ಕಳಸ: ಇಲ್ಲಿನ ಕೃಷಿ ಪತ್ತಿನ ಸಹಕಾರ ಸಂಘವು ಕಳೆದ 2023-24ನೇ ಸಾಲಿನಲ್ಲಿ ₹33 ಲಕ್ಷ ನಿವ್ವಳ ಲಾಭ ಗಳಿಸಿ, ‘ಎ’ ಶ್ರೇಣಿಯಲ್ಲಿ ಮುಂದುವರಿದಿದೆ ಎಂದು ಬ್ಯಾಂಕಿನ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ ತಿಳಿಸಿದರು.
ಸದ್ಯ ಸಂಘದಲ್ಲಿ ₹51 ಕೋಟಿ ಠೇವಣಿ ಇದ್ದು, ಕೃಷಿಗೆ ಪೂರಕವಾದ ವ್ಯಾಪಾರದಿಂದ ₹89 ಲಕ್ಷ ಲಾಭ ಬಂದಿದೆ ಎಂದು ಅವರು ವಾರ್ಷಿಕ ಸಭೆಯಲ್ಲಿ ತಿಳಿಸಿದರು.
‘ಸಂಘವು ₹14.5 ಕೋಟಿ ವೆಚ್ಚದಲ್ಲಿ ಕಚಗಾನೆಯಲ್ಲಿ ಕಾಫಿ ಸಂಸ್ಕರಣಾ ಘಟಕ, ಗೋದಾಮು, ಅಡಿಕೆ ಸಂಸ್ಕರಣಾ ಘಟಕ ನಿರ್ಮಿಸಿದೆ. ಕಳೆದ ವರ್ಷ
3 ಲಕ್ಷ ಕ್ವಿಂಟಲ್ ಅಡಿಕೆ ಸಂಸ್ಕರಣೆ ಮಾಡಲಾಗಿದೆ. ಈ ಸಾಲಿನಲ್ಲೂ ಬೆಳೆಗಾರರು ಇದರ ಅನುಕೂಲ ಪಡೆಯಬೇಕು. ಅಡಿಕೆ, ಕಾಳುಮೆಣಸನ್ನು ಕ್ಯಾಂಪ್ಕೋ ಸಂಸ್ಥೆ ಮೂಲಕ ಮಾರಾಟ ಮಾಡಿ ಗರಿಷ್ಠ ಬೆಲೆ ಪಡೆಯಬೇಕು’ ಎಂದು ಅವರು ಸದಸ್ಯರಲ್ಲಿ ಮನವಿ ಮಾಡಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷೆ ಆಶಾಲತಾ ಜೈನ್, ನಿರ್ದೇಶಕರಾದ ಸತೀಶ್ ಚಂದ್ರ, ಅನಿಲ್ ಗ್ಯಾವಿನ್ ಡಿಸೋಜ, ರವಿಕುಮಾರ್, ಶ್ರೀಪಾಲಯ್ಯ, ರಾಜೇಂದ್ರ, ಶಕುಂತಲ, ಕೃಷ್ಣ, ಕೃಷ್ಣಪ್ಪ, ಕೃಷ್ಣ.ಕೆ., ಅನಸೂಯಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.