲೆಪಿಡಾಪ್ಟೆರಾ ವರ್ಗಕ್ಕೆ ಸೇರಿದವು.

ಆದರೆ ಪತಂಗಗಳು ನಿಶಾಚರಜೀವಿಗಳು. ಕೆಲ ಪತಂಗಗಳ ಕಂಬಳಿ ಹುಳುಗಳು ಕೃಷಿಗೆ ಹಾನಿ ಮಾಡಿದರೆ, ಕೆಲವು ಲಾಭದಾಯಕ. ರೇಷ್ಮೆ ಪತಂಗದ ಹುಳು ಬೆಳೆಸಿ ಅದರ ಗೂಡಿನಿಂದ ರೇಷ್ಮೆ ನೂಲು ತೆಗೆಯುವುದು ಲಾಭದಾಯಕ ಉದ್ಯಮ. ಪತಂಗ ಬೆಳಕಿಗೆ ಆಕರ್ಷಿತವಾಗುತ್ತದೆ. ಪ್ರಕಾಶಮಾನ ವಸ್ತುವನ್ನು ಸುತ್ತುತ್ತದೆ. ಇದಕ್ಕೆ ಕಾರಣ ಚಂದ್ರನ ಬೆಳಕನ್ನು ತನ್ನ ಸಂಚಾರ ನಿರ್ದೇಶಿಸಲು ಬಳಸುವುದು ಅಥವಾ ದೃಷ್ಟಿ ವ್ಯತ್ಯಾಸಗೊಳ್ಳುವ ಕಾರಣವೂ ಇರಬಹುದು. ರಾತ್ರಿ ಅರಳುವ ಹೂಗಳ ಪರಾಗಸ್ಪರ್ಶಕ್ಕೆ ಪತಂಗ ಬೇಕೇ ಬೇಕು. ಭಾರತದಲ್ಲಿ 10 ಸಾವಿರಕ್ಕೂ ಅಧಿಕ ರೀತಿಯ ಪತಂಗಗಳಿವೆ. ತಾಲ್ಲೂಕಿನಲ್ಲೂ ವೈವಿಧ್ಯಮಯ ಪತಂಗಗಳನ್ನು ಕಾಣಬಹುದು. ಪತಂಗಗಳು ಸಾಕಷ್ಟು ಇವೆ ಎಂದರೆ ಪರಿಸರ ವ್ಯವಸ್ಥೆ ಆರೋಗ್ಯವಾಗಿದೆ ಎಂದರ್ಥ ಎಂದು ಉಪನ್ಯಾಸಕ ಅಜಿತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.