ಚಿಕ್ಕಮಗಳೂರು: ‘ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ವೇಳೆ ತಲವಾರು ಝಳಪಿಸಿದ್ದು ಮುಸ್ಲಿಮರೇ ಹೊರತು ಹಿಂದೂಗಳಲ್ಲ’ ಎಂದು ಹೇಳಿದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಮುಸ್ಲಿಮರ ವಿರುದ್ಧ ‘ತುರುಕರು’ ಎಂಬ ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೆಟ್ರೋಲ್ ಬಾಂಬ್ ತಯಾರು ಮಾಡಿದವರ ಮನೆಗೆ ಬುಲ್ಡೋಜರ್ ನುಗ್ಗಿಸಬೇಕಿತ್ತು. ಅದನ್ನು ಮಾಡದೆ ಗಣಪತಿ ಕೂರಿಸಿದವರನ್ನೇ ಎ–1 ಆರೋಪಿ ಮಾಡಲಾಗಿದೆ’ ಎಂದರು.
‘ಅದೊಂದು ಆಕಸ್ಮಿಕ ಘಟನೆ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕು. ಶಾಂತಿಸಭೆ ಹೆಸರಿನಲ್ಲಿ ಈಗ ತೇಪೆ ಹಾಕುವ ಕೆಲಸ ಮಾಡಲು ಹೊರಟಿದೆ. ಕಾಂಗ್ರೆಸ್‌ಗೆ ಮತ ಹಾಕಲಿ ಎಂಬ ಕಾರಣಕ್ಕೆ ಅವರ ಟೋಪಿಯನ್ನು ಇವರೂ ಹಾಕಿಕೊಂಡು ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ತಾಲಿಬಾನ್‌ಗಳು ಅವರೋ, ಕಾಂಗ್ರೆಸ್‌ನವರೊ ಎಂಬುದು ಗೊತ್ತಾಗದಂತೆ ನಾಟಕವಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
‘ಮತಾಂತರ ಓಲೈಕೆ ಮಾಡುತ್ತಿರುವುದರಿಂದಲೇ ಮುಸ್ಲಿಮರು ಹದ್ದು ಮೀರುತ್ತಿದ್ದಾರೆ. ರಾಷ್ಟ್ರೀಯತೆ ಜತೆ ಅವರು ಒಂದಾಗುವುದಿಲ್ಲ. ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂದೂ ಸ್ವತಃ ಅಂಬೇಡ್ಕರ್ ಅವರೇ ಹೇಳಿದ್ದರು. ಆಗಿನ ಕಾಂಗ್ರೆಸ್ ನಾಯಕರು ಮಾಡಿದ ತಪ್ಪಿನಿಂದ ಈಗ ಹಿಂದೂಗಳು ತೊಂದರೆ ಅನುಭವಿಸಬೇಕಾಗಿದೆ’ ಎಂದರು.
‘ವಕ್ಫ್ ಕಾಯ್ದೆ ತಿದ್ದುಪಡಿ ಮೂಸೂದೆಯನ್ನು ವಿರೋಧಿಸಲಾಗುತ್ತಿದೆ. ಸಂವಿಧಾನ ವಿರೋಧಿಯಾದ ಕಾಯ್ದೆಯನ್ನು ಆಗಲೂ ಕಾಂಗ್ರೆಸ್‌ನವರೇ ಜಾರಿಗೆ ತಂದಿದ್ದಾರೆ. ವಕ್ಫ್ ಮಂಡಳಿ ಪ್ರಕಾರ ವಿಧಾನಸೌಧ, ಹೈಕೋರ್ಟ್ ಎಲ್ಲವೂ ವಕ್ಫ್ ಆಸ್ತಿ. ಈಗ ಶೇ 15ರಷ್ಟು ಜನಸಂಖ್ಯೆ ಇದೆ ಎಂಬ ಕಾರಣಕ್ಕೆ ಸುಮ್ಮನಿದ್ದಾರೆ. ಜನಸಂಖ್ಯೆ ಶೇ 30ಕ್ಕೆ ಏರಿಕೆಯಾದ ಕೂಡಲೇ ಎಲ್ಲರನೂ ಓಡಿಸುತ್ತಾರೆ. ವಿಧಾನಸೌಧವನ್ನೂ ನಮಾಜ್ ಮಾಡುವ ಜಾಗವಾಗಿ ಮಾಡಿಕೊಳ್ಳುತ್ತಾರೆ’ ಎಂದು ಹೇಳಿದರು.
‘ಪಾಕಿಸ್ತಾನ ಆದಿಯಾಗಿ ತುರುಕರೇ ಇರುವ ದೇಶಗಳಲ್ಲಿ ಈ ರೀತಿಯ ಕಾಯ್ದೆ ಇಲ್ಲ. ಭಾರತದಲ್ಲಿ ಹಿಂದೂ ದೇವಾಲಯಗಳ ಹೆಸರಿನಲ್ಲಿದ್ದ ಎಲ್ಲಾ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಯಾವ ದೇವರ ಹೆಸರಿನಲ್ಲೂ ಜಾಗವೇ ಇಲ್ಲ. ನಮ್ಮ ಸಂವಿಧಾನ ತುರುಕರನ್ನು ಎಲ್ಲರಿಗಿಂತ ಮೇಲೆ ಕೂರಿಸಿಲ್ಲ. ಕಾಂಗ್ರೆಸ್‌ನವರು ಅವರನ್ನು ಮೇಲೆ ಕೂರಿಸಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಹುಲ್ ಗಾಂಧಿ ಅವರು ವಿದೇಶದಲ್ಲಿ ನಿಂತು ನಮ್ಮ ದೇಶವನ್ನು ಜರಿದಿದ್ದಾರೆ. ಅವರು ಲೋಕಸಭೆ ವಿರೋಧ ಪಕ್ಷದ ನಾಯಕರೋ, ಇಡೀ ಭಾರತದ ವಿರೋಧ ಪಕ್ಷದ ನಾಯಕರೋ ಅರ್ಥವಾಗುತ್ತಿಲ್ಲ’ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ದರಗಳು ಏರಿಕೆಯಾಗಿವೆ. ಲಂಚದ ದರವೂ ಏರಿಕೆಯಾಗಿದೆ. ಹಾಲಿನ ದರವನ್ನು ಈ ಹಿಂದೆಯೇ ಏರಿಕೆ ಮಾಡಲಾಗಿದೆ. ಆದರೆ, ಅದನ್ನು ರೈತರಿಗೆ ವರ್ಗಾವಣೆ ಮಾಡಿಲ್ಲ. ಈಗ ಮತ್ತೆ ದರ ಏರಿಕೆ ಮಾಡುವುದು ಸರಿಯಲ್ಲ. ರೈತರಿಗೆ ಸರ್ಕಾರದಿಂದ ಸಬ್ಸಿಡಿ ಕೊಡಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.