ADVERTISEMENT

ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕರ ಸಾವು

ಪೋಷಕರು, ಸಂಬಂಧಿಗಳ ದಾಂದಲೆ: ಆಸ್ಪತ್ರೆ ಕಿಟಕಿ, ಬಾಗಿಲು ಗಾಜು ಪುಡಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 19:52 IST
Last Updated 24 ಜನವರಿ 2021, 19:52 IST

ಚಿಂತಾಮಣಿ: ತಾಲ್ಲೂಕಿನ ಮೂಗಲಮರಿ ಗ್ರಾಮದಲ್ಲಿಭಾನುವಾರ ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಬರಲಿಲ್ಲ, ವೈದ್ಯರು ಕೂಡಲೇ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿ ಮೃತ ಬಾಲಕರ ಕಡೆಯ ಗುಂಪೊಂದು ನಗರದ ಸರ್ಕಾರಿ ಆಸ್ಪತ್ರೆಯ ಕಿಟಕಿ, ಬಾಗಿಲುಗಳ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.

ಮೂಗಲಮರಿ ಗ್ರಾಮದ ರಾಮಾಂಜಿ ಎಂಬುವವರ ಮಗ ತೇಜಸ್(11) ಮತ್ತು ಶಿವರಾಜು ಎಂಬುವರ ಮಗ ಚರಣ್ (10) ತಮ್ಮ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಬಿದ್ದಿದ್ದರು. ಒಬ್ಬ ಕಾಲು ಜಾರಿ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಮತ್ತೊಬ್ಬ ಹೋಗಿದ್ದಾನೆ. ಸುತ್ತಮುತ್ತಲಿನ ಜನ ಅವರನ್ನು ನೀರಿನಿಂದ ಹೊರ ತೆಗೆದಾಗ ಇಬ್ಬರೂ ಬದುಕಿದ್ದರು. ಕೂಡಲೇ ಆಂಬುಲೆನ್ಸ್‌ ಕಳಿಸುವಂತೆ ನಗರದ ಸರ್ಕಾರಿ ಆಸ್ಪತ್ರೆಗೆ ದೂರವಾಣಿ ಮಾಡಿ ಮನವಿ ಮಾಡಲಾಗಿತ್ತು. ಆದರೆ, ಸಮಯಕ್ಕೆ ಸರಿಯಾಗಿಆಂಬುಲೆನ್ಸ್‌ ಬರಲಿಲ್ಲ ಎನ್ನಲಾಗಿದೆ.

ಹಾಗಾಗಿ ಬೇರೆ ವಾಹನದಲ್ಲಿ ಇಬ್ಬರೂ ಬಾಲಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅದು ಮಾರ್ಗಮಧ್ಯೆ ಕೆಟ್ಟು ನಿಂತಿದೆ. ಹೀಗಾಗಿ ಆಸ್ಪತ್ರೆಯನ್ನು ತಲುಪುವುದು ತಡವಾಗಿದೆ.ಮಕ್ಕಳನ್ನು ಪರೀಕ್ಷಿಸಿದ ವೈದ್ಯರು ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಆಂಬುಲೆನ್ಸ್ ಸಕಾಲದಲ್ಲಿ‌ ಬರಲಿಲ್ಲ, ಮಕ್ಕಳನ್ನು ತಂದ ತಕ್ಷಣ ವೈದ್ಯರು ತಪಾಸಣೆ ಮಾಡಲಿಲ್ಲ ಎಂದು ಆರೋಪಿಸಿ ಗುಂಪು ಆಸ್ಪತ್ರೆಯ ಪ್ರವೇಶ ದ್ವಾರದ ಗಾಜುಗಳು ಹಾಗೂ ಸಹಾಯವಾಣಿ ವಿಭಾಗದ ಗಾಜುಗಳನ್ನು ಪುಡಿ ಮಾಡಿದ್ದಾರೆ. ಭಯಭೀತರಾದ ಮಹಿಳಾ ಸಿಬ್ಬಂದಿ ಕಿರುಚಿಕೊಂಡ ಒಳಗೆ ಓಡಿದ್ದಾರೆ.

ಮಕ್ಕಳನ್ನು ಆಸ್ಪತ್ರೆಗೆ ಕರೆತಂದ ತಕ್ಷಣ ಪರೀಕ್ಷಿಸಲಾಯಿತು. ಮಕ್ಕಳು ಮೃತಪಟ್ಟು ಅರ್ಧ ಗಂಟೆಯಿಂದ ಒಂದು ಗಂಟೆಯಾಗಿರಬಹುದು ಎಂದು ತಿಳಿಸಿದೆ. ತಕ್ಷಣ ಗುಂಪುಅವಾಚ್ಯ ಶಬ್ದಗಳಿಂದ ನಿಂದಿಸಿದರು. ಗಾಜುಗಳನ್ನು ಧ್ವಂಸ ಮಾಡಿ ಸಿಬ್ಬಂದಿಯ ಮೇಲೂ ಹಲ್ಲೆ ನಡೆಸಲು ಮುಂದಾದರು ಎಂದು ವೈದ್ಯೆ ಡಾ.ವಾಣಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.