ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕುಸಿದ ಅಂತರ್ಜಲ

ಡಿ.ಎಂ.ಕುರ್ಕೆ ಪ್ರಶಾಂತ
Published 4 ಜನವರಿ 2024, 5:30 IST
Last Updated 4 ಜನವರಿ 2024, 5:30 IST
<div class="paragraphs"><p>ಬಾಗೇಪಲ್ಲಿ ತಾಲ್ಲೂಕಿನ ಅಧ್ಯಯನ ಕೊಳವೆ ಬಾವಿಯೊಂದರಲ್ಲಿ ಅಂತರ್ಜಲ ಮಟ್ಟದ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿರುವ ಭೂ ಜಲ ಇಲಾಖೆ ಅಧಿಕಾರಿಗಳು</p></div>

ಬಾಗೇಪಲ್ಲಿ ತಾಲ್ಲೂಕಿನ ಅಧ್ಯಯನ ಕೊಳವೆ ಬಾವಿಯೊಂದರಲ್ಲಿ ಅಂತರ್ಜಲ ಮಟ್ಟದ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿರುವ ಭೂ ಜಲ ಇಲಾಖೆ ಅಧಿಕಾರಿಗಳು

   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 2020ರಿಂದ 22ರ ಅವಧಿಯಲ್ಲಿ ದಾಖಲೆಯ ಮಳೆ ಸುರಿಯಿತು. ರಾಜ್ಯದಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಮಳೆ ಸುರಿದ ಜಿಲ್ಲೆಗಳಲ್ಲಿ ಚಿಕ್ಕಬಳ್ಳಾಪುರವೂ ಒಂದು. ಆದರೆ 2023ನೇ ಸಾಲಿನಲ್ಲಿ ತೀವ್ರ ಮಳೆ ಕೊರತೆ ಆಯಿತು. ಜಿಲ್ಲೆಯ ಆರೂ ತಾಲ್ಲೂಕುಗಳು ಸಹ ತೀವ್ರ ಬರದ ಪಟ್ಟಿಗೆ ಸೇರಿದವು. 

ಹೀಗೆ ಮಳೆ ಕೊರತೆಯ ಕಾರಣ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟದ ಕುಸಿಯುತ್ತಿದೆ. ಜಿಲ್ಲಾ ಭೂಜಲ ಇಲಾಖೆಯ ಅಧ್ಯಯನಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ಏರಿಕೆ ಕಂಡಿದ್ದ ಅಂತರ್ಜಲ ಮಟ್ಟ 2023ರಲ್ಲಿ ಕುಸಿದಿದೆ. 

ADVERTISEMENT

2022ರ ನವೆಂಬರ್‌ನಲ್ಲಿನ ಜಿಲ್ಲೆಯ ಅಂತರ್ಜಲ ಮಟ್ಟ ಮತ್ತು 2023ರ ನವೆಂಬರ್‌ನಲ್ಲಿ ಅಂತರ್ಜಲ ಮಟ್ಟವನ್ನು ಇಲಾಖೆಯು ತುಲನೆ ಮಾಡಿದೆ. ಆ ಪ್ರಕಾರ ಒಂದೇ ವರ್ಷದಲ್ಲಿ –8.69 ಮೀಟರ್‌ಗಳಷ್ಟು ಅಂತರ್ಜಲ ಮಟ್ಟ ಕುಸಿದಿದೆ. 

ಜಿಲ್ಲೆಯ ಭೂಜಲ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 156 ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಅಧ್ಯಯನ ನಿರೀಕ್ಷಣಾ ಕೊಳವೆ ಬಾವಿಗಳು ಇವೆ. ಈ ಕೊಳವೆ ಬಾವಿಗಳಲ್ಲಿ ‌ಪ್ರತಿ ತಿಂಗಳು ಜಲಮಟ್ಟವನ್ನು ಮಾಪನ ಮಾಡುತ್ತದೆ. ಆಯಾ ವರ್ಷದ ಸರಾಸರಿಯ ಮಳೆಯ ಪ್ರಮಾಣವನ್ನು ಪರಿಗಣಿಸಿ ಅಂತರ್ಜಲ ಮಟ್ಟವನ್ನು ನಿರ್ಧರಿಸಲಾಗುತ್ತದೆ.

ಈ ಕೊಳವೆ ಬಾವಿಗಳಲ್ಲಿನ ಅಂತರ್ಜಲ ಮಟ್ಟವನ್ನು ಆಧರಿಸಿ ಜಿಲ್ಲೆಯಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಿದೆಯಾ? ಕುಸಿದಿದೆಯಾ? ಎನ್ನುವ ಲೆಕ್ಕಾಚಾರ ಮಾಡಲಾಗುತ್ತದೆ. ಇದು ಜಿಲ್ಲೆಯ ಅಂತರ್ಜಲ ಮಟ್ಟಕ್ಕೆ ಕೈಗನ್ನಡಿಯಾಗಿದೆ. 2020ರ ಅಕ್ಟೋಬರ್‌ ಹಾಗೂ 2021ರ ಅಕ್ಟೋಬರ್‌ನಲ್ಲಿ ಅಧ್ಯಯನ ಕೊಳವೆ ಬಾವಿಗಳ ಅಂಕಿ ಅಂಶಗಳನ್ನು ಆಧರಿಸಿ ನೋಡುವುದಾದರೆ ಪ್ರಸಕ್ತ ವರ್ಷ ಅಂತರ್ಜಲ ಮಟ್ಟ ಹೆಚ್ಚಿದೆ. 2022 ಮತ್ತು 2023ರ ಅಂಕಿ ಅಂಶಗಳನ್ನು ನೋಡಿದರೆ ಕುಸಿದಿದೆ.

ಕಳೆದ ಮೂರು ದಶಕಗಳಲ್ಲಿಯೇ ಸುರಿಯದಷ್ಟು ಮಳೆ 2021 ಮತ್ತು 22ರಲ್ಲಿ ಜಿಲ್ಲೆಯಲ್ಲಿ ಸುರಿದಿದೆ. ಜಲಾಶಯಗಳು, ಕೆರೆ, ಕಟ್ಟೆಗಳಲ್ಲಿ ನೀರು ತುಂಬಿ ಕೋಡಿ ಹರಿದಿವೆ. ರೈತರು, ನಾಗರಿಕರು ‘ಸಾಕು’ ಎನ್ನುವಷ್ಟು ಮಳೆ ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಸುರಿದಿತ್ತು. ಇಷ್ಟೆಲ್ಲ ಮಳೆ ಸುರಿದ ಪರಿಣಾಮ ಬರದ ನಾಡು ಎನಿಸಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಗಣನೀಯವಾಗಿ ಹೆಚ್ಚಿತ್ತು. ಬತ್ತಿದ ಕೊಳವೆ ಬಾವಿಗಳಲ್ಲಿ ನೀರು ದೊರೆಯುತ್ತಿತ್ತು. ಹೀಗೆ ಸಮೃದ್ಧವಾಗಿದ್ದ ಅಂತರ್ಜಲ ಮಳೆ ಕೊರತೆಯ ಕಾರಣ ಕುಸಿದಿದೆ. 

2024ರ ಮೇ ಮತ್ತು ಜೂನ್‌ನಲ್ಲಿ ಜಿಲ್ಲೆಯಲ್ಲಿ ಮಳೆ ಉತ್ತಮವಾಗಿ ಸುರಿಯದಿದ್ದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ. ಕುಡಿಯುವ ನೀರಿಗೆ ದೊಡ್ಡ ಮಟ್ಟದಲ್ಲಿಯೇ ಕೊರತೆ ಎದುರಾಗಲಿದೆ ಎನ್ನುತ್ತವೆ ಭೂ ಜಲ ಇಲಾಖೆ ಮೂಲಗಳು. 

ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 736 ಮಿ.ಮೀ ಇದೆ. ಆದರೆ 2023ರ ಮುಂಗಾರು ಅವಧಿಯಲ್ಲಿ ಕೇವಲ 164 ಮಿ.ಮೀ ಆಗಿತ್ತು. ಇದರಿಂದ ತೀವ್ರತರದ ಮಳೆ ಕೊರತೆ ಜಿಲ್ಲೆಗೆ ಆಗಿದೆ. ಈ ಹಿಂದಿನ ರೀತಿಯಲ್ಲಿ ಜಲವೈಭವ ಜಲಾಶಯ, ಕೆರೆ, ಕಟ್ಟೆಗಳಲ್ಲಿ ಇಲ್ಲ. ಮಳೆ ಕೊರತೆಯು ಕೆರೆ, ಕಟ್ಟೆಗಳನ್ನು ಬತ್ತಿಸಿರುವುದಷ್ಟೇ ಅಲ್ಲ ಅಂತರ್ಜಲದ ಮಟ್ಟವನ್ನು ತಗ್ಗಿಸುತ್ತಿದೆ.

157 ಅಧ್ಯಯನ

ಕೊಳವೆ ಬಾವಿಗಳಿಂದ ಮಾಹಿತಿ 2021ಕ್ಕೆ ಹೋಲಿಸಿದರೆ 2022ರಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿತ್ತು. ಕಳೆದ ಎರಡು ವರ್ಷಗಳಲ್ಲಿ ಉತ್ತಮ ಮಳೆಯಾದ ಕಾರಣ ಅಂತರ್ಜಲ ಮಟ್ಟ ಉತ್ತಮಗೊಂಡಿತ್ತು. ಆದರೆ 2023ರಲ್ಲಿ ಮಳೆಯಾಗದ ಕಾರಣ ಅಂತರ್ಜಲ ಮಟ್ಟ ಕುಸಿದಿದೆ ಎಂದು ಜಿಲ್ಲಾ ಭೂಜಲ ಇಲಾಖೆಯ ಹಿರಿಯ ಭೂ ವಿಜ್ಞಾನಿ ಬೋರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲೆಯಲ್ಲಿ 157 ಅಧ್ಯಯನ ಕೊಳವೆ ಬಾವಿಗಳು ಇವೆ. ಈ ಕೊಳವೆ ಬಾವಿಗಳಿಗೆ ಟೆಲಿಮೀಟರ್ ಬಿಟ್ಟಿದ್ದೇವೆ.  ಪ್ರತಿ ಆರು ಗಂಟೆಗೆ ಒಮ್ಮೆ ನೀರಿನ ಮಟ್ಟ ದಾಖಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.