ಚಿಕ್ಕಬಳ್ಳಾಪುರ: ರೈತರು, ಮಠ, ಮಂದಿರಗಳ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ನಮೂದಾಗಿರುವ ವಿಚಾರವನ್ನು ಡಿ. 9ರಿಂದ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲದ ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ತಿಳಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಎನ್ನುವುದು ತಿಮಿಂಗಲದ ಬೋರ್ಡ್. ಕಾಂಗ್ರೆಸ್‌ನವರು ಸಂವಿಧಾನದ ಪುಸ್ತಕ ಇಟ್ಟುಕೊಂಡಿರುವರು. ಆದರೆ ಸಂವಿಧಾನಕ್ಕೆ ವಿರುದ್ಧವಾಗಿ ವಕ್ಫ್ ಬೋರ್ಡ್‌ಗೆ ನ್ಯಾಯಾಂಗದ ಸ್ಥಾನ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಕ್ಫ್ ಬೋರ್ಡ್‌ನವರು ಆಕಾಶದಿಂದ ಇಳಿದು ಬಂದವರಾ? ಇರಾನ್, ಇರಾಕ್‌ನಿಂದ ಬಂದವರಿಗಾಗಿ ಕಾಂಗ್ರೆಸ್ ಪಕ್ಷವು ಸಂವಿಧಾನದ ಆಶಯಕ್ಕೆ ವಿರುದ್ಧ ನಡೆದುಕೊಳ್ಳುತ್ತಿದೆ ಎಂದು ಟೀಕಿಸಿದರು.
‘ನಮ್ಮ ಮಠ, ಮಂದಿರಗಳ ಜಮೀನುಗಳ ದಾಖಲೆಗಳು ಇಲ್ಲದಿದ್ದರೆ ಎಸಿ, ಡಿಸಿ, ತಹಶೀಲ್ದಾರ್ ಕಚೇರಿಗೆ ವರ್ಷಗಟ್ಟಲೆ ಅಲೆಯಬೇಕು. ವಕ್ಫ್ ಬೋರ್ಡ್‌ನಲ್ಲಿ ಮೌಲ್ವಿಗಳಿಗೆ ನ್ಯಾಯಾಧೀಶರ ಸ್ಥಾನ ನೀಡಲಾಗಿದೆ. ವಕ್ಫ್ ಬೋರ್ಡ್ ವಜಾ ಆಗಲೇಬೇಕು. ಸಿದ್ದರಾಮಯ್ಯ ಅಲ್ಪಸಂಖ್ಯಾತರ ಚಾಂಪಿಯನ್ ಆಗಲು ಹೊರಟಿದ್ದಾರೆ. ಈ ಹಿಂದೆ ‘ಅಹಿಂದ’ ನಾಯಕ ಎನ್ನುತ್ತಿದ್ದರು. ಆದರೆ ಈಗ ‘ಹಿಂದ’ ತೆಗೆದು ಬರಿ ಅಲ್ಪಸಂಖ್ಯಾತರ ನಾಯಕ ಎನಿಸಿಕೊಳ್ಳಲು ಬಯಸಿದ್ದಾರೆ’ ಎಂದರು.
‘ಚಿಕ್ಕಬಳ್ಳಾಪುರದ ಕಂದವಾರ ಶಾಲೆಯಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಓದಿದ್ದಾರೆ. ಇಂತಹ ಶಾಲೆ ಆವರಣದಲ್ಲಿ ಈಗ ಗೋರಿ ನಿರ್ಮಾಣವಾಗಿದೆ. ಶಾಲೆ ಆವರಣದಲ್ಲಿ ಗೋರಿ ಹೇಗೆ ಸಾಧ್ಯ? ಈ ಗೋರಿ ಮೇಲಿನ ಹಸಿರು ಹೊದಿಕೆಗಳನ್ನು 15 ದಿನಗಳ ಒಳಗೆ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ಹೋರಾಟ ನಡೆಸಿ ತೆರವುಗೊಳಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.