ADVERTISEMENT

ನವೆಂಬರ್‌ನಲ್ಲಿ ನೀರುದ್ಯೋಗಿಗಳ ಸಮಾವೇಶ: ರವಿ ಕೃಷ್ಣಾರೆಡ್ಡಿ

ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2018, 13:31 IST
Last Updated 9 ಅಕ್ಟೋಬರ್ 2018, 13:31 IST

ಚಿಕ್ಕಬಳ್ಳಾಪುರ: ‘ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಮೂರು ಲಕ್ಷ ಹುದ್ದೆಗಳು ಖಾಲಿ ಇವೆ. ಆರ್ಥಿಕ ಹೊರೆಯ ಕುಂಟುನೆಪ ಒಡ್ಡಿ ರಾಜ್ಯ ಸರ್ಕಾರ ಖಾಲಿ ಹುದ್ದೆಗಳ ಭರ್ತಿಗೆ ಮುಂದಾಗುತ್ತಿಲ್ಲ. ಆ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ನವೆಂಬರ್‌ನಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನೀರುದ್ಯೋಗಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಘಟಕ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉದ್ಯೋಗವಿಲ್ಲದೆ ಲಕ್ಷಾಂತರ ನಿರುದ್ಯೋಗಿ ಯುವ ಜನರು ಪರದಾಡುತ್ತಿದ್ದಾರೆ. ಅನೇಕರು ಅರ್ಹತೆಗಳು ಇದ್ದರೂ ವಯೋಮಿತಿಯಿಂದಾಗಿ ನೇಮಕಾತಿ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದರ ಬಗ್ಗೆ ಹೆಚ್ಚಿನ ಗಮನ ಹರಿಸದ ಪಕ್ಷ ಆಧಾರಿತ ಸರ್ಕಾರಗಳು ಕೇವಲ ರಾಜಕೀಯ ಅಧಿಕಾರ ಪಡೆಯುವ ಬಗ್ಗೆ ಸೀಮಿತಗೊಳಿಸಿಕೊಂಡಿವೆ’ ಎಂದು ಆರೋಪಿಸಿದರು.

‘ಇವತ್ತು ದೇಶದಲ್ಲಿ ನಿರುದ್ಯೋಗ ಅತ್ಯಂತ ಜಟಿಲ, ಗಂಭೀರ ಸಮಸ್ಯೆಯಾಗಿದೆ. ಇನ್ನೊಂದೆಡೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದುಂದು ವೆಚ್ಚ, ಆದಾಯ ಸೋರಿಕೆ, ಭ್ರಷ್ಟಾಚಾರ ನಿಯಂತ್ರಿಸುವ ಕೆಲಸ ಮಾಡುತ್ತಿಲ್ಲ. ಸರ್ಕಾರಿ ಕಚೇರಿಗಳ ಸೇವೆಗಳಿಗಾಗಿ ಜನರು ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಇವತ್ತು ಬಹುತೇಕ ಕಚೇರಿಗಳಲ್ಲಿ ಸಕಾಲ ಕಾಯ್ದೆಯಡಿ ಕೊಡಬೇಕಾದ ಸೇವೆಗಳ ಮಾಹಿತಿ ವಿವರವೇ ಹಾಕಿಲ್ಲ. ರಾಜ್ಯದ ಕಂದಾಯ ಇಲಾಖೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಸರ್ಕಾರಿ ಆಸ್ಪತ್ರೆಗಳು ಸೇರಿದಂತೆ ಹಲವಾರು ಇಲಾಖೆಗಳಲ್ಲಿ ಲಂಚ ತೆಗೆದುಕೊಳ್ಳುವ ಮತ್ತು ದಲ್ಲಾಳಿಗಳನ್ನು ಉತ್ತೇಜಿಸುವ ವಾತಾವರಣ ನಿರ್ಮಾಣವಾಗಿದೆ’ ಎಂದು ಆಪಾದಿಸಿದರು.

‘ಭ್ರಷ್ಟಾಚಾರ, ನಿರುದ್ಯೋಗದ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸದಿದ್ದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಒಬ್ಬ ಅಧಿಕಾರಿ ಮನೆಯಲ್ಲಿ ಕೋಟಿಗಟ್ಟಲೇ ಹಣ, ಕೆ.ಜಿ.ಗಟ್ಟಲೇ ಚಿನ್ನ ಸಿಗುತ್ತದೆ ಎಂದರೆ ಈ ರಾಜ್ಯದಲ್ಲಿ ಅಧಿಕಾರಿಗಳು ಜನರನ್ನು ಯಾವ ಮಟ್ಟದಲ್ಲಿ ಲೂಟಿ ಮಾಡಿದ್ದಾರೆ ಎಂದು ತೋರಿಸುತ್ತದೆ. ಭ್ರಷ್ಟಾಚಾರ ನಿಗ್ರಹ ದಳ ಬೆದರು ಬೊಂಬೆಯಂತಿದೆ. ಅದನ್ನು ಮುಚ್ಚಿ ಕೂಡಲೇ ಲೋಕಾಯುಕ್ತ ಸಂಸ್ಥೆ ಪುನರ್ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದರು.

‘ಭ್ರಷ್ಟ ವ್ಯವಸ್ಥೆ ಮತ್ತು ಅದನ್ನು ಒಪ್ಪಿಕೊಂಡಿರುವ ಮನಸ್ಥಿತಿಯ ವಿರುದ್ಧ ನಮ್ಮ ಹೋರಾಟ ನಡೆದಿದೆ. ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ತುಂಬಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ. ಈ ಹೋರಾಟದಲ್ಲಿ ನಮ್ಮೊಂದಿಗೆ ಕೈಜೋಡಿಸಬಯಸುವವರು 79756 25575 ಈ ಸಂಖ್ಯೆಗೆ ಕರೆ ಮಾಡಬಹುದು’ ಎಂದು ತಿಳಿಸಿದರು.

ಲಂಚ ಮುಕ್ತ ಕರ್ನಾಟಕ ವೇದಿಕೆಯ ರಾಜ್ಯ ಘಟಕದ ಕಾರ್ಯಕಾರಿಣಿ ಸದಸ್ಯರಾದ ಸಿ. ಎನ್.ದೀಪಕ್, ಬಸವರಾಜ್ ಮಾಲಿಪಾಟೀಲ್, ಮುಖಂಡರಾದ ರಾಕೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.