ADVERTISEMENT

ಕೆರೆ ಹೂಳೆತ್ತುವ ಸ್ಥಳದಲ್ಲೇ ಗಾಲಿಕುರ್ಚಿ ವಿತರಣೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 5:11 IST
Last Updated 28 ಮಾರ್ಚ್ 2021, 5:11 IST
ಚಿಂತಾಮಣಿ ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ಅಂಗವಿಕಲ ಬಾಲಕನಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ದೇವರಾಜ್ ಗಾಲಿಕುರ್ಚಿ ವಿತರಿಸಿದರು
ಚಿಂತಾಮಣಿ ತಾಲ್ಲೂಕಿನ ಮೈಲಾಪುರ ಗ್ರಾಮದಲ್ಲಿ ಅಂಗವಿಕಲ ಬಾಲಕನಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ದೇವರಾಜ್ ಗಾಲಿಕುರ್ಚಿ ವಿತರಿಸಿದರು   

ಚಿಂತಾಮಣಿ: ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ತಾಲ್ಲೂಕಿನ ಮೈಲಾಪುರ ಗ್ರಾಮದ ಯುವಜನರು ಸಾಮಾಜಿಕ ಒಗ್ಗೂಡಿವಿಕೆಯಲ್ಲಿ ವಿವಿಧ ಇಲಾಖೆಗಳು ಮತ್ತು ಸಂಘ, ಸಂಸ್ಥೆಗಳ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಬಳ್ಳಿ ಬಳಗ ಸುಸ್ಥಿರ ಕೃಷಿಕರ ವೇದಿಕೆ ಮೂಲಕ ದಾನದ ರೂಪದಲ್ಲಿ ಅಂಗವಿಕಲರಿಗೆ ಗಾಲಿಕುರ್ಚಿ ವಿತರಿಸಿದರು.

ಮೈಲಾಪುರ ಗ್ರಾಮದ ಕೆರೆಯಲ್ಲಿ ನರೇಗಾ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ದೇವರಾಜ್, ಬಳ್ಳಿ ಬಳಗ ಸುಸ್ಥಿರ ಕೃಷಿಕರ ವೇದಿಕೆಯ ಕಾರ್ಯಕರ್ತರ ಸಮ್ಮುಖದಲ್ಲಿ ಗ್ರಾಮದ ಅಂಗವಿಕಲ ಪುನೀತ್ ಕುಮಾರ್ ಅವರಿಗೆ ಗಾಲಿಕುರ್ಚಿ ಹಸ್ತಾಂತರ ಮಾಡಿದರು.

ಕೃಷಿಕರ ವೇದಿಕೆಯ ಸದಸ್ಯ ಸೋರಪ್ಪಲ್ಲಿ ಚಂದ್ರಶೇಖರ್ ಮಾತನಾಡಿ, ಸಾಮಾನ್ಯವಾಗಿ ಕೂಲಿ ಮಾಡುವವರನ್ನು ಸಮಾಜ ತಾತ್ಸಾರ ಮನೋಭಾವದಿಂದ ನೋಡುವ ಸ್ಥಿತಿಯಿದೆ. ನರೇಗಾದಡಿ ಕೆಲಸ ಮಾಡುವ ಒಬ್ಬ ವ್ಯಕ್ತಿಯ ಮಗ ಅಂಗವಿಕಲ ಎಂದು ತಿಳಿದ ಕೂಡಲೇ ಅವರ ಮನೆಯ ಪರಿಸ್ಥಿತಿ ಅರಿತು ವೇದಿಕೆಯಿಂದ ಸಹಾಯ ಮಾಡಲು ಪ್ರಯತ್ನ ಮಾಡಲಾಯಿತು ಎಂದು ಹೇಳಿದರು.

ADVERTISEMENT

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ದೇವರಾಜ್ ಮಾತನಾಡಿ, ಸಾಮಾಜಿಕ ಕಾರ್ಯಗಳಿಂದ ಸಿಗುವ ಖುಷಿಯು ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಸೌಲಭ್ಯವಂಚಿತ ಫಲಾನುಭವಿಗಳನ್ನು ನೋಡಿದ ಸಂದರ್ಭದಲ್ಲಿ ತುಂಬಾ ನೋವಾಗುತ್ತದೆ. ಅಂಗವಿಕಲ ಮಕ್ಕಳು ಎಲ್ಲರಂತೆಯೇ ಬದುಕಬೇಕು. ಆದರೆ, ಬಹುತೇಕ ಕಡೆಗಳಲ್ಲಿ ಈ ಮಕ್ಕಳು ವಂಚಿತರಾಗುತ್ತಾರೆ ಎಂದು ಭಾವುಕರಾದರು.

ವೇದಿಕೆಯ ಕಾರ್ಯಕರ್ತ ಚೌಡಪ್ಪ, ಯುವಕ ಚಿ.ಮು. ಹರೀಶ್ ಮಾತನಾಡಿದರು. ಬಳ್ಳಿ ಬಳಗ ಸುಸ್ಥಿರ ಕೃಷಿಕರ ವೇದಿಕೆಯ ಬಾಬುರೆಡ್ಡಿ, ಗ್ರಾಮ ಸಹಾಯಕ ಶಿವಶಂಕರ, ಆಶಾ ಕಾರ್ಯಕರ್ತೆ ಮುನಿರತ್ನಮ್ಮ, ಗ್ರಾಮದ ಯುವಕರಾದ ಅಮರೇಶ್, ನಂದೀಶ್, ದೇವಪ್ಪ, ಮುನಿಬಸಪ್ಪ, ಅಶೋಕ, ಅರುಣ, ಸರಸ್ವತಮ್ಮಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.