ADVERTISEMENT

ತುಮಕೂರು: 50 ಮನೆಗಳಿಗಿಲ್ಲ ವಿದ್ಯುತ್ ಭಾಗ್ಯ

ಕೊಪ್ಪ ವಿಭಾಗ ವ್ಯಾಪ್ತಿಯ ಜನಸಂಪರ್ಕ ಸಭೆಯಲ್ಲಿ ಎಂಜಿನಿಯರ್ ಮಾಹಿತಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2024, 15:43 IST
Last Updated 8 ಅಕ್ಟೋಬರ್ 2024, 15:43 IST
ಕೊಪ್ಪ ಮೆಸ್ಕಾಂ ವಿಭಾಗ ಕಚೇರಿಯಲ್ಲಿ ಚಿಕ್ಕಮಗಳೂರು ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ನಡೆಯಿತು
ಕೊಪ್ಪ ಮೆಸ್ಕಾಂ ವಿಭಾಗ ಕಚೇರಿಯಲ್ಲಿ ಚಿಕ್ಕಮಗಳೂರು ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಜನ ಸಂಪರ್ಕ ಸಭೆ ನಡೆಯಿತು   

ಕೊಪ್ಪ: ‘ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲ್ಲೂಕಿನಲ್ಲಿ 50 ಮನೆಗಳಿಗೆ ವಿದ್ಯುತ್ ಇಲ್ಲ, ಈ ಮನೆಗಳು ವನ್ಯಜೀವಿ ವ್ಯಾಪ್ತಿಯಲ್ಲಿ ಬರುತ್ತದೆ. ಅವುಗಳಿಗೆ ಸೋಲಾರ್ ವ್ಯವಸ್ಥೆ ಮಾಡಿಕೊಡಲಾಗುವುದು’ ಎಂದು ಮೆಸ್ಕಾಂ ಎಇ ಸಿದ್ದೇಶ್ ಹೇಳಿದರು.

ಬಾಳಗಡಿಯಲ್ಲಿನ ಮೆಸ್ಕಾಂ ವಿಭಾಗ ಕಚೇರಿಯಲ್ಲಿ ಮಂಗಳವಾರ ಚಿಕ್ಕಮಗಳೂರು ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಗುಡ್ಡೆತೋಟ ಗ್ರಾಮ ಪಂಚಾಯಿತಿ ಸದಸ್ಯ ವಾಸು ಅವರು, ‘ಅಮ್ಮಡ್ಲುವಿನಲ್ಲಿ 4 ಗಿರಿಜನ ಮನೆಗಳಿಗೆ, ಮಾದಲಬೈಲುವಿನಲ್ಲಿ 8 ಗಿರಿಜನ ಮನೆಗಳಿಗೆ ವಿದ್ಯುತ್ ಸಂಪರ್ಕವಿಲ್’' ಎಂಬ ಹೇಳಿಕೆಗೆ ಎಇ ಸಿದ್ದೇಶ್ ಪ್ರತಿಕ್ರಿಯಿಸಿದರು.

‘ಬೆಳಕು ಯೋಜನೆಯಡಿ ಗ್ರಾಮ ಪಂಚಾಯಿತಿ ವತಿಯಿಂದ ಕಳುಹಿಸಿದ ಅರ್ಜಿಗಳಿಗೆ ವಿದ್ಯುತ್ ಸಂಪೂರ್ಕ ಕಲ್ಪಿಸಲಾಗಿದೆ. ಯೋಜನೆ ಮುಗಿದ ಮೇಲೆ ಬಂದ ಅರ್ಜಿ ಮಾತ್ರ ಉಳಿಕೆಯಾಗಿದೆ’ ಎಂದು ಸಿದ್ದೇಶ್ ಹೇಳಿದರು.

ADVERTISEMENT

ನೀಲಗುಳಿ ಪದ್ಮನಾಭ ಮಾತನಾಡಿ, ‘ಸ್ವಾತಂತ್ರ್ಯ ಬಂದು 75ವರ್ಷ ಕಳೆದರೂ, ಇನ್ನೂ ಹಲವು ಮನೆಗಳಿಗೆ ವಿದ್ಯುತ್ ಇಲ್ಲ. ಮೂಲ ಸೌಕರ್ಯ ಒದಗಿಸಲು ಯಾವುದೇ ವನ್ಯಜೀವಿ ಕಾಯ್ದೆ ಅಡ್ಡಿಪಡಿಸುವುದಿಲ್ಲ. ಆದರೆ, ಆದಿವಾಸಿಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಎಇಇ ಸುಧೀರ್ ಪಟೇಲ್ ಮಾತನಾಡಿ, ‘ಜಿಪಿಎಸ್ ಮಾಡಲು ತಡವಾಗುತ್ತಿದೆ, ಆದಷ್ಟು ಬೇಗ ಜಿಪಿಎಸ್ ಮಾಡಿ, ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ವಹಿಸಲಾಗುತ್ತದೆ’ ಎಂದರು.

ಜನಸಂಪರ್ಕ ಸಭೆ ಬಗ್ಗೆ ಪ್ರಚಾರ ಮಾಡಿಲ್ಲ, ಜನ ಸೇರಿಲ್ಲ ಎಂದರೆ ಸಮಸ್ಯೆ ಇಲ್ಲ ಎಂದರ್ಥವಲ್ಲ, ನೀವು ಪ್ರಚಾರ ಮಾಡಿಲ್ಲ ಎಂದರ್ಥ ಎಂದರು. ಇದಕ್ಕೆ ಎಇಇ ಸುಧೀರ್ ಪಟೇಲ್ ಅವರು, ‘ಸುದ್ದಿ ಪತ್ರಿಕೆ ಮೂಲಕ ಪ್ರಚಾರ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳ ಮೂಲಕ ಜನರಿಗೆ ಮಾಹಿತಿ ನೀಡಲಾಗಿದೆ’ ಎಂದು ತಿಳಿಸಿದರು.

ನೀಲಗುಳಿಯ ರೇವಂತ್ ಮಾತನಾಡಿ, ಗ್ರಾಮದ ಗದ್ದೆಯಲ್ಲಿ ಕಬ್ಬಿಣದ ವಿದ್ಯುತ್ ಕಂಬ ಹಾಕಿ 50-60 ವರ್ಷ ಆಗಿದೆ. ಕಾರ್ಮಿಕರು ಪ್ರತಿನಿತ್ಯ ಇಲ್ಲಿ ಭಯದಲ್ಲಿ ಕೆಲಸ ಮಾಡುತ್ತಾರೆ, ನಿರ್ವಹಣೆಗೆ ಹಣ ಬರೋದಿಲ್ಲವೇ ಎಂದು ಪ್ರಶ್ನಿಸಿದರು. ಈ ಬಗ್ಗೆ ಕ್ರಮ ವಹಿಸುವುದಾಗಿ ಅಧಿಕಾರಿಗಳು ತಿಳಿಸಿದರು.

ಮುಖಂಡ ದಿವಾಕರ್ ಭಟ್ ಭಂಡಿಗಡಿ ಮಾತನಾಡಿ, ‘ಲೈನ್‌ಮ್ಯಾನ್‌ಗಳು ಈ ಬಾರಿ ಮಳೆಗಾಲದಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ತಾಲ್ಲೂಕಿನ ಜನರ ಪರವಾಗಿ ಧನ್ಯವಾದಗಳು. ಜಂಗಲ್ ಕಟಿಂಗ್ ಸಮರ್ಪಕವಾಗಿ ಆಗುತ್ತಿಲ್ಲ, ಅರಣ್ಯ ಇಲಾಖೆ ಜಂಗಲ್ ಕಟಿಂಗ್‌ಗೆ ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಶಾಸಕರ ಗಮನಕ್ಕೆ ತರಬೇಕು, ಸದನದಲ್ಲಿಯೂ ಮಾತನಾಡಿಸಬೇಕು’ ಎಂದರು.

ಡಿಎಸ್ಎಸ್ ಮುಖಂಡ ರವೀಂದ್ರ ಕವಡೆಕಟ್ಟೆ ಮಾತನಾಡಿ, ಭಂಡಿಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಹೊಸತೋಟದಲ್ಲಿ ವಿದ್ಯುತ್ ಕಂಬ ಸ್ಥಳಾಂತರಕ್ಕೆ ಪಂಚಾಯಿತಿ ವತಿಯಿಂದ ₹11 ಸಾವಿರ ನೀಡುವುದಾಗಿ ಹೇಳಿದ್ದರು. ಇದೀಗ ಗುತ್ತಿಗೆದಾರರು ತಮಗೆ ಹಣ ಬಂದಿಲ್ಲ ಎಂದು ನಮ್ಮ ಬಳಿ ಹಣ ಕೇಳುತ್ತಿದ್ದಾರೆ ಎಂದರು. ಈ ಬಗ್ಗೆ ಕೆಡಿಪಿ ಸದಸ್ಯ ಚಿಂತನ್ ಬೆಳಗೊಳ, ಪಿಡಿಒ ಅವರಿಗೆ ದೂರವಾಣಿ ಕರೆಮಾಡಿ ವಿಚಾರಿಸಿದಾಗ ಹಣ ಪಾವತಿಸುವುದಾಗಿ ಪಿಡಿಒ ತಿಳಿಸಿದರು.

ಅಪಾಯಕಾರಿ ತಂತಿ ಮಾರ್ಗ ಸ್ಥಳಾಂತರಕ್ಕೆ ಹರಂದೂರು ಪಂಚಾಯಿತಿ ಸದಸ್ಯ ಯು.ಸಿ.ಚೇತನ್, ಸ್ಥಳೀಯ ಮುಖಂಡ ಸುಜನ್ ಒತ್ತಾಯಿಸಿದರು.

ಮೆಸ್ಕಾಂ ಕೊಪ್ಪ ಶಾಖಾಧಿಕಾರಿ ಶಶಿಕಾಂತ್ ರಾಥೋಡ್, ಹರಿಹರಪುರ ಶಾಖಾಧಿಕಾರಿ ಸೋಮಶೇಖರ್, ಜಯಪುರ ಶಾಖಾಧಿಕಾರಿ ಪ್ರಶಾಂತ್ ಇದ್ದರು.

‘ವಿದ್ಯುತ್ ಪರಿವರ್ತಕ ಸರಿಪಡಿಸಿ’

ಕೆಸುವೆ ರಸ್ತೆಯಲ್ಲಿನ ಸ್ಮಶಾನ ಹತ್ತಿರ ವಿದ್ಯುತ್ ಪರಿವರ್ತಕ ಬೀಳುವ ಹಂತದಲ್ಲಿದೆ ಅದನ್ನು ಸರಿಪಡಿಸಿ ಎಂದು ಸಾಮಾಜಿಕ ಕಾರ್ಯಕರ್ತ ಚಿಕ್ಕನಗುಂಡಿ ಅಬ್ರಹಾಂ ಹೇಳಿದರು. ಎಇಇ ಸುಧೀರ್ ಪಟೇಲ್ ಮಾತನಾಡಿ ‘ನಾರ್ವೆಗೆ ಲಿಂಕ್ ಲೈನ್ ಕೆಲಸ ಪ್ರಗತಿಯಲ್ಲಿದೆ. ಕೊಪ್ಪದಲ್ಲಿ ವಿದ್ಯುತ್ ಪರಿವರ್ತಕ ರಿಪೇರಿ ಕೇಂದ್ರ ಆರಂಭಕ್ಕೆ ಪತ್ರ ಬಂದಿದೆ. ಜಯಪುರ ಭಾಗಕ್ಕೆ ಒಬ್ಬರು ಲೈನ್‌ಮ್ಯಾನ್ ಬಂದಿದ್ದಾರೆ. ಇಲಾಖೆಗೆ ಹೊಸ ಲಾರಿ ಬಂದಿದೆ. ತಾಲ್ಲೂಕಿನಲ್ಲಿ 16 ಪರಿವರ್ತಕಗಳ ಬದಲಾವಣೆಗೆ ಅವಕಾಶ ಸಿಕ್ಕಿದೆ. ಗಂಗಾ ಕಲ್ಯಾಣ 2 ಪೆಂಡಿಂಗ್ ಇದ್ದು ಶೀಘ್ರದಲ್ಲಿ ಮುಕ್ತಾಯಗೊಳಿಸಲಾಗುತ್ತದೆ ಎಂದು ಸಭೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.