ಬೀರೂರು: ಸಮೀಪದ ಹೊಗರೇಹಳ್ಳಿ ಗ್ರಾಮದಲ್ಲಿ ಜೋಳದ ಚಿಗುರು ತಿಂದು 23 ಹಸುಗಳು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ಗ್ರಾಮದ ರಂಗಪ್ಪ ಎಂಬುವರ ಮಗ ರವಿ ಎಂಬುವರು ಹೈನುಗಾರಿಕೆ ನಡೆಸುತ್ತಿದ್ದು, 40 ಹಸುಗಳನ್ನು ಸಾಕಿದ್ದರು. ಎಂದಿನಂತೆ ಬೆಳಿಗ್ಗೆ ಹಸುಗಳನ್ನು ಮೇಯಲು ಕರೆದುಕೊಂಡು ಹೋಗಿದ್ದಾರೆ. ಆ ಸಂದರ್ಭದಲ್ಲಿ ಜಮೀನಿನಲ್ಲಿ ಚಿಗುರು ಜೋಳದ ಕುಡಿಗಳನ್ನು ತಿಂದ ಹಸುಗಳು ಸಮೀಪದ ಕೆರೆಯಲ್ಲಿ ನೀರು ಕುಡಿದಿವೆ. ಚಿಗುರು ತಿಂದಿದ್ದರಿಂದ ಉಸಿರಾಡಲು ಹಾಗೂ ಮೆಲುಕು ಹಾಕಲು ಸಾಧ್ಯವಾಗದ ಕಾರಣ 23 ಜಾನುವಾರುಗಳು ಮನೆಗೆ ಬರುವಾಗ ಒಂದೊಂದೇ ನೆಲಕ್ಕುರುಳಿ ಜೀವ ಬಿಟ್ಟಿವೆ. 3 ಹಸುಗಳ ಸ್ಥಿತಿ ಚಿಂತಾಜನಕವಾಗಿದೆ.
ಜಾನುವಾರುಗಳ ಸಾಕಾಣಿಕೆಯಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ಸ್ಥಳಕ್ಕೆ ಬೀರೂರು ಪಶು ವೈದ್ಯಾಧಿಕಾರಿ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಜೋಳದ ಚಿಗುರು ಜಾನುವಾರುಗಳಿಗೆ ಹಾನಿಕರ, ಇದು ಸಾಮಾನ್ಯವಾಗಿ ರೈತರಿಗೆ ತಿಳಿದಿರುತ್ತದೆ. ನಿರ್ಲಕ್ಷ್ಯ ವಹಿಸಿದರೆ ಅವುಗಳ ಪ್ರಾಣಕ್ಕೇ ಕುತ್ತು ಬರುತ್ತದೆ. ಯಾವ ಕಾರಣದಿಂದ ಹಸುಗಳು ಮೃತಪಟ್ಟಿವೆ ಎನ್ನುವುದರ ಬಗ್ಗೆ ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ ದೃಢೀಕರಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.