ಚಿಂತಾಮಣಿ: ಮಳೆಗಾಲ ಆರಂಭವಾಗಿದೆ. ಇದರಿಂದ ಡೆಂಗಿ, ಮಲೇರಿಯಾ, ಚಿಕನ್ ಗುನ್ಯಾ, ಟೈಫಾಯಿಡ್, ವಾಂತಿ-ಭೇದಿಯಂತಹ ಪ್ರಕರಣಗಳು ವರದಿಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆಯೇ ಸವಾಲಾಗಿದೆ. ತಾಲ್ಲೂಕಿನ ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಛತೆಯ ಸಮಸ್ಯೆ ಕಾಡುತ್ತಿದೆ.
ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಪ್ಲಾಸ್ಟಿಕ್, ಸ್ವಚ್ಛತೆ ಸಮಸ್ಯೆಗಳು ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿವೆ. ತಾಲ್ಲೂಕಿನಲ್ಲಿ 35 ಗ್ರಾಮ ಪಂಚಾಯಿತಿಗಳಿದ್ದು, ಬಹುತೇಕ ಗ್ರಾಮಗಳಲ್ಲಿ ಚರಂಡಿ ಇಲ್ಲ. ಕೆಲವು ಕಡೆ ಇದ್ದರೂ ಸೂಕ್ತ ನಿರ್ವಹಣೆ ಇಲ್ಲದಂತಾಗಿದೆ. ಕಸ-ಕಡ್ಡಿಗಳಿಂದ ಚರಂಡಿಗಳು ತುಂಬಿದ್ದರೂ ಸ್ವಚ್ಛಗೊಳಿಸುವ ಕೆಲಸ ಮಾತ್ರ ಮಾಡುತ್ತಿಲ್ಲ.
ಆಗಾಗ ಮಳೆಯಾಗುತ್ತಿರುವುದರಿಂದ ಚರಂಡಿಗಳಲ್ಲಿ ನೀರು ನಿಂತು ಕಸ ಕಡ್ಡಿ ಕೊಳೆತು ನಾರುತ್ತದೆ. ಕೊಚ್ಚೆ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಜನರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಚರಂಡಿಗಳ ಕೊಳಚೆ ನೀರು ರಸ್ತೆಗೆ ಹರಿಯುವುದು ಮಾಮೂಲಿಯಾಗಿದೆ.
ತಾಲ್ಲೂಕಿನ ವೀರಪ್ಪಲ್ಲಿ ಗ್ರಾಮದಲ್ಲಿ ಇತ್ತೀಚೆಗೆ ನಾಲ್ವರು ಮೃತಪಟ್ಟು, ಇತರೆ ಕೆಲವರು ಅಸ್ವಸ್ಥಗೊಂಡಿದ್ದರು. ವಾಂತಿ-ಭೇದಿಯಿಂದ ಮೃತಪಟ್ಟಿದ್ದಾರೆ ಎಂದು ಜನರು ಆತಂಕಗೊಂಡಿದ್ದರು. ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಗ್ರಾಮದಲ್ಲೇ ಬೀಡುಬಿಟ್ಟು, ಮನೆ ಮನೆಗೂ ತೆರಳಿ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆ ನೀಡಿದ್ದರು.
ತಾಲ್ಲೂಕಿನಲ್ಲಿ ಜನವರಿಯಿಂದ 12 ಡೆಂಗಿ ಪ್ರಕರಣ ವರದಿಯಾಗಿದೆ. ಮಲೇರಿಯಾ, ಚಿಕನ್ ಗುನ್ಯಾ ಮುಂತಾದ ಇತರೆ ಯಾವ ಪ್ರಕರಣಗಳು ವರದಿಯಾಗಿಲ್ಲ. ಸ್ವಚ್ಛತೆ ಕಾಣದೆ ಸೊಳ್ಳೆ ಕಡಿತದಿಂದ ಪ್ರಕರಣಗಳು ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ.
ಗ್ರಾಮಗಳಲ್ಲಿ ಎಲ್ಲೆಂದರಲ್ಲಿ ತಿಪ್ಪೆ ಇರುವುದರಿಂದಲೂ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ತಿಪ್ಪೆಗಳನ್ನು ಗ್ರಾಮದ ಹೊರಗೆ ಹಾಕುವುದಿಲ್ಲ. ಯಾವುದೇ ನಿಯಮ ಪಾಲಿಸದೆ ತಿಪ್ಪೆಗಳನ್ನು ಗ್ರಾಮದ ರಸ್ತೆಗಳ ಬದಿಯಲ್ಲಿ, ಮನೆಗಳ ಪಕ್ಕದಲ್ಲೇ ಹಾಕುತ್ತಾರೆ. ಇದರಿಂದಲೂ ಸೊಳ್ಳೆಗಳು ಉತ್ಪತ್ತಿಯಾಗಿ ಕಾಯಿಲೆಗಳು ಹೆಚ್ಚಾಗುತ್ತವೆ.
ಗ್ರಾಮಗಳಲ್ಲಿ ಚರಂಡಿಗಳ ಸ್ವಚ್ಛತೆಗೆ 15ನೇ ಹಣಕಾಸು ಯೋಜನೆಯಲ್ಲಿ ಹಣ ಖರ್ಚು ಮಾಡಬಹುದು. 6 ತಿಂಗಳಿಗೊಮ್ಮೆ ವರ್ಷಕ್ಕೆ ಎರಡು ಬಾರಿ ಮಾತ್ರ ಚರಂಡಿಗಳ ಸ್ವಚ್ಛತೆ ಅವಕಾಶವಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಬಹುತೇಕ ಗ್ರಾಮ ಪಂಚಾಯಿತಿಗಳಲ್ಲಿ ಅದೂ ಸಮರ್ಪಕವಾಗಿ ನಡೆಯುತ್ತಿಲ್ಲ.
ತಾಲ್ಲೂಕಿನ 35 ಗ್ರಾಮ ಪಂಚಾಯಿತಿಗಳಲ್ಲಿ ಎರಡು ಗ್ರಾಮ ಪಂಚಾಯಿತಿಗೆ ಒಂದರಂತೆ 15 ಘನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ 4 ಘಟಕಗಳು ಚೆನ್ನಾಗಿ ಕೆಲಸ ಮಾಡುತ್ತಿವೆ. ಪ್ರತಿ ಒಂದು-ಒಂದೂವರೆ ತಿಂಗಳಿಗೊಮ್ಮೆ ಸ್ವಚ್ಛತೆ ಕೈಗೊಳ್ಳಬೇಕು. 20-25 ದಿನಗಳಿಗೊಮ್ಮೆ ನೀರಿನ ಟ್ಯಾಂಕರ್, ತೊಟ್ಟಿಗಳನ್ನು ಸ್ವಚ್ಛಗೊಳಿಸಿ ಫೋಟೊ ಸಮೇತ ವರದಿಗಳನ್ನು ಕಳುಹಿಸಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್ ತಿಳಿಸಿದರು.
ಪ್ರತಿ ಗ್ರಾಮ ಪಂಚಾಯಿತಿಯೂ ಕಸ ಸಂಗ್ರಹಣೆಗಾಗಿ ಟಾಟಾ-ಎಸಿ ವಾಹನ ಖರೀದಿಸಿದೆ. ಎರಡು ಗ್ರಾಮ ಪಂಚಾಯಿತಿಗಳಲ್ಲಿ ಟ್ರ್ಯಾಕ್ಟರ್‌ಗಳಿವೆ. ಗ್ರಾಮದಲ್ಲಿ ಸಂಗ್ರಹಣೆಯಾಗುವ ಪ್ಲಾಸ್ಟಿಕ್, ಪೇಪರ್, ಪುಸ್ತಕ ಮತ್ತಿತರ ತ್ಯಾಜ್ಯವನ್ನು ಸಂಗ್ರಹಣೆ ಮಾಡಿ ಘಟಕಗಳಿಗೆ ಸಾಗಿಸಲಾಗುತ್ತಿದೆ. ಸಾಮಾನ್ಯವಾಗಿ ಗ್ರಾಮಗಳಲ್ಲಿ ಕಸವನ್ನು ತಿಪ್ಪೆಗಳಿಗೆ ಹಾಕುತ್ತಾರೆ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ.
ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಮನೆ ಮನೆಗೂ ಕಸದಬುಟ್ಟಿ ನೀಡುವ ಯೋಜನೆ ರೂಪಿಸಲಾಗಿದೆ. ದುರುಪಯೋಗ ಆಗದಂತೆ ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಿ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದು, ಡೆಂಗಿ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯು ಹಲವಾರು ಕ್ರಮ ಕೈಗೊಂಡಿದೆ. ತಿಂಗಳಿಗೆ 2 ಬಾರಿ ಲಾರ್ವ ಸಮೀಕ್ಷೆ ನಡೆಸಲಾಗುತ್ತದೆ. ಆಶಾ ಕಾರ್ಯಕರ್ತೆಯರು ಮತ್ತು ಇಲಾಖೆಯ ಸಿಬ್ಬಂದಿ ಪ್ರತಿ ತಿಂಗಳು 1-5 ರವರೆಗೆ ಮತ್ತು 16-20 ರವರೆಗೆ ಎರಡು ಬಾರಿ ಲಾರ್ವ ಸಮೀಕ್ಷೆ ನಡೆಸಿ ನಾಶಪಡಿಸುತ್ತಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ತಿಳಿಸಿದರು.
ತಾಲ್ಲೂಕಿನಲ್ಲಿ ಜನವರಿಯಿಂದ 12 ಡೆಂಗಿ ಪ್ರಕರಣ ಕಂಡುಬಂದಿವೆ. ಮಲೇರಿಯಾ, ಟೈಫಾಯಿಡ್, ಚಿಕನ್ ಗುನ್ಯಾ ಮತ್ತಿತರ ಯಾವುದೇ ಪ್ರಕರಣ ಕಂಡುಬಂದಿಲ್ಲ ಎಂದು ರಾಮಚಂದ್ರಾರೆಡ್ಡಿ ಪ್ರಜಾವಾಣಿಗೆ ಮಾಹಿತಿ ನೀಡಿದರು.
ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಸ್ವಚ್ಛತೆಯ ಬಗ್ಗೆಯೂ ಮಾರ್ಗದರ್ಶನ ನೀಡುತ್ತಾರೆ. ಗ್ರಾಮಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಜಾಥಾ ನಡೆಸಲಾಗಿದೆ. ಆರೋಗ್ಯ ಇಲಾಖೆ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆಯ ಕಾರ್ಯಕ್ರಮಗಳನ್ನು ಕೈಗೊಂಡಿದ್ದರೂ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಗ್ರಾಮಗಳಲ್ಲಿ ಚರಂಡಿಗಳ ಸ್ವಚ್ಛತೆ ಇಂದಿಗೂ ಸವಾಲಾಗಿ ಪರಿಣಮಿಸಿದೆ. ಬಹುತೇಕ ಚರಂಡಿಗಳು ಮಳೆಗಾಲದಲ್ಲಿ ಸೊಳ್ಳೆಗಳ ಆವಾಸ ಸ್ಥಾನಗಳಾಗಿರುತ್ತವೆ ಎಂದು ಜನರು ದೂರುತ್ತಾರೆ.
ನಗರದ ಹೊರವಲಯದ ಮಿನಿ ಕಂಬಾಲಪಲ್ಲಿ ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಕೇಳುವಂತಿಲ್ಲ. ಕೆಲವು ಕಡೆ ಚರಂಡಿಗಳು ಇದ್ದರೂ ಮುಚ್ಚಿಹೋಗಿವೆ. ಮನೆಗಳ ಬಚ್ಚಲುಗಳ ನೀರು, ಪಾತ್ರೆ, ಬಟ್ಟೆ ತೊಳೆದ ಅಶುದ್ಧ ನೀರು ರಸ್ತೆ ಮೇಲೆ ಹರಿಯುವಂತಾಗಿದೆ. ರಸ್ತೆಯ ಮೇಲೆ ಎಲ್ಲೆಂದರಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಿದೆ. ಸ್ವಚ್ಛತೆ ವಿಚಾರದಲ್ಲಿ ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಜನರು ಹೈರಾಣಾಗಿದ್ದಾರೆ.
ಮನೆಗಳ ನೀರು ಸಂಗ್ರಹಣೆ ತೊಟ್ಟಿಗಳಲ್ಲಿ ಲಾರ್ವಾ ಉತ್ಪತ್ತಿ ಆಗುತ್ತದೆ. ಆರೋಗ್ಯ ಇಲಾಖೆ ಸಮೀಕ್ಷೆ ನಡೆಸಿ ಲಾರ್ವಾ ಕಂಡುಬಂದರೆ ನಾಶಪಡಿಸಲಾಗುತ್ತದೆ. ವಾರಕ್ಕೊಮ್ಮೆ ತೊಟ್ಟಿ, ಡ್ರಮ್ ಒಣಗಿಸಬೇಕು. ಮನೆಗಳ ಸುತ್ತಮುತ್ತಲು ನೀರು ಸಂಗ್ರಹಣೆ ಆಗದಂತೆ ನೋಡಿಕೊಳ್ಳಬೇಕು. ಶುದ್ಧ ನೀರು ಕುಡಿಯಬೇಕು ಎಂದು ಜಾಗೃತಿಗೊಳಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಮಚಂದ್ರಾರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.