ಚಿಕ್ಕಬಳ್ಳಾಪುರ: ‘ಒಲ್ಲದ ಮನಸ್ಸಿನಿಂದ ಕಾರ್ಯಕ್ರಮ ಮಾಡಿದರೆ ಯಶಸ್ವಿ ಆಗುವುದಿಲ್ಲ. ಯಾವುದೇ ಕಾರ್ಯಕ್ರಮಗಳನ್ನು ಆಸಕ್ತಿ, ಶ್ರದ್ಧೆಯಿಂದ ಮಾಡಬೇಕು’ ಎಂದು ಜಿಲ್ಲಾ ಕೌಶಲ ಅಭಿವೃದ್ಧಿ ಇಲಾಖೆ ಅಭಿಯಾನ ವ್ಯವಸ್ಥಾಪಕ ವೆಂಕಟಾಚಪತಿ ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಮತ್ತು ಐಶ್ವರ್ಯ ಕಲಾನಿಕೇತನ ಸಂಸ್ಥೆ ಆಶ್ರಯದಲ್ಲಿ ನಗರದ ಕೃಷ್ಣ ರುಕ್ಮಿಣಿ ಪದವಿ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವರಂಗಭೂಮಿ ದಿನಚಾರಣೆ ಉದ್ಘಾಟಿಸಿ ಮಾತನಾಡಿದರು.
‘ನಾವೆಲ್ಲರೂ ರೈತರ ಮಕ್ಕಳೇ. ನಾನು ಸರ್ಕಾರಿ ಕೆಲಸದಲ್ಲಿದ್ದರೂ ವ್ಯವಸಾಯದ ಬಗ್ಗೆ ಒಲವು ಇದೆ. ನಾವು ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎನ್ನುವ ಗುರಿಯನ್ನು ವಿದ್ಯಾರ್ಥಿಗಳು ಹೊಂದಬೇಕು. ಆಸಕ್ತ ಕ್ಷೇತ್ರದಲ್ಲಿ ಸಾಧಿಸಬೇಕು ಎನ್ನುವ ಗುರಿ ಇಟ್ಟುಕೊಳ್ಳಬೇಕು. ಓದಿನ ಬಗ್ಗೆ ಹೆಚ್ಚು ಗಮನ ನೀಡಬೇಕು’ ಎಂದು ಸಲಹೆ ನೀಡಿದರು.
ಐಶ್ವರ್ಯ ಕಲಾನಿಕೇತನ ಸಂಸ್ಥೆ ವ್ಯವಸ್ಥಾಪಕ ಪ್ರಸನ್ನಕುಮಾರ್ ಮಾತನಾಡಿ, ಇಂದಿನ ದಿನಗಳಲ್ಲಿ ಹಣ ಮಾಡಬೇಕು ಎನ್ನುವುದಷ್ಟೇ ಎಲ್ಲರ ಆಲೋಚನೆ ಆಗಿದೆ. ಹಳ್ಳಿಯಿಂದ ಬಂದು ನಗರಗಳಲ್ಲಿ ನೆಲೆಸಿರುವವರು ಒಂದಲ್ಲಾ ಒಂದು ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ ಎಂದು ಹೇಳಿದರು.
ಕಲೆ ಎಲ್ಲರನ್ನೂ ಕರೆಯುತ್ತದೆ. ಆದರೆ ಕೆಲವರನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಎಲ್ಲರೂ ನಟರಾಗಲು ಸಾಧ್ಯವಿಲ್ಲ. ಕೊನೆಯ ಪಕ್ಷ ಪ್ರೇಕ್ಷಕರಾಗಿ ಉಳಿದರೂ ರಂಗಭೂಮಿ ಉಳಿಯುತ್ತದೆ ಎಂದರು.
ಯಾವುದೇ ಕಾರಣಕ್ಕೂ ರಂಗಭೂಮಿಯ ಬಗ್ಗೆ ಆಸಕ್ತಿ ಕಳೆದುಕೊಳ್ಳಬಾರದು. ಶಾಲೆಗಳಲ್ಲಿನ ಪಾಠಗಳನ್ನೇ ನಾಟಕ ರೂಪಕ್ಕೆ ಇಳಿಸಿ ಪ್ರದರ್ಶಿಸಲಾಗುತ್ತಿದೆ ಎಂದರು.
ಜಿಲ್ಲಾ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ಜಿ.ವಿ.ವಿಶ್ವನಾಥ್ ಮಾತನಾಡಿ, ಮನಸ್ಸು ಅರಳಲು ರಂಗಕಲೆ ಅಗತ್ಯ. ರಂಗಭೂಮಿ ದಿನಾಚರಣೆ ಎಲ್ಲಿ ಮಾಡಬೇಕು ಎನ್ನುವ ಆಲೋಚನೆಯಲ್ಲಿ ಇದ್ದೆವು. ಅಂತಿಮವಾಗಿ ಶಾಲಾ ಕಾಲೇಜಿನಲ್ಲಿಯೇ ಮಾಡೋಣ ಎಂದು ತೀರ್ಮಾನಿಸಿದೆವು ಎಂದರು.
ಕೃಷ್ಣ ರುಕ್ಮಿಣಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಪ್ರವೀಣ್ ಅಧ್ಯಕ್ಷತೆವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಅಮೃತ್ ಕುಮಾರ್ ಹಾಜರಿದ್ದರು. ಕಾರ್ಯಕ್ರಮದ ನಂತರ ಕಲಾವಿದರನ್ನು ಗೌರವಿಸಲಾಯಿತು. ‘ಸನ್ಮಾನ ಸುಖ’ ಹಾಸ್ಯ ನಾಟಕ ಪ್ರದರ್ಶನ ಜರುಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.