ಚಿಕ್ಕಬಳ್ಳಾಪುರ: ತಾಲ್ಲೂಕಿನ ಕಣಿವೆ ನಾರಾಯಣಪುರ ಬಳಿಯ ಲೇಪಾಕ್ಷಿ ಕ್ರಷರ್‌ನಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಪಶ್ಚಿಮ ಬಂಗಾಳದ ಕಾರ್ಮಿಕ ಎಸ್.ಕೆ.ಮಣಿಕ್ (19) ಮೃತಪಟ್ಟಿದ್ದಾರೆ.
ಕ್ರಷರ್‌ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ. ಈ ಕಾರಣದಿಂದ ಕಾರ್ಮಿಕ ಮೃತಪಟ್ಟಿದ್ದಾನೆ. ಜೆಸಿಬಿ ಆಪರೇಟರ್ ಹಾಗೂ ಕ್ರಷರ್ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಕಣಿವೆ ನಾರಾಯಣಪುರ ಆರ್‌ಎನ್‌ಆರ್ ಸ್ಟೋನ್ ಕ್ರಷರ್ ಕಾರ್ಮಿಕ ಪಶ್ಚಿಮ ಬಂಗಾಳದ ಬಸಿರುಲ್ ಶೇಖ್ ನಂದಿಗಿರಿಧಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಘಟನೆ ವಿವರ: ನಮ್ಮ ಗ್ರಾಮದ ಹಾಗೂ ಪಕ್ಕದ ಮನೆಯ ವಾಸಿ ಎಸ್.ಕೆ.ಮಣಿಕ್ 1 ತಿಂಗಳಿಂದ ಲೇಪಾಕ್ಷಿ ಕ್ರಷರ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ನಾನು ಈ ಕ್ರಷರ್ ಪಕ್ಕದಲ್ಲಿರುವ ಆರ್‌ಎನ್‌ಆರ್ ಸ್ಟೋನ್ ಕ್ರಷರ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದೇನೆ.ಕೆಲಸದ ನಂತರ ರಾತ್ರಿ ಒಂದೇ ನಾವು ಕಡೆ ಮಲಗುತ್ತಿದ್ದೆವು.
ಬುಧವಾರ ಬೆಳಿಗ್ಗೆ 10.45ರ ಸಮಯದಲ್ಲಿ ಲೇಪಾಕ್ಷಿ ಕ್ರಷರ್‌ನಲ್ಲಿ ಕ್ಲಿನಿಂಗ್ ಸಲುವಾಗಿ ಜೆಸಿಬಿ ಚಾಲಕ ಎಂ.ಸ್ಯಾಂಡ್ ಅನ್ನು ಟ್ಯಾಂಕ್‌ಗೆ ಹಾಕುತ್ತಿದ್ದರು. ಎಂ.ಸ್ಯಾಂಡ್ಸರಿಯಾಗಿ ಸ್ಕ್ರೀನ್ ಮೂಲಕ ಕ್ಲಿನಿಂಗ್ ಆಗುತ್ತಿರಲಿಲ್ಲ. ಆಗ ಅಲ್ಲಿಯೇ ಇದ್ದ ಮಣಿಕ್ ಟ್ಯಾಂಕ್‌ನಲ್ಲಿ ಇಳಿದರು. ಇದನ್ನು ಗಮನಿಸದೆ ಚಾಲಕ ನಿರ್ಲಕ್ಷ್ಯದಿಂದ ಜೆಸಿಬಿ ಮೂಲಕ ಟ್ಯಾಂಕ್‌ಗೆ ಎಂ.ಸ್ಯಾಂಡ್ ಹಾಕಿದರು. ಸ್ವಲ್ಪ ಸಮಯದ ಬಳಿಕವೂ ಕ್ಲಿನಿಂಗ್ ಆಗಲಿಲ್ಲ. ಮೆಷಿನ್ ಆಪರೇಟರ್ ಸಬಿರುಲ್ ಶೇಖ್, ಮಣಿಕ್ ಟ್ಯಾಂಕ್‌ನಲ್ಲಿ ಇರುವುದನ್ನು ನೋಡಿ ಕೂಡಲೇ ಓಡಿ ಹೋಗಿ ಯಂತ್ರಗಳನ್ನು ಬಂದ್ ಮಾಡಿದರು. ಅಲ್ಲಿ ಕೆಲಸ ಮಾಡುತ್ತಿದ್ದ ಮುಬಾರಕ್ ಹಾಗೂ ಪಕ್ಕದ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ನಾನು ಓಡಿ ಹೋಗಿ ಟ್ಯಾಂಕ್‌ನಲ್ಲಿದ್ದ ಎಂ.ಸ್ಯಾಂಡನ್ನು ಜೆಸಿಬಿ ಮೂಲಕ ಹೊರತೆಗೆದು ಮಣಿಕ್ ಅವರನ್ನು ಹೊರ ತಂದೆವು. ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋದಾಗ ವೈದ್ಯರು ಮಣಿಕ್ ಮೃತಪಟ್ಟಿರುವುದಾಗಿ ತಿಳಿಸಿದರು ಎಂದು ಬಸಿರುಲ್ ಶೇಖ್ ದೂರಿನಲ್ಲಿ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.