ADVERTISEMENT

ವಡೆಯರಮಠ ಎನ್‌ಕೌಂಟರ್‌ಗೆ 10 ವರ್ಷ

‘ಗುಂಡು ತಾಗಿ ಹೆಂಚು ಬೀಳೋವಾಗ ನಾನು ಓಡಿಹೋದೆ’

ಎಚ್‌.ಎಸ್‌.ಸತೀಶ್‌ ಜೈನ್‌
Published 12 ಮೇ 2017, 11:06 IST
Last Updated 12 ಮೇ 2017, 11:06 IST
ಬಾಳೆಹೊನ್ನೂರು: ‘ಅವತ್ತು ಬೆಳಿಗ್ಗೆ ಮನೆ ಮಾಡಿಗೆ ಗುಂಡು ಬಿದ್ದು ಹೆಂಚುಗಳು ಒಂದೇ ಸಮನೆ ಕೆಳಗೆ ಬೀಳುತ್ತಿದ್ದವು... ಏನಾಗುತ್ತಿದೆ ಅನ್ನೋದು ಗೊತ್ತಾಗಲಿಲ್ಲ. ನಾನು ಭಯದಿಂದ ಮನೆಯ ಹೊರಗೆ ಓಡಿ ಹೋದೆ. ಆಮೇಲೆ ನೋಡಿದರೆ ಅಪ್ಪ, ಅಮ್ಮ, ಅಣ್ಣ ಎಲ್ಲಾ ಸತ್ತು ಹೋಗಿದ್ರು...’
 
2007ರ ಏಪ್ರಿಲ್‌ 10ರಂದು ಎಎನ್‌ಎಫ್‌ ಹಾಗೂ ನಕ್ಸಲರ ನಡುವೆ ವಡೆಯರಮಠ ಎಂಬಲ್ಲಿ ನಡೆದ ಎನ್ ಕೌಂಟರ್ ವೇಳೆ ಅದೃಷ್ಟವಶಾತ್ ಬದುಕಿ ಉಳಿದ ಪ್ರಶಾಂತ್  ‘ಪ್ರಜಾವಾಣಿ ’ಯೊಂದಿಗೆ ಅಂದಿನ ಘಟನೆಯನ್ನು ನೆನಪು ಮಾಡಿಕೊಂಡಿದ್ದು ಹೀಗೆ.
 
‘ಆಗ ನಾನು ಜಯಪುರ ಗಿರಿಜನ ಆಶ್ರಮ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ರಜೆ ಇದ್ದುದರಿಂದ ಮನೆಗೆ ಬಂದಿದ್ದೆ. ಪೊಲೀಸರು ಎನ್‌ಕೌಂಟರ್ ನಡೆಸಿ ಅಪ್ಪ, ಅಮ್ಮನನ್ನು ಸಾಯಿಸಿದರು. ಅದಾದ ಮೇಲೆ ಯಾರೋ ಅಧಿಕಾರಿಗಳು ಬಂದು ಹೋದ್ರು.  
 
ಅಪ್ಪ, ಅಮ್ಮ ಸತ್ತ ಮೇಲೆ ನನಗೆ ಬದುಕು ನಡೆಸೋದು ಕಷ್ಟ ಆಯ್ತು. ನನ್ನ ಕೈಲಿ ಬೇಸಾಯ ಮಾಡೋಕೆ ಆಗ್ತಿರಲಿಲ್ಲ.  ಮನೆ ನೋಡಿಕೊಳ್ಳೋಕೂ ಯಾರೂ ಇರಲಿಲ್ಲ.  ನನ್ನೊಂದಿಗಿದ್ದ ಸಣ್ಣ ತಮ್ಮನನ್ನು ಸಾಕುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಆದ್ರೆ ಅಂದಿನಿಂದಲೂ ಚಿಕ್ಕಪ್ಪ ಕೌಡೇಗೌಡ್ಲು ಹಾಗೂ ಚಿಕ್ಕಮ್ಮ ಸುಶೀಲಾ ಅವರು ನಮ್ಮನ್ನೆಲ್ಲಾ ನೋಡ್ಕೊಳ್ತಿದ್ದಾರೆ. ನಾನು ಅವರ ಮನೆಯಲ್ಲೇ ಜೀವನ ನಡೆಸುತ್ತಿದ್ದೇನೆ’ ಎಂದರು.  
 
ಎನ್‌ಕೌಂಟರ್ ನಡೆದ ವೇಳೆ ಪ್ರಶಾಂತ್‌ಗೆ 13 ವರ್ಷ. ಈಗ ಅವರಿಗೆ 23 ವರ್ಷ ತುಂಬಿದೆ. ಹುಟ್ಟೂರನ್ನು ಯಾವುದೇ ಕಾರಣಕ್ಕೂ ಬಿಟ್ಟು ಬರುವುದಿಲ್ಲ ಎಂಬ ಧೋರಣೆಗೆ ಕಟ್ಟುಬಿದ್ದಿರುವ ಅವರು, ತಮ್ಮ ಊರಿಗೆ ಸರ್ಕಾರ ಮೂಲ ಸೌಕರ್ಯ ಕಲ್ಪಿಸಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು.
 
‘ಚಿಕ್ಕಪ್ಪ ಅವರಿಗೆ ಸುಮಾರು 90 ವರ್ಷ ಆಗಿದೆ. ಆರೋಗ್ಯ ಹದಗೆಟ್ಟರೆ ಆಸ್ಪತ್ರೆಗೆ ಕರ್ಕೊಂಡು ಹೋಗೋಕೆ ಸರಿಯಾದ ರಸ್ತೆ, ವಾಹನ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ಬಾಡಿಗೆ ವಾಹನಗಳು ಈ ಭಾಗಕ್ಕೆ ಬರಲು ಹಿಂದೇಟು ಹಾಕುವುದರಿಂದ, ಪೇಟೆಯಿಂದ ಸಾಮಾನುಗಳನ್ನು ತಲೆ ಮೇಲೆ ಹೊತ್ತು ತರಬೇಕಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದ್ರೂ ನಾವು ನಮ್ಮ ಮನೆಯಲ್ಲಿ ವಿದ್ಯುತ್‌ ನೋಡಿಲ್ಲ. ಈಗಲಾದ್ರೂ ಸರ್ಕಾರ ಮೂಲ ಸೌಕರ್ಯ ಕಲ್ಪಿಸಬೇಕು’ ಎಂದು  ಆಗ್ರಹಿಸಿದರು.
****
ನೆರವಿಗೆ ಮುಂದಾದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ:
‘ನನ್ನ ಚಿಕ್ಕಪ್ಪ ಬಾಲ್ಯ ಕಳೆದ ಮನೆ ಈಗ ನೆಲಸಮವಾಗಿದೆ. ಭತ್ತದ ಗದ್ದೆ ಸಾಗುವಳಿ ಕಾಣದೆ ಸಂಪೂರ್ಣ ಜಡ್ಡುಗಟ್ಟಿ ಕಾಡು ಬೆಳೆದಿದೆ. ಗುಡ್ಡಗಾಡಿ  ನಿಂದ ಆವೃತ್ತವಾದ ಅಡಿಕೆ ತೋಟಕ್ಕೆ ಆರೈಕೆ ಇಲ್ಲದೆ ಫಸಲು ನೆಲಕಚ್ಚಿದೆ.

ಪ್ರಶಾಂತ ಅವರ ಸಂಕಷ್ಟ ಕಂಡ ಉಡುಪಿ ಪೇಜಾವರ ಸ್ವಾಮೀಜಿ, ಅವರ ಜಾಗದಲ್ಲಿ ಸುಸಜ್ಚಿತ ಮನೆ ನಿರ್ಮಿಸುವ ಭರವಸೆ ನೀಡಿದ್ದಾರೆ. ಅವರೊಂದಿಗೆ ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಸಹ ಕೈ ಜೋಡಿಸುವುದಾಗಿ ತಿಳಿಸಿದ್ದಾರೆ.

ಪ್ರಶಾಂತ್‌ ಅವರನ್ನು ಸಲುಹಿದ ಚಿಕ್ಕಪ್ಪನ ಮಗ ಪರಮೇಶ್ವರ್‌ ಕೂಡ ಅದೇ ಎನ್‌ಕೌಂಟರ್‌ಗೆ ಬಲಿಯಾಗಿದ್ದರು. ಪ್ರಶಾಂತ್ ಅವರ ತಂದೆ ರಾಮೇಗೌಡ್ಲು, ತಾಯಿ ಕಾವೇರಿ, ಸುಂದರೇಶ್ ಹಾಗೂ ನಕ್ಸಲ್ ಗೌತಮ್ ಪೊಲೀಸ್‌ ಗುಂಡಿಗೆ ಬಲಿಯಾಗಿದ್ದರು.

ಉಡುಪಿಯ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ  ಅವರು ಪ್ರಶಾಂತ್‌ ಹಾಗೂ ಶೇಷಯ್ಯ ಕುಟುಂಬವನ್ನು ದತ್ತು ಪಡೆದು ಸೌಲಭ್ಯ ಕಲ್ಪಿಸಲು ಮುಂದಾಗಿದ್ದಾರೆ.
****
ಮಾನವೀಯ ನೆರವು
ನಕ್ಸಲ್ ದಾಳಿಯಲ್ಲಿ ಮೃತರಾದ ಶೇಷಯ್ಯ ಕುಟುಂಬಕ್ಕೆ ಹಾಗೂ ಪೊಲೀಸ್ ದಾಳಿಯಲ್ಲಿ ಅಪ್ಪ- ಅಮ್ಮನನ್ನು ಕಳೆದುಕೊಂಡ ಪ್ರಶಾಂತ್ ಅವರಿಗೆ ಯಾವುದೇ ರೀತಿಯ ಕಹಿ ನೆನಪು ಉಳಿಯದಂತೆ, ಕೊರತೆ ಕಾಡದಂತೆ ಸೌಲಭ್ಯಗಳನ್ನೂ ನೀಡಲು ಉಡುಪಿ ಮಠ ಮುಂದೆ ಬಂದಿದೆ ಎಂದು ಪ್ರಜಾಪ್ರಭುತ್ವ ಉಳಿಸಿ ವೇದಿಕೆ ನಾಗೇಶ್ ಅಂಗೀರಸ ತಿಳಿಸಿದ್ದಾರೆ.

 

ADVERTISEMENT
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.