ಶಿಡ್ಲಘಟ್ಟ: ’ವೈವಿಧ್ಯತೆಯಲ್ಲಿ ಏಕತೆ’ ಸಂದೇಶ ಸಾರುತ್ತ ಭಾರತದ ದಕ್ಷಿಣ ತುದಿಯಿಂದ ಉತ್ತರದ ನೇಪಾಳ ಮತ್ತು ಭೂತಾನ್‌ಗಳವರೆಗೆ ಪಾದಯಾತ್ರೆ ಕೈಗೊಳ್ಳುವ ಗುರಿ ಹೊಂದಿದ ಕೇರಳ ಮೂಲದ ಕೆ.ಪಿ. ಸಿವಿನ್ ಅವರಿಗೆ ಶುಕ್ರವಾರ ಶಿಡ್ಲಘಟ್ಟದಲ್ಲಿ ಆತಿಥ್ಯ ನೀಡಲಾಯಿತು.
ಸೆ. 6ರಂದು ಕೇರಳದ ಕಲ್ಲಿಕೋಟೆಯಿಂದ ಪಾದಯಾತ್ರೆ ಆರಂಭಿಸಿರುವ 24 ವರ್ಷದ ಸಿವಿನ್ ಮೈಸೂರು, ಚನ್ನಪಟ್ಟಣ, ರಾಮನಗರ, ಬೆಂಗಳೂರು ಮೂಲಕ ಚಿಕ್ಕಬಳ್ಳಾಪುರ ತಲುಪಿದ್ದಾರೆ. ನಿತ್ಯ ಸರಾಸರಿ 30 ಕಿ.ಮೀ ಕಾಲ್ನಡಿಗೆ ಮಾಡುವ ಅವರು ಬಿಸಿಲು ಇದ್ದರೆ ಮಾತ್ರ ಮಧ್ಯಾಹ್ನ 12ರಿಂದ 3ಗಂಟೆಯವರೆಗೆ ವಿಶ್ರಾಂತಿ ಪಡೆಯುತ್ತಾರೆ. ರಾತ್ರಿ 9ರವರೆಗೆ ಪಾದಯಾತ್ರೆ ನಡೆಯುತ್ತದೆ.
ಪೆಟ್ರೋಲ್ ಬಂಕ್ ಆಶ್ರಯ: ‘ಕಾಲ್ನಡಿಗೆ ಮುಗಿದು ವಿಶ್ರಾಂತಿಗಾಗಿ ಪೆಟ್ರೋಲ್ ಬಂಕ್‌ಗಳಲ್ಲಿ ಟೆಂಟ್ ಹಾಕಿ ಮಲಗುತ್ತೇನೆ. ಶೌಚಾಲಯ ವ್ಯವಸ್ಥೆ ಇರುವುದರಿಂದ, ರಾತ್ರಿ ವೇಳೆ ತೆರೆದಿರುವುದರಿಂದ ಮತ್ತು ರಸ್ತೆ ಬದಿಯಲ್ಲಿ ಇರುವುದರಿಂದ ಪೆಟ್ರೋಲ್ ಬಂಕ್ ಒಳ್ಳೆಯ ಆಶ್ರಯ ತಾಣ‘ ಎನ್ನುತ್ತಾರೆ ಸಿವಿನ್.
ಸಾಮಾಜಿಕ ತಾಣದಲ್ಲಿ (ಇನ್ ಸ್ಟಾಗ್ರಾಂ) ಭೇಟಿ ನೀಡಿದ ಸ್ಥಳದ ಚಿತ್ರಗಳನ್ನು ಹಾಕುತ್ತಿರುತ್ತೇನೆ. ಅಲ್ಲಿ ಫಾಲೋವರ್ಸ್ ಅನೇಕ ಮಂದಿಯಿದ್ದಾರೆ. ಈ ಹಿಂದೆ ಮಾರ್ಚ್ ತಿಂಗಳಿನಲ್ಲಿ ಮಾಡಿರುವ 3300 ಕಿ.ಮೀ ಪಾದಯಾತ್ರೆಯಿಂದಲೂ ಹಲವು ಮಂದಿ ಸ್ನೇಹಿತರು ಲಭಿಸಿದ್ದಾರೆ. ದಾರಿಯುದ್ದಕ್ಕೂ ಸ್ವಯಂಪ್ರೇರಿತರಾಗಿ ಈ ರೀತಿಯ ಸ್ನೇಹಿತರು ಊಟ, ತಿಂಡಿ, ಹಣ ಕೊಟ್ಟು, ಆತಿಥ್ಯ ನೀಡಿ ಸಹಕರಿಸುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸುತ್ತಾರೆ ಅವರು.
ಕನ್ನಡ ಮತ್ತು ಬೆಂಗಳೂರಿನ ನಂಟು: ‘ಡಿಗ್ರಿ ಓದಿದ ನಾನು ಯಲಹಂಕದಲ್ಲಿ ಕೆಲಸ ಮಾಡುತ್ತಿದ್ದೆ. ಹಾಗಾಗಿ ಕನ್ನಡ ಕಲಿತಿರುವೆ. ಇಬ್ಬರು ಸಹೋದರಿಯರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಜನ ತುಂಬಾ ಒಳ್ಳೆಯವರು ಎನ್ನುತ್ತಾರೆ’ ಸಿವಿನ್.
3300 ಕಿ.ಮೀ ಪಾದಯಾತ್ರೆ: ಕಳೆದ ಮಾರ್ಚ್ 6 ರಂದು ಕೇರಳದಿಂದ ಜಮ್ಮು ಕಾಶ್ಮೀರ, ಲೇ ಲಡಾಕ್ ವರೆಗೂ 3300 ಕಿ.ಮೀ ಪಾದಯಾತ್ರೆ ಮಾಡಿದ್ದೆ. ದೇಶ ಸುತ್ತುವ ಹಂಬಲ, ಆದರೆ ಬೈಕ್ ನಲ್ಲಿ ಹೋಗಲು ಹಣ ಸಾಲದೆ ನಡೆದೇ ಹೋಗಲು ತೀರ್ಮಾನಿಸಿದೆ. ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಎರಡು ತಿಂಗಳ ರಜೆ ಕೇಳಿದೆ. ನಡೆದು ದೇಶ ಸುತ್ತುವ ನನ್ನ ಹಂಬಲವನ್ನು ಕಂಡು ಹುಚ್ಚು ಹಿಡಿದಿದೆಯೇ ಎಂಬಂತೆ ನೋಡಿದರು. ಸಂಬಳವಿಲ್ಲದ ರಜೆ ಕೊಟ್ಟರು. ಕೈಯಲ್ಲಿದ್ದ ಹಿಂದಿನ ತಿಂಗಳ ಸಂಬಳ ₹ 13 ಸಾವಿರ ಹಿಡಿದು, ಪೋಷಕರ ಹಾರೈಕೆ ಪಡೆದು ನಡಿಗೆ ಪ್ರಾರಂಭಿಸಿದೆ ಎಂದು
ವಿವರಿಸಿದರು.
‘ನಾಲ್ಕು ತಿಂಗಳಲ್ಲಿ ಆ ಯಾತ್ರೆ ಮುಗಿಸಿದೆ. ಆಗ ಪೊಲೀಸರು, ಸೈನಿಕರು ಸೇರಿದಂತೆ ಅನೇಕರು ಬೆನ್ನುತಟ್ಟಿದರು, ನೆರವು ನೀಡಿದರು, ಗೆಳೆಯರಾದರು. ನನ್ನ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿ ಪತ್ರ ಬರೆದಿದ್ದರು’ ಎಂದು ಸ್ಮರಿಸಿದರು.
ಮಾಸ್ಕ್ ಮಾರಿ ಹಣ ಸಂಪಾದನೆ: ’ಈ ಬಾರಿ ಮೂರು ರಾಷ್ಟ್ರಗಳ ಪಾದಯಾತ್ರೆ ಕೈಗೊಂಡಾಗ ನನ್ನ ಬಳಿ ಹಣವಿರಲಿಲ್ಲ. ಅದಕ್ಕಾಗಿ ಸಗಟು ದರದಲ್ಲಿ ಮಾಸ್ಕ್ ಖರೀದಿಸಿ ದಾರಿಯುದ್ದಕ್ಕೂ ಅದನ್ನು ಮಾರಿಕೊಂಡು ‘ವೈವಿಧ್ಯತೆಯಲ್ಲಿ ಏಕತೆ’ ಸಂದೇಶ ಸಾರುತ್ತಾ ಹೋಗುತ್ತಿರುವೆ.
ಜನರು ನನ್ನ ಉದ್ದೇಶವನ್ನು ಮೆಚ್ಚಿ ಮಾಸ್ಕ್ ಖರೀದಿಸುತ್ತಿದ್ದಾರೆ. ಮಾಸ್ಕ್ ಇರುವ ಚೀಲವನ್ನು ಎಳೆದುಕೊಂಡು ಹೋಗಲು ಟ್ರಾಲಿ ಮಾಡಿಕೊಂಡಿದ್ದೆ. ಅದು ಹಾಳಾಗಿದ್ದರಿಂದ ಬೆಂಗಳೂರಿನಲ್ಲಿಯೇ ಬಿಟ್ಟು, ಮಾಸ್ಕ್ ಗಳನ್ನು ಬ್ಯಾಗ್ ನಲ್ಲಿ ತುಂಬಿಕೊಂಡು ಹೋಗುತ್ತಿರುವೆ. 15 ಕೆಜಿ ಬ್ಯಾಗ್ ಈಗ ನನ್ನ ಸಂಗಾತಿ’ ಎನ್ನುತ್ತಾರೆ ಅವರು.
ನನ್ನನ್ನು ಸಾಮಾಜಿಕ ತಾಣದಲ್ಲಿ (ಇನ್‌ಸ್ಟಾಗ್ರಾಂ) ಗಮನಿಸುತ್ತಿದ್ದ ಶಿಡ್ಲಘಟ್ಟದ ರಾಕೇಶ್ ಮತ್ತು ಗೆಳೆಯರು ಚಿಕ್ಕಬಳ್ಳಾಪುರದಿಂದ ಶಿಡ್ಲಘಟ್ಟಕ್ಕೆ ಶುಕ್ರವಾರ ಸಂಜೆ ಕರೆದುಕೊಂಡು ಬಂದು ಇಲ್ಲಿನ ವಿಶೇಷ ತಿನಿಸುಗಳ ರುಚಿ ತೋರಿಸಿದರು. ಈ ರೀತಿಯ ಸಹೃದಯಿಗಳನ್ನು ಭೇಟಿ ಮಾಡುವ ಸುಯೋಗ ಈ ಪಾದಯಾತ್ರೆಯಿಂದ ಲಭಿಸಿದೆ ಎನ್ನುವ ಖುಷಿ ಸಿವಿನ್ ಅವರದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.