ಚಿಕ್ಕಬಳ್ಳಾಪುರ: ‘ನಮ್ಮಲ್ಲಿ ಜಾತಿ ಜಾತಿಗಳ ನಡುವೆ ಗೊಂದಲ ಇದೆ. ಶ್ರೇಷ್ಠ, ಕನಿಷ್ಠ, ಅಸ್ಪೃಶ್ಯ ಎನ್ನುವ ಭಾವನೆಗಳು ಇವೆ.ನಾವು ಅಸ್ಪೃಶ್ಯ ಸಮಾಜದ ಬಗ್ಗೆ ಯೋಚಿಸಬೇಕು’ ಎಂದುಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.
ನಗರದಲ್ಲಿ ಭಾನುವಾರ ಆರ್‌ಎಸ್‌ಎಸ್ ಚಿಕ್ಕಬಳ್ಳಾಪುರ ನಗರ ಮತ್ತು ಗ್ರಾಮಾಂತರ ಮಂಡಲವು ಹಮ್ಮಿಕೊಂಡಿದ್ದ ಪಥ ಸಂಚಲನದ ಸಮಾರೋಪದಲ್ಲಿ ಅವರು ಮಾತನಾಡಿದರು.
ರಾಷ್ಟ್ರೀಯ ಮತ್ತು ಹಿಂದೂ ಪ್ರವಾಹದ ಜತೆ ಅಸ್ಪೃಶ್ಯ ಸಮಾಜವನ್ನು ಸೇರಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ ಎಂದು ಹೇಳಿದರು.
ಕ್ರೈಸ್ತರ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳು ತಿಲಕ ಇಡಬಾರದು. ಹೆಣ್ಣು ಮಕ್ಕಳು ಬಳೆ ತೊಡಬಾರದು ಎನ್ನುತ್ತಾರೆ. ಈ ಕಾನ್ವೆಂಟ್‌ಗಳಿಂದ ನಮ್ಮ ಶ್ರದ್ಧೆಯನ್ನು ತೆಗೆದು ಹಾಕುವ ಕೆಲಸ ನಡೆಯುತ್ತಿದೆ. ಆಸ್ಪತ್ರೆಗಳಿಗೆ ಪಾದ್ರಿಗಳು ಬರುತ್ತಲೇ ಇರುತ್ತಾರೆ. ರೋಗಿಯ ಕಾಯಿಲೆ ಗುಣವಾದರೆ ಯೇಸು ಕಾರಣ ಎನ್ನುತ್ತಾರೆ. ಯೇಸು, ಅಲ್ಲನನ್ನು ಕ್ರೈಸ್ತರು, ಮುಸ್ಲಿಮರು ಪೂಜಿಸಲಿ, ನಮ್ಮ ಅಭ್ಯಂತರ ಇಲ್ಲ. ಬಲವಂತದಿಂದ ಆಸೆ ಆಮಿಷಗಳಿಂದ ಮತಾಂತರ ಮಾಡಬಾರದು ಎಂದರು.
ನಮಗೆ ಭೂಮಿ ಅಂದರೆ ಕಲ್ಲು, ಮಣ್ಣು ಅಲ್ಲ.ಈ ದೇಶವನ್ನು ಮಾತೃಭೂಮಿ, ಪುಣ್ಯಭೂಮಿ, ದೇವಭೂಮಿ, ಕರ್ಮಭೂಮಿ ಎಂದು ಹೇಳುತ್ತೇವೆ. ದೈವತ್ವವನ್ನು ಕಂಡಿದ್ದೇವೆ. ಮಾತೃ ಭೂಮಿಗಾಗಿ ಸಾವಿರಾರು ಜನರು ಪ್ರಾರ್ಣಾರ್ಪಣೆ ಮಾಡಿದ್ದಾರೆ. ವೀರ ಸಾವರ್ಕರ್ ಬಗ್ಗೆ ದೇಶ ವಿರೋಧಿಗಳು ಮಾತನಾಡುತ್ತಿದ್ದಾರೆ ಎಂದರು.
ಪಠ್ಯಪುಸ್ತಕಗಳಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಸಂಪತ್ತು ಲೂಟಿ ಮಾಡಲು ಬಂದರು ಎಂದು ಹೇಳಲಾಗುತ್ತದೆ. ಆದರೆ ಅವರು ಸಂಪತ್ತಿನ ಲೂಟಿಗೆ ಬರಲಿಲ್ಲ. ನಮ್ಮ ದೇಶವನ್ನು ಮುಸ್ಲಿಂ, ಕ್ರೈಸ್ತರ ದೇಶವನ್ನಾಗಿಸಲು ಬಂದರು ಎಂದು ಹೇಳಿದರು.
ಭಾರತ ಅನೇಕ ಸಂಪ್ರದಾಯಗಳ ದೇಶ. ಆದರೆ ಒಂದೇ ಸಂಸ್ಕೃತಿಯ ದೇಶ.ಹಿಂದೂಗಳಷ್ಟು ಜಾತ್ಯತೀತರು ಯಾರೂ ಇಲ್ಲ. ಜಗತ್ತಿನ ಎಲ್ಲರ ಹಿತ ಬಯಸುವವರು ನಾವು. ಹಿಂದೂ ಸಮಾಜವು ಧರ್ಮ, ಸಂಸ್ಕೃತಿ ಉಳಿಸಿ
ಕೊಂಡು ಹೋಗಬೇಕು. ಜಾತಿಗಳನ್ನು ಬದಿಗೊತ್ತಿ ನಾವೆಲ್ಲರೂ ಒಂದೇ ಎನ್ನಬೇಕು ಎಂದರು. ಆರ್‌ಎಸ್‌ಎಸ್ ಮುಖಂಡರಾದ ಕೋಲಾರದಶಂಕರ್ ನಾಯಕ್ ವೇದಿಕೆಯಲ್ಲಿ ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸುಬ್ಬರಾಯನಪೇಟೆಯ ಸುಬ್ರಹ್ಮಣ್ಯೇಶ್ವರ ದೇವಾಲಯದ ಆವರಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಆರ್‌ಎಸ್‌ಎಸ್ ಸ್ವಯಂ ಸೇವಕರು ಪಥಸಂಚಲನ ನಡೆಸಿದರು.
‘ಜಾತಿ ಕಂದಕದ ಪೊರೆ ಕಳಚಬೇಕು’
ಜಾತಿಯ ಕಂದಕ ಹಿಂದೂ ಧರ್ಮದಲ್ಲಿ ಇಂದಿಗೂ ಇದೆ. ಈ ಜಾತಿಯ ಕಂದಕದ ಪೊರೆಯನ್ನು ಕಳಚಬೇಕು ಎಂದು ಪಥಸಂಚಲನದ ಸಮಾರೋಪದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಹೇಳಿದರು.
ಹಿಂದೂ ಧರ್ಮದ ರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಋಷಿಗಳು, ಆಚಾರ್ಯರು ಶ್ರಮಿಸಿದ್ದಾರೆ. ಯಾವುದೇ ಧರ್ಮ ಕಾಲ ಕಾಲಕ್ಕೆ ತನ್ನ ದೋಷಗಳನ್ನು ಕಳಚಬೇಕು ಎಂದರು.
ಜಗತ್ತಿನ ಬಹುತೇಕ ಧರ್ಮಗಳು ಸುಖ, ಶಾಂತಿ ನೆಮ್ಮದಿಯಿಂದ ಬದುಕಬೇಕು ಎಂದು ಬೋಧಿಸುತ್ತವೆ. ಆದರೆ ಕೆಲವರು ಸ್ವಾರ್ಥಕ್ಕಾಗಿ ಧರ್ಮಗಳ ವಿಚಾರದಲ್ಲಿ ತಮ್ಮದೇ ಆಲೋಚನೆ ಹರಿಬಿಡುತ್ತಿರುವುದು ಕೋಮುವಾದ, ಭಯೋತ್ಪಾದನೆಗೆ ಕಾರಣವಾಗುತ್ತಿದೆ ಎಂದರು.
ರಾಷ್ಟ್ರ ಮತ್ತು ಹಿಂದೂ ಧರ್ಮದ ರಕ್ಷಣೆಗಾಗಿ ಆರ್‌ಎಸ್‌ಎಸ್ ಹುಟ್ಟಿದೆ. ಸಾಂಸ್ಕೃತಿಕ ವಲಯದಲ್ಲಿಯೂ ಆರ್‌ಎಸ್‌ಎಸ್ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.