ಚಿಂತಾಮಣಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವ ಜಮೀನಿನಲ್ಲಿ ಉಳುಮೆ ಮಾಡಲು ಹೋದ ರೈತರು ಮತ್ತು ಅವರನ್ನು ತಡೆದ ಜಾಮಿಯಾ ಮಸೀದಿ ಪದಾಧಿಕಾರಿಗಳ ಮಧ್ಯೆ ಶುಕ್ರವಾರ ಜಟಾಪಟಿ ನಡೆದಿದೆ.
ಎರಡೂ ಗುಂಪುಗಳ ಮಧ್ಯೆ ಆರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಪರಸ್ಪರ ತಳ್ಳಾಡಿಕೊಂಡರು. ಇದರಿಂದ ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಮಧ್ಯೆ ಪ್ರವೇಶಿಸಿದ ಪೊಲೀಸರು ಗುಂಪುಗಳನ್ನು ಚದುರಿಸಿದರು.
ತಹಶೀಲ್ದಾರ್ ಸುದರ್ಶನ ಯಾದವ್, ಡಿವೈಎಸ್‌ಪಿ ಮುರಳೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಎರಡೂ ಗುಂಪುಗಳ ಜತೆ ಚರ್ಚಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಬೆಳವಣಿಗೆ ಬಳಿಕ ಜಾಮಿಯಾ ಮಸೀದಿ ಕಾರ್ಯದರ್ಶಿ ಇನಾಯತ್ ಉಲ್ಲಾ ಚಿಂತಾಮಣಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ರೈತರ ವಿರುದ್ಧ ಪ್ರಕರಣ ಸಹ ದಾಖಲಾಗಿದೆ.
ಏನಿದು ವಿವಾದ?:
ಚಿಂತಾಮಣಿಯ ಹೊರವಲಯದಲ್ಲಿರುವ ತಿಮ್ಮಸಂದ್ರ ಗ್ರಾಮದ ಸರ್ವೆ ಸಂಖ್ಯೆ 13/1, 13/3 ಮತ್ತು 20ರಲ್ಲಿರುವ ಜಮೀನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ನಮೂದಾಗಿದೆ. ಜೊತೆಗೆ ಈ ಜಮೀನಿನ ಸುತ್ತಲೂ ತಂತಿ ಬೇಲಿ ಹಾಕಲಾಗಿದೆ.
ರೈತರು ತಂತಿಬೇಲಿ ಕಿತ್ತು ಹಾಕಿ ಟ್ರ್ಯಾಕ್ಟರ್ ಮೂಲಕ ಶುಕ್ರವಾರ ಉಳುಮೆ ಮಾಡಿದ್ದಾರೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಜಾಮಿಯಾ ಮಸೀದಿ ಸಮಿತಿ ಪದಾಧಿಕಾರಿಗಳು ತಡೆಯೊಡ್ಡಿದರು.
‘ಇದು ವಕ್ಫ್ ಆಸ್ತಿ ಎಂದು ನ್ಯಾಯಾಲಯವೇ ಹೇಳಿದೆ. ಹಾಗಿದ್ದರೂ ಏಕೆ ಅತಿಕ್ರಮಣ ಮಾಡಿ ಉಳುಮೆ ಮಾಡಿದ್ದೀರಿ’ ಎಂದು ಜಾಮಿಯಾ ಪದಾಧಿಕಾರಿಗಳು ರೈತರನ್ನು ಪ್ರಶ್ನಿಸಿದರು. ಈ ವೇಳೆ ಎರಡೂ ಗುಂಪುಗಳ ಮಧ್ಯೆ ಮಾತಿಗೆ ಮಾತು ಬೆಳೆದು ಜಟಾಪಟಿ ನಡೆಯಿತು.
ಸ್ಥಳಕ್ಕೆ ಬಂದ ಗ್ರಾಮಾಂತರ ಠಾಣೆಯ ಪೊಲೀಸರು ಜಮೀನಿಗೆ ಸಂಬಂಧಿಸಿದ ದಾಖಲೆ ತರುವಂತೆ ಎರಡೂ ಗುಂಪುಗಳಿಗೆ ಸೂಚಿಸಿದರು.
‘ದಾಖಲೆ ಪರಿಶೀಲಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಗೆ ಸೂಚಿಸಲಾಗುತ್ತದೆ. ಅನಗತ್ಯವಾಗಿ ಶಾಂತಿ ಕದಡುವ ಕೆಲಸಕ್ಕೆ ಯಾರೂ ಕೈಹಾಕಬಾರದು. ಕಾನೂನು ಪ್ರಕಾರ ಹೋರಾಟ ಮಾಡಿ. ಹೀಗೆ ಜಗಳ ಮಾಡುವುದು ಸರಿಯಲ್ಲ’ ಎಂದು ಪೊಲೀಸರು ತಾಕೀತು ಮಾಡಿದರು.
ಇದು ವಕ್ಫ್ ಆಸ್ತಿ: ಜಾಮಿಯಾ ವಾದ
ಈ ಸರ್ವೆ ನಂಬರ್ ಜಮೀನಿನ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ಇತ್ತು. ವಾದ ವಿವಾದ ಆಲಿಸಿದ ನ್ಯಾಯಾಲಯ ಇದು ವಕ್ಫ್ ಆಸ್ತಿ ಎಂದು ತೀರ್ಪು ನೀಡಿದೆ ಎಂದು ಜಾಮೀಯಾ ಮಸೀದಿ ಪದಾಧಿಕಾರಿಗಳು ವಾದಿಸಿದರು. ನ್ಯಾಯಾಲಯ ಆದೇಶ ಹೊರಬಿದ್ದ ನಂತರ ಜಾಮಿಯಾ ಮಸೀದಿ ಕಮಿಟಿಯು ಜಮೀನು ಸರ್ವೆ ಮಾಡಿಸಿ ಯಾರೂ ಅತಿಕ್ರಮಣ ಮಾಡದಂತೆ ಜಮೀನಿನ ಸುತ್ತಲೂ ಮುಳ್ಳುತಂತಿ ಹಾಕಿಸಿದೆ. ಕೆಲವರು ಮುಳ್ಳುತಂತಿ ಕಿತ್ತು ಹಾಕಿ ಅತಿಕ್ರಮವಾಗಿ ಉಳುಮೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾತನ ಕಾಲದ ಜಮೀನಿಗೆ ವಕ್ಫ್ ಕಾಟ: ರೈತರು
‘60–70 ವರ್ಷಗಳಿಂದ ಈ ಜಮೀನಿನಲ್ಲಿ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದಾಗಿದೆ ಎಂದು ನಮ್ಮನ್ನು ಓಡಿಸಿ ಮುಳ್ಳುತಂತಿ ಬೇಲಿ ಹಾಕಿ ತೊಂದರೆ ಕೊಡುತ್ತಿದ್ದಾರೆ’ ಎಂದು ರೈತರು ಆರೋಪ ಮಾಡಿದರು. ‘ತಾತ ಮುತ್ತಾತಂದಿರ ಕಾಲದಿಂದಲೂ ಉಳುಮೆ ಮಾಡಿಕೊಂಡು ಜೀವನ ಮಾಡುತ್ತಿದ್ದ ನಮ್ಮನ್ನು ನೂರಾರು ಜನರು ಮಾರಕಾಸ್ತ್ರಗಳಿಂದ ಬೆದರಿಸಿ ಒಕ್ಕಲೆಬ್ಬಿಸಿದ್ದಾರೆ’ ಎಂದು ದೂರಿದರು. ‘ಜಮೀನಿನಲ್ಲಿದ್ದ ಬೆಳೆ ಮತ್ತು ನೀರಾವರಿಗಾಗಿ ಅಳವಡಿಸಿದ್ದ ಪೈಪ್ ಕಿತ್ತು ಹಾಕಿದ್ದಾರೆ. ನಾವು ಬಡವರು ಅಸಹಾಯಕರು ಬೇರೆ ದಾರಿ ಕಾಣದೆ ಸಹಿಸಿಕೊಂಡಿದ್ದೆವು. ವಕ್ಫ್ ಹೆಸರಲ್ಲಿ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಸರ್ಕಾರ ಹೇಳಿದೆ. ಹೀಗಾಗಿ ನಾವು ನಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಮುಂದಾಗಿದ್ದೇವೆ’ ಎಂದು ರೈತರು ಹೇಳಿದರು.
ಈ ಜಮೀನಿನ ವ್ಯಾಪ್ತಿಯಲ್ಲಿ ‘ರಚ್ಚಕಟ್ಟೆ’ ಸಹ ಇದೆ. ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ಸಹ ಈ ಬಗ್ಗೆ ವರದಿ ನೀಡಿದ್ದಾರೆ. ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇದ್ದರೂ ದೌರ್ಜನ್ಯದಿಂದ ನಮ್ಮನ್ನು ಒಕ್ಕಲೆಬ್ಬಿಸಿ ತಂತಿಬೇಲಿ ಅಳವಡಿಸಿಕೊಂಡಿದ್ದಾರೆ.ನಾಗೇಶ್, ಶ್ರೀರಾಮರೆಡ್ಡಿ, ರೈತರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.