ಚಿಕ್ಕಬಳ್ಳಾಪುರ: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಬಾಲ್ಯ ಸ್ಮರಿಸುವಾಗ ಬರುವ ನಗರದ ಕಂದವಾರ ಸರ್ಕಾರಿ ಪ್ರಾಥಮಿಕ ಶಾಲೆ ಪಹಣಿಯಲ್ಲಿ ನಮೂದಾಗಿರುವ ‘ವಕ್ಫ್’ ಹೆಸರು ಮತ್ತೆ ಚರ್ಚೆಗೆ ಕಾರಣವಾಗಿದೆ.
ಕಂದವಾರ ಗ್ರಾಮದ ಸರ್ವೆ ನಂ1ರಲ್ಲಿ 19ಗುಂಟೆ ಜಮೀನಿದೆ. ಹಲವು ದಶಕಗಳಿಂದ ಈ ಜಮೀನಿನ ಪಹಣಿಯಲ್ಲಿ ‘ಶಾಲೆ’ ಎಂದೇ ಬರುತ್ತಿತ್ತು. 2014–15 ನಂತರ ‘ದಾವೂದ್ ಷಾ ವಲ್ಲೀ ದರ್ಗಾ ಸುನ್ನಿ ವಕ್ಫ್ ಆಸ್ತಿ’ ಎಂದು ನಮೂದಾಗಿದೆ. ಈಗಲೂ ಪಹಣಿಯಲ್ಲಿ ಇದೇ ಹೆಸರು ಬರುತ್ತಿದೆ.
ವಿಶ್ವೇಶ್ವರಯ್ಯ ಅವರು ಬಾಲ್ಯದಲ್ಲಿ ಮುದ್ದೇನಹಳ್ಳಿಯಿಂದ ಚಿಕ್ಕಬಳ್ಳಾಪುರಕ್ಕೆ ಪ್ರಾಥಮಿಕ ಶಿಕ್ಷಣಕ್ಕೆ ಬರುವಾಗ ಈ ಸ್ಥಳದಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯುತ್ತಿದ್ದರು ಎನ್ನಲಾಗುತ್ತಿದೆ. ಆ ಕಾರಣದಿಂದ ಶಾಲೆ ಆವರಣದಲ್ಲಿ ‘ವಿಶ್ವೇಶ್ವರಯ್ಯ ತಂಗುದಾಣ’ ಹೆಸರಿನ ಕೊಠಡಿಯೂ ಇದೆ.
‘ಕಂದವಾರದ ಸರ್ವೆ ನಂ 200ರಲ್ಲಿ ದರ್ಗಾಕ್ಕೆ ಸೇರಿದ 15*19 ಜಾಗವಿದೆ. ಇದು ವಕ್ಫ್ ಜಾಗ. ಇದಕ್ಕೆ ಹೊಂದಿಕೊಂಡಿರುವ ಸರ್ವೆ ನಂ 1ರಲ್ಲಿ ಶಾಲೆ ಹೆಸರಿನಲ್ಲಿದ್ದ 19 ಗುಂಟೆ ಜಾಗ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಈ ಬಗ್ಗೆ ಗ್ರಾಮಸ್ಥ ರಾಮಸ್ವಾಮಿ ಮತ್ತಿತರರು ಹೋರಾಟ ನಡೆಸಿದ್ದರು. 2022–23ರಲ್ಲಿ ನ್ಯಾಯಾಧೀಶರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಆಗ ವಕ್ಫ್ ಬೋರ್ಡ್‌ನವರನ್ನು ಕರೆಸಿದ್ದರು. ಆಗ ವಕ್ಪ್ ಬೋರ್ಡ್‌ನವರು, ‘ತಪ್ಪಾಗಿದೆ. ನಮ್ಮದು 15*19 ಜಾಗ’ ಎಂದು ಹೇಳಿದ್ದರು. ಆದರೆ, ಇಂದಿಗೂ ಶಾಲೆ ಪಹಣಿಯಲ್ಲಿರುವ ‘ವಕ್ಫ್’ ಹೆಸರು ತೆರವಾಗಿಲ್ಲ ಎಂದು ಶಾಲೆಯ ಈ ಹಿಂದಿನ ಮುಖ್ಯ ಶಿಕ್ಷಕ ಕೆ.ಜಿ ಶ್ರೀನಿವಾಸ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.